* ಪಾಲಿಕೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಅನ್ಯ ಪಕ್ಷಗಳತ್ತ
* ಬಿಜೆಪಿಗರು ಕಾಂಗ್ರೆಸ್‌ನತ್ತ, ಕಾಂಗ್ರೆಸಿಗರು ಬಿಜೆಪಿಯತ್ತ
* ಕೋನರಡ್ಡಿ ಜೆಡಿಎಸ್‌ನಿಂದ ಕಾಂಗ್ರೆಸ್ಸಿಗೆ ಪಕ್ಷಾಂತರವಾದ ಬಳಿಕ ಜೋರಾಗಿಯೇ ಶುರುವಾದ ಪಕ್ಷಾಂತರ ಪರ್ವ
ಶಿವಾನಂದ ಗೊಂಬಿ
ಹುಬ್ಬಳ್ಳಿ(ಫೆ.15): ವಿಧಾನಸಭೆ ಚುನಾವಣೆಗೆ(Assembly Elections) ಇನ್ನೂ ಒಂದು ವರ್ಷ ಬಾಕಿಯಿರುವಾಗಲೇ ಈಗಿನಿಂದಲೇ ಧಾರವಾಡ(Dharwad) ಜಿಲ್ಲೆಯಲ್ಲಿ ಎರಡನೆಯ ಹಂತದ ನಾಯಕರ ಪಕ್ಷಾಂತರ ಪರ್ವ ಶುರುವಾಗಿದೆ!
ಕಾಂಗ್ರೆಸ್ಸಿಗರು(Congress) ಬಿಜೆಪಿಯತ್ತ(BJP), ಬಿಜೆಪಿಗರು ಕಾಂಗ್ರೆಸ್‌ನತ್ತ ವಲಸೆ ಆರಂಭಿಸಿದ್ದಾರೆ. ಇದು ಒಂದೇ ಕ್ಷೇತ್ರಕ್ಕೆಂದು ಸೀಮಿತವಾಗಿಲ್ಲ. ಜಿಲ್ಲಾದ್ಯಂತ ಶುರುವಾಗಿದ್ದು, ಘಟಾನುಘಟಿಗಳೇ ಗುಳೇ ಹೊರಟಿದ್ದಾರೆ.
ಡಿಸೆಂಬರ್‌ನಲ್ಲಿ ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ(NH Konareddy) ಜೆಡಿಎಸ್‌ನಿಂದ(JDS) ಕಾಂಗ್ರೆಸ್ಸಿಗೆ ಪಕ್ಷಾಂತರವಾದ ಬಳಿಕ ಪಕ್ಷಾಂತರ(Defection) ಪರ್ವ ಕೊಂಚ ಜೋರಾಗಿಯೇ ಇದೆ. ಮಾಜಿ ಮೇಯರ್, ಪಾಲಿಕೆ ಮಾಜಿ ಸದಸ್ಯರು, ಪ್ರಮುಖ ಸಮುದಾಯದ ಮುಖಂಡರೆಲ್ಲರೂ ಜಪ್ಪಿಂಗ್ ಮಾಡುತ್ತಿದ್ದಾರೆ.
Hijab Row ಡಿಕೆ ಶಿವಕುಮಾರ್‌ಗೆ ಡಿಚ್ಚಿ ಕೊಟ್ಟ ಜಮೀರ್ ಅಹಮ್ಮದ್ ಖಾನ್
ಪ್ರಕಾಶ ಕ್ಯಾರಕಟ್ಟಿ:
ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಕಾಂಗ್ರೆಸ್‌ನಲ್ಲಿದ್ದ, ಪಕ್ಷ ಸಂಘಟಿಸುವಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದ ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿಇದೀಗ ಬಿಜೆಪಿಯತ್ತ ವಾಲಿದ್ದಾರೆ. 7 ಬಾರಿ ಪಾಲಿಕೆ ಚುನಾವಣೆಯಲ್ಲಿ(HDMC) ಸ್ಪರ್ಧಿಸಿರುವ ಇವರು 5 ಬಾರಿ ಗೆಲುವು, 2 ಬಾರಿ ಪರಾಭವಗೊಂಡವರು. ಒಂದು ಬಾರಿ ಮೇಯರ್ ಕೂಡ ಆಗಿದ್ದವರು.
ಇತ್ತೀಚಿಗೆ ನಡೆದ ಪಾಲಿಕೆ ಚುನಾವಣೆಯಲ್ಲಿ ಮೊದಲಿಗೆ ಪಕ್ಷದಲ್ಲಿನ ಬಣ ರಾಜಕೀಯದಿಂದಾಗಿ(Politics) ಇವರಿಗೆ ಪಕ್ಷ ಟಿಕೆಟ್‌ನ್ನೇ ಕೊಟ್ಟಿರಲಿಲ್ಲ. ಕೊನೆಗೆ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದರೂ ಗೆಲುವು ಸಾಧ್ಯವಾಗಲಿಲ್ಲ. ಇವರ ವಿರುದ್ಧ ಪಕ್ಷೇತರ ಅಭ್ಯರ್ಥಿ ಚೇತನ ಹಿರೇಕೆರೂರು ಗೆಲುವು ಸಾಧಿಸಿದರು. ಕಾಂಗ್ರೆಸ್ಸಿಗರೇ ನನ್ನನ್ನು ಸೋಲಿಸಿದವರು ಎಂಬುದು ಇವರ ಬಹಿರಂಗ ಆರೋಪ. ಈ ಕಾರಣದಿಂದ ಇದೀಗ ಬಿಜೆಪಿಯತ್ತ ಮುಖ ಮಾಡಿದ್ದಾರೆ. ಫೆ. 26ರಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸಮ್ಮುಖದಲ್ಲಿ ಬಿಜೆಪಿ ಸೇರಲಿದ್ದಾರೆ ಎಂಬುದು ಮೂಲಗಳು ತಿಳಿಸುತ್ತವೆ.
