Karnataka Congress ಶಾಸಕ ಜಮೀರ್ ಅಹ್ಮದ್‌ ಖಾನ್‌ಗೆ ಬಿಗ್ ಶಾಕ್ ಕೊಟ್ಟ ಕೆಪಿಸಿಸಿ

By Suvarna News  |  First Published Feb 14, 2022, 9:51 PM IST

* ಕೆಪಿಸಿಸಿಯಿಂದ ಶಾಸಕ ಜಮೀರ್ ಅಹ್ಮದ್‌ ಖಾನ್‌ಗೆ ಬಿಗ್ ಶಾಕ್
* ಹಿಜಾಬ್‌ ಪರ ಮಾತನಾಡಲು ಹೋಗಿ ವಿವಾದ ಸೃಷ್ಟಿಸಿಕೊಂಡಿರುವ ಜಮೀರ್
* ಜಮೀರ್ ಹೇಳಿಕೆ ಕಾಂಗ್ರೆಸ್ ಪಕ್ಷ ಒಪ್ಪುವುದಿಲ್ಲ ಎಂದ ಡಿಕೆಶಿ


ಬೆಂಗಳೂರು, (ಫೆ.14) : ಹಿಜಾಬ್ ವಿವಾದ ವಿಚಾರವಾಗಿ ಕಾಂಗ್ರೆಸ್ ಎಚ್ಚರಿಕೆ ಹೆಜ್ಜೆ ಇಟ್ಟಿತ್ತು. ಯಾವ ನಾಯಕರಿಗೂ ಬಹಿರಂಗವಾಗಿ ಮಾತನಾಡದಂತೆ ಅಪ್ಪಣೆ ಕೂಡ ಮಾಡಿತ್ತು. ಆದ್ರೆ ಜಮೀರ್ ಅಹ್ಮದ್ ನೀಡಿದ ಹೇಳಿಕೆ ಕೈ ಪಡೆಗೆ ನುಂಗಲಾರದ ತುಪ್ಪ ಆಗಿ ಪರಿಣಮಿಸಿದೆ. 

ಜಮೀರ್‌ಗೆ ನೋಟೀಸ್ ಜಾರಿ 
ವಿವಾದಾತ್ಮಕ ಹೇಳಿಕೆ ಬಗ್ಗೆ ವಿವರಣೆ ಕೇಳಿ ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ನೋಟೀಸ್ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಸೂಚನೆ ಮೇರೆಗೆ ಕೆಪಿಸಿಸಿ ಶಿಸ್ತು ಸಮಿತಿ ಜಮೀರ್‌ ಅಹಮ್ಮದ್ ಖಾನ್‌ಗೆ ನೋಟೀಸ್ ಜಾರಿ ಮಾಡಿದೆ.

Tap to resize

Latest Videos

Hijab Row: ಜಮೀರ್ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಒಪ್ಪುವುದಿಲ್ಲ, ಅವರು ಜನರ ಕ್ಷಮೆ ಕೇಳಬೇಕು: ಡಿಕೆಶಿ

ಜಮೀರ್ ಹೇಳಿಕೆಯ ಬಗ್ಗೆ ಮಾಹಿತಿ ಕಲೆ ಹಾಕಿರುವ ಕೆಪಿಸಿಸಿ, ಮಹಿಳೆಯರ ಬಗ್ಗೆ ಜಮೀರ್ ಅಹಮದ್ ಕೇವಲವಾಗಿ ಮಾತಾಡಿದ್ದಾರೆ. ಕಾಂಗ್ರೆಸ್ ಪಕ್ಷ ಮಹಿಳೆಯರು, ಪುರುಷರನ್ನ ಸಮಾನವಾಗಿ ಕಾಣ್ತಿದೆ. ನಿಮ್ಮ ಹೇಳಿಕೆಯಿಂದ ಪಕ್ಷಕ್ಕೆ ಹಾನಿ ಉಂಟಾಗಲಿದೆ. ತಕ್ಷಣ ಸ್ಪಷ್ಟನೆ ನೀಡುವಂತೆ  ಕೆಪಿಸಿಸಿ ಶಿಸ್ತು ಸಮಿತಿ ನೋಟೀಸ್ ನೀಡಿದೆ.

