ರಾಯಚೂರು ಗ್ರಾಮೀಣ, ನಗರ ಕ್ಷೇತ್ರಗಳಲ್ಲಿ ಸಂಚಾರ, ಎರಡು ಕಡೆ ಲಂಚ್ ಪಾಯಿಂಟ್, ವಾಲ್‌ಕಾಟ್ ಮೈದಾನದಲ್ಲಿ ಸೆಮಿ ಕಾರ್ನರ್ ಸಮಾವೇಶ: ಎನ್.ಎಸ್ ಭೋಸ್‌ರಾಜು
ರಾಯಚೂರು(ಅ.20): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಪಾದಯಾತ್ರೆ ಅ.21 ಶುಕ್ರವಾರದಿಂದ ಮೂರು ದಿನಗಳ ಕಾಲ ರಾಯಚೂರು ಗ್ರಾಮೀಣ ಮತ್ತು ನಗರ ಕ್ಷೇತ್ರಗಳಲ್ಲಿ ಸಂಚರಿಸಲಿದ್ದು, ಈ ವೇಳೆ ಎರಡು ಕಡೆ ಲಂಚ್ ಪಾಯಿಂಟ್, ಅ.22 ರಂದು ಸಂಜೆ ನಗರದ ಬಸವೇಶ್ವರ ವೃತ್ತದಲ್ಲಿರುವ ವಾಲ್‌ಕಾಟ್ ಮೈದಾನದಲ್ಲಿ ಸೆಮಿ ಕಾರ್ನರ್ ಸಮಾವೇಶವನ್ನು ಏರ್ಪಡಿಸಲಾಗಿದೆ ಎಂದು ಎನ್.ಎಸ್ ಭೋಸ್‌ರಾಜು ತಿಳಿಸಿದರು.
ನಗರದ ಡಿಸಿಸಿ ಕಚೇರಿಯಲ್ಲಿ ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ರಾಜ್ಯ ಪ್ರವೇಶಿಸಲಿರುವ ಪಾದಯಾತ್ರೆ ರಾಯಚೂರು ತಾಲೂಕಿನ ತುಂಗಭದ್ರಾ ನದಿ ಸೇತುವೆಯಿಂದ ಕೃಷ್ಣಾ ನದಿ ಸೇತುವೆವರೆಗೂ 53 ಕಿ.ಮೀ. ವರೆಗೆ ನಡೆಯಲಿದ್ದು, 21ರಂದು ಯರಗೇರಾದಲ್ಲಿ ಕಾರ್ಮಿಕರೊಂದಿಗೆ ಹಾಗೂ 22 ರಂದು ಬೃಂದಾವನ ಹೋಟೆಲ್‌ನಲ್ಲಿ ಮಹಿಳೆಯರು, ಇತರರೊಂದಿಗೆ ರಾಹುಲ್‌ಗಾಂಧಿ ಸಭೆ ನಡೆಸಲಿದ್ದಾರೆ. ಯರಗೇರಾದಲ್ಲಿ ಹಾಗೂ ಯರಮರಸ್‌ನಲ್ಲಿ ಅವರು ವಾಸ್ತವ್ಯ ಹೂಡಲಿದ್ದಾರೆ ಎಂದರು.