ಹಿರೇಕೆರೂರ:
ಇನ್ನು ಇವರ ವಿರುದ್ಧ ಪಕ್ಷೇತರನಾಗಿ ಗೆಲವು ಸಾಧಿಸಿದ್ದ ಚೇತನ ಹಿರೇಕೆರೂರು ಭಾನುವಾರವಷ್ಟೇ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಇವರನ್ನು ಸ್ವಾಗತಿಸಿದ್ದಾರೆ.
ಪಾಲಿಕೆ ಮಾಜಿ ಸದಸ್ಯ, ಬಿಜೆಪಿ ಮುಖಂಡ ಲಕ್ಷ್ಮಣ ಗಂಡಗಾಳೇಕರ್ ಶೀಘ್ರದಲ್ಲೇ ಕಾಂಗ್ರೆಸ್ ಸೇರಲಿದ್ದಾರೆ. ಕಳೆದ ಬಾರಿ ಇವರ ಪತ್ನಿಗೆ ಟಿಕೆಟ್ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಪಕ್ಷಕ್ಕೆ ಸಡ್ಡು ಹೊಡೆದು ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ ಗೆಲವು ಸಾಧ್ಯವಾಗಲಿಲ್ಲ. ಅದಾದ ಬಳಿಕ ಇವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಇದರಿಂದ ಬೇಸತ್ತು ಇವರು ಕಾಂಗ್ರೆಸ್ ಸೇರುವ ತಯಾರಿ ನಡೆಸಿದ್ದಾರೆ. ಆದರೆ ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲವಂತೆ. ಇದಲ್ಲದೇ, ಪಾಲಿಕೆ ಮಾಜಿ ಸದಸ್ಯ ಹೂವಪ್ಪ ದಾಯಗೋಡಿ, ಗೋಪಾಲ ಎಣ್ಣಿಚವಂಡಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ.
Karnataka Politics ಒಂದೇ ಫೋನ್ ಕಾಲ್, ಸಿಎಂ ಇಬ್ರಾಹಿಂ ಯುಟರ್ನ್, ಜೆಡಿಎಸ್‌ಗೆ ಬಿಗ್ ಶಾಕ್
ಬಾಗೋಡಿ:
ಅತ್ತ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜಿಲ್ಲೆಗೆ ಕಾಲಿಡದಂತೆ ಕೋರ್ಟ್ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಲ್ಲಿ ಯಾರು ಮುಖಂಡರೇ ಇಲ್ಲದಂತಾಗಿದೆ. ತಮ್ಮ ಗೋಳು ಕೇಳುವವರು ಯಾರು ಇಲ್ಲದ ಕಾರಣದಿಂದ ಕಾಂಗ್ರೆಸ್‌ನಲ್ಲೇ ಗುರುತಿಸಿಕೊಂಡಿದ್ದ ಬಾಗೋಡಿ ಸೇರಿದಂತೆ ಅವರ ನೂರಾರು ಬೆಂಬಲಿಗರು ಇತ್ತೀಚಿಗೆ ಶಾಸಕ ಅಮೃತ ದೇಸಾಯಿ ಸಮ್ಮುಖದಲ್ಲಿ ಬಿಜೆಪಿ ಸೇರಿರುವುದುಂಟು.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಆಹ್ವಾನಗಳು ಬಂದಿವೆ. ಈ ಬಗ್ಗೆ ಮಾತುಕತೆಯೂ ಆಗಿದೆ. ಶೀಘ್ರದಲ್ಲೇ ಬಿಜೆಪಿ ಸೇರುವ ಕುರಿತು ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ ಅಂತ ಕಾಂಗ್ರೆಸ್ ಮುಖಂಡ ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ ತಿಳಿಸಿದ್ದಾರೆ.
ಕಾಂಗ್ರೆಸ್ ಸೇರುವಂತೆ ಆ ಪಕ್ಷದವರು ಆಹ್ವಾನ ನೀಡಿದ್ದಾರೆ. ಆದರೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಬೆಂಬಲಿಗರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದೇನೆ ಅಂತ ಬಿಜೆಪಿ ಮುಖಂಡ ಪಾಲಿಕೆ ಮಾಜಿ ಸದಸ್ಯ ಲಕ್ಷ್ಮಣ ಗಂಡಗಾಳೇಕರ್ ಹೇಳಿದ್ದಾರೆ.