ಸಮರ್ಥಿಸಿಕೊಂಡ ಜಮೀರ್
ಹಾವೇರಿ(Haveri) ಜಿಲ್ಲೆ ಶಿಗ್ಗಾಂವಿ ತಾಲೂಕಿನ ಹುಲಗೂರು ಗ್ರಾಮದ ಖಾದ್ರಿ ದರ್ಗಾ ಬಳಿ ಮಾತನಾಡಿರುವ ಜಮೀರ್ , ಸೌಂದರ್ಯ ಕಾಣದಿರಲು ಹಾಗೂ ತಮ್ಮ ರಕ್ಷಣೆಗಾಗಿ ಹಿಜಾಬ್‍ನ್ನು ಧರಿಸುತ್ತಾರೆ ಎಂದಿದ್ದೆ. ಈ ನನ್ನ ಹೇಳಿಕೆಯನ್ನು ತಪ್ಪಾಗಿ ತಿಳಿದುಕೊಂಡು ಗೊಂದಲ ಸೃಷ್ಟಿ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡರು.

ಹಿಜಾಬ್‌ ವಿವಾದ: ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಶಾಸಕ ಜಮೀರ್

ನಾನು ಹಿಜಾಬ್ ಹಾಕದೇ ಇದ್ದರೆ ರೆಪ್ ಆಗುತ್ತೆ ಎಂದು ಹೇಳಿಲ್ಲ. ಬೇರೆಯವರು ಗೊಂದಲ ಸೃಷ್ಟಿ ಮಾಡಿಕೊಂಡರೆ ನಾನು ಏನು ಮಾಡಲಿ? ಹಿಜಬ್ ಹಾಕಿದರೆ ಬ್ಯೂಟಿ ಕಾಣಲ್ಲ, ಸೇಫ್ಟಿಗಾಗಿ ಹಾಕ್ಕೊತಾರೆ ಎಂದು ಹೇಳಿದ್ದೆ. ಬೇರೆಯವರ ಕಣ್ಣು ಬೀಳಬಾರದು ಎಂದು ತಲೆ ಮತ್ತು ಮುಖವನ್ನು ಮುಚ್ಚಿಕೊಳ್ಳುತ್ತಾರೆ ಅಷ್ಟೇ ಎಂದು ಹೇಳಿದರು.

ನಮ್ಮಲ್ಲಿ ರೇಪ್ ರೆಟ್ ಜಾಸ್ತಿ ಇದೆ. ಈ ಹೇಳಿಕೆಯನ್ನು ತಪ್ಪಾಗಿ ತಿಳಿದುಕೊಂಡು ಗೊಂದಲ ಸೃಷ್ಟಿ ಮಾಡಿಕೊಳ್ಳಲಾಗಿದೆ. ಕೆಲವರು ಹಿಜಾಬ್ ಹಾಕುತ್ತಾರೆ, ಕೆಲವರು ಹಾಕಲ್ಲ. ಇಸ್ಲಾಂನಲ್ಲಿ ಹಿಜಾಬ್ ಹಾಕಬೇಕು ಎಂದು ಇದೆ ಎಂದು ತಿಳಿಸಿದರು

ಜಮೀರ್ ಅಹ್ಮದ್ ಹೇಳಿದ್ದೇನು?
ಹಿಜಾಬ್‌ ಎನ್ನುವುದು ಮುಸಲ್ಮಾನದಲ್ಲಿ ಪರದೆ ಎಂದರ್ಥ. ಇದನ್ನು ಯಾರು ವಿರೋಧ ಮಾಡುತ್ತಿದ್ದಾರೋ ಅವರ ಮನೆಯಲ್ಲಿ ಹೆಣ್ಣು ಮಕ್ಕಳು ಇಲ್ಲ ಎನ್ನಿಸುತ್ತದೆ. ಹೆಣ್ಣುಮಕ್ಕಳಿದ್ದರೆ ಅವರಿಗೆ ಇದರ ಬಗ್ಗೆ ಗೊತ್ತಿರುತ್ತಿತ್ತು. ಮಹಿಳೆಯರ ಸೌಂದರ್ಯವನ್ನು ಪರ ಪುರುಷರು ನೋಡಬಾರದು, ಅವರಿಂದ ಮುಚ್ಚಿಡಲು ಹಿಜಾಬ್‌, ಬುರ್ಕಾ ಬಳಸಲಾಗುತ್ತದೆ. ನನ್ನ ಪ್ರಕಾರ ಪ್ರಸ್ತುತ ಭಾರತದಲ್ಲೇ ಅತೀ ಹೆಚ್ಚಿನ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಇದಕ್ಕೆ ಕಾರಣವೇನು? ಬುರ್ಕಾ, ಪರದೆಯಲ್ಲಿ ಇರದೇ ಇರುವುದೆ ಇದಕ್ಕೆ ಕಾರಣವಾಗಿದೆ. ಹಿಜಾಬ್‌ ಇವತ್ತು, ನಿನ್ನೆಯ ವಿಚಾರವಲ್ಲ. ಅನಾದಿ ಕಾಲದಿಂದ ನಡೆದುಬಂದ ಪದ್ಧತಿ. ಅಷ್ಟಕ್ಕೂ ಹಿಜಾಬ್‌ ಕಡ್ಡಾಯವಲ್ಲ. ಯಾರಿಗೆ ಇಷ್ಟವಿಲ್ಲವೋ ಅವರು ಧರಿಸದಿದ್ದರೂ ನಡೆಯುತ್ತದೆ. ಯಾರಿಗೆ ತಮ್ಮ ಸೌಂದರ್ಯ ಮುಚ್ಚಿಡಬೇಕು ಎಂದೆನಿಸುತ್ತದೊ ಅವರು ಹಿಜಾಬ್‌ ಧರಿಸುತ್ತಾರೆ ಎಂದಿದ್ದರು. 