undefined
Bharat Jodo Yatra: ಮೊದಲ ಬಾರಿಗೆ ಮಂತ್ರಾಲಯಕ್ಕೆ ಗಾಂಧಿ ಕುಟುಂಬ ಸದಸ್ಯ ಭೇಟಿ
ರಾಜ್ಯದಲ್ಲಿ ಈ ಪಾದಯಾತ್ರೆ ಮುಕ್ತಾಯವಾಗಿ ರಾಯಚೂರು ಜಿಲ್ಲೆಯಿಂದ ತೆಲಂಗಾಣ ರಾಜ್ಯಕ್ಕೆ ಪ್ರವೇಶಿಸಲಿದೆ. ಭಾರತ ಐಕ್ಯತಾ ಯಾತ್ರೆ ಇದೇ ಸೆ.5 ರಿಂದ ಆರಂಭಗೊಂಡಿದ್ದು, ಅ.20ರವರೆಗೂ ಆಂಧ್ರಪ್ರದೇಶದಲ್ಲಿ ಯಾತ್ರೆ ನಡೆಯಲಿದೆ. ಕಾಂಗ್ರೆಸ್ ಪಕ್ಷದ ಮುಖಂಡರಾದ ಕೆ.ಸಿ.ವೇಣುಗೋಪಾಲ, ಸುರ್ಜೆವಾಲ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಈಶ್ವರ ಖಂಡ್ರೆ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ. ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಪದಗ್ರಹಣ ಕಾರ್ಯಕ್ರಮ ನಿಮಿತ್ತ ಬರುವುದು ಅಂತಿಮಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಪಕ್ಷದ ಮುಖಂಡೆ ಪ್ರಿಯಾಂಕಾ ಗಾಂಧಿ ಬರುವ ನಿರೀಕ್ಷೆಯಿದ್ದು, ಇನ್ನೂ ಅಂತಿಮಗೊಂಡಿಲ್ಲ. ಅ.22ರಂದು ಭಾಗಿಯಾಗುವ ನಿರೀಕ್ಷೆ ಇದೆ. ಏಮ್ಸ್ ಹೋರಾಟ ಸಮಿತಿಗೆ ಭೇಟಿ ನೀಡುವ ಕುರಿತು ರಾಹುಲ್‌ಗಾಂಧಿಯವರ ಗಮನ ತರಲಾಗುವುದು. ಆದರೆ, ಈ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ ಎಂದು ತಿಳಿಸಿದರು.
ಬಳ್ಳಾರಿಯಲ್ಲಿ ಯಾತ್ರೆ ಸಾವಿರ ಕಿ.ಮೀ. ಪೂರೈಸಿದ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಸಮಾವೇಶ ನಡೆಸಲಾಯಿತು. ಆದರೆ, ಉಳಿದೆಡೆ ಎಲ್ಲಿಯೂ ಬಹಿರಂಗ ಸಮಾವೇಶಗಳನ್ನು ನಡೆಸಿಲ್ಲ ಎಂದು ಹೇಳಿದರು.
ದಲಿತರ ಮನೆಯಲ್ಲಿ ಜೋಳದ ರೊಟ್ಟಿ ಸವಿದ ಸಚಿವ ಅಶೋಕ್
ರೈತರೊಂದಿಗೆ, ಕಾರ್ಮಿಕರೊಂದಿಗೆ, ವಿವಿಧ ವರ್ಗಗಳ ಜನರೊಂದಿಗೆ ಸಂವಾದಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲೂ ಯಾತ್ರೆ ಎರಡು ದಿನ ಸಾಗುವುದರಿಂದ ರೈತರು ಮತ್ತು ಹಿಂದುಳಿದ ವರ್ಗಗಳ ಜನರೊಂದಿಗೆ ಸಭೆ ನಡೆಸಲು ನಿರ್ಧರಿಸಲಾಗಿದೆ. ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಅವರೇ ವಾರ್ಡ್ ರೂಂ ಉಸ್ತುವಾರಿ ವಹಿಸಿಕೊಂಡಿದ್ದು, ಕಾರ್ಯಕ್ರಮ ರೂಪಿಸುತ್ತಿದ್ದಾರೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಿಸಿಸಿ ಜಿಲ್ಲಾಧ್ಯಕ್ಷ ಬಿ.ವಿ.ನಾಯಕ, ಶಾಸಕ ಬಸನಗೌಡ ದದ್ದಲ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಾಗವೇಣಿ ಪಾಟೀಲ್, ಜಯವಂತರಾವ್ ಪತಂಗೆ, ಕೆ.ಶಾಂತಪ್ಪ, ಅಬ್ದುಲ್ ಕರೀಂ, ರುದ್ರಪ್ಪ ಅಂಗಡಿ, ನವನೀತ ಆದೋನಿ ಹಾಗೂ ಮತ್ತಿತರರು ಇದ್ದರು.