ಕಾಂಗ್ರೆಸ್ ಪಕ್ಷ ಒಪ್ಪುವುದಿಲ್ಲ ಎಂದ ಡಿಕೆಶಿ
ಕರ್ನಾಟಕದ ಉಡುಪಿ ಜಿಲ್ಲೆಯಿಂದ ಹೊತ್ತಿಕೊಂಡ ಹಿಜಾಬ್ ವಿವಾದದ ಕಿಡಿ ಸದ್ಯ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡುತ್ತಿದೆ. ಈ ನಡುವೆ ಅನೇಕ ಹಿರಿಯ, ಕಿರಿಯ ರಾಜಕೀಯ ನಾಯಕರು ಈ ವಿಚಾರವಾಗಿ ಹೇಳಿಕೆ ನೀಡುತ್ತಿದ್ದು, ಇದಕ್ಕೆ ಪರ ವಿರೀಧಗಳು ವ್ಯಕ್ತವಾಗಿವೆ. ಸದ್ಯ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ನೀಡಿರುವ ಹೇಳಿಕೆ ಸದ್ದು ಮಾಡುತ್ತಿದ್ದು, ಈ ವಿಚಾರವಾಗಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹೀಗಿರುವಾಗಲೇ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಜಮೀರ್ ಅಹ್ಮದ್ ಹೇಳಿಕೆಯನ್ನು ಪಕ್ಷ ಒಪ್ಪುವುದಿಲ್ಲ ಎಂದಿದ್ದಾರೆ.

ಭಾನುವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಶಾಸಕ ಜಮೀರ್ ಅಹ್ಮದ್ ಬುರ್ಕಾ, ಹಿಜಾಬ್‌ (Hijab) ಧರಿಸದೆ ಇರುವುದೆ ಭಾರತದಲ್ಲಿ ಅತ್ಯಾಚಾರ ಪ್ರಕರಣ ಹೆಚ್ಚಾಗಲು ಕಾರಣವಾಗಿದೆ ಎಂದಿದ್ದರು. ಅವರ ಈ ಹೇಳಿಕೆಗಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಹೀಗಿರುವಾಗ ಅವರ ಈ ಹೇಳಿಕೆಯನ್ನು ಡಿಕೆಶಿ ಖಂಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಜಮೀರ್ ಹೇಳಿಕೆಯನ್ನ ಕಾಂಗ್ರೆಸ್ ಪಕ್ಷ ಒಪ್ಪುವುದಿಲ್ಲ. ಹಿಜಾಬ್ ಬಗ್ಗೆ ಹೇಗೆ ಬೇಕೋ ಹಾಗೆ ಮಾತನಾಡಬಾರದು ಎಂದು ನಾನು ಸೂಚನೆ ಕೊಟ್ಟಿದ್ದೆ, ಆದರೂ ಮಾತಾಡಿದ್ದಾರೆ. ಈ ವಿಚಾರದಲ್ಲಿ ಪಕ್ಷದಿಂದ ಜಮೀರ್ ಅವರಿಗೆ ಸ್ಪಷ್ಟನೆ ಕೇಳ್ತೇವೆ. ಜಮೀರ್ ಹೇಳಿಕೆ ಗೆ ಅವರಿಂದ ಸ್ಪಷ್ಟನೆ ಕೇಳಿ ಅವರ ಹೇಳಿಕೆ ವಾಪಸ್ ಪಡೆಯುವಂತೆ ನಾನು ಸೂಚನೆ ನೀಡ್ತೇನೆ. ಅಲ್ಲದೇ ಜಮೀರ್ ಜನರ ಕ್ಷಮೆ ಕೇಳಬೇಕು ಎಂದಿದ್ದಾರೆ.

click me!