'ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಪರಿಕಲ್ಪನೆ ಹರಿಕಾರ'

By Kannadaprabha News  |  First Published Jan 20, 2023, 8:30 PM IST

ರಾಜ್ಯದ ರೈತರ ಸಾಲಮನ್ನಾ, ಭಾಗ್ಯಲಕ್ಷ್ಮೀ ಯೋಜನೆ, ಗರ್ಭಿಣಿಯರಿಗೆ, ಅಂಗವಿಕಲರಿಗೆ, ವೃದ್ಧಾಪ್ಯ ಹಾಗೂ ವಿಧವಾ ವೇತನ ಹೆಚ್ಚಳ ಸೇರಿದಂತೆ ಎಲ್ಲ ಮೂಲ ಸೌಕರ್ಯಗಳನ್ನು ಪ್ರಾಮಾಣಿಕ ಒದಗಿಸಿದ ಕೀರ್ತಿ ಕುಮಾರಸ್ವಾಮಿ ಅವರಿಗೆ ಸಲ್ಲುತ್ತದೆ: ಮಾವಿನಮರದ 


ಕೆರೂರ(ಜ.20): ದೇಶದಲ್ಲಿ ಮೊದಲ ಬಾರಿಗೆ ಗ್ರಾಮ ವಾಸ್ತವ್ಯದ ಮೂಲಕ ನೊಂದವರ ನೋವು, ಕೃಷಿಕರ ಹಾಗೂ ನೇಕಾರರ ಕಷ್ಟಕಾರ್ಪಣ್ಯಕ್ಕೆ ಸ್ಪಂದಿಸಿ, ಪರಿಹಾರಕ್ಕೆ ನಾನಾ ಯೋಜನೆಗಳನ್ನು ಜಾರಿಗೊಳಿಸಿದ ದೇಶದ ಮೊದಲ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಗಿದ್ದಾರೆ ಎಂದು ಬಾದಾಮಿ ಜೆಡಿಎಸ್‌ ಅಭ್ಯರ್ಥಿ ಹನುಮಂತ ಮಾವಿನಮರದ ಹೇಳಿದರು.

ಬುಧವಾರ ಪಟ್ಟಣದ ಶ್ರೀ ಬನಶಂಕರಿ ದೇವಸ್ಥಾನದ ಆವರಣದಲ್ಲಿ ನಡೆದ ಜ.23ರಂದು ಪಟ್ಟಣಕ್ಕೆ ಆಗಮಿಸಲಿರುವ ಪಂಚರತ್ನ ರಥಯಾತ್ರೆಯ ಸ್ವಾಗತದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದ ರೈತರ ಸಾಲಮನ್ನಾ, ಭಾಗ್ಯಲಕ್ಷ್ಮೀ ಯೋಜನೆ, ಗರ್ಭಿಣಿಯರಿಗೆ, ಅಂಗವಿಕಲರಿಗೆ, ವೃದ್ಧಾಪ್ಯ ಹಾಗೂ ವಿಧವಾ ವೇತನ ಹೆಚ್ಚಳ ಸೇರಿದಂತೆ ಎಲ್ಲ ಮೂಲ ಸೌಕರ್ಯಗಳನ್ನು ಪ್ರಾಮಾಣಿಕ ಒದಗಿಸಿದ ಕೀರ್ತಿ ಕುಮಾರಸ್ವಾಮಿ ಅವರಿಗೆ ಸಲ್ಲುತ್ತದೆ. ಶಿಕ್ಷಣ, ಆರೋಗ್ಯ, ವಸತಿ, ಉದ್ಯೋಗ, ನೀರಾವರಿ, ಕೈಗಾರಿಕೆಗಳ ಅಭಿವೃದ್ಧಿ ಸೇರಿದಂತೆ ರಾಜ್ಯದ ಸಮಗ್ರ ಗುರಿ ಕುಮಾರಸ್ವಾಮಿ ಹೊಂದಿದ್ದಾರೆ. ಇದರ ಕುರಿತು ಜಾಗೃತಿಗಾಗಿ ಪಂಚರತ್ನ ರಥಯಾತ್ರೆ ಕೈಗೊಂಡಿದ್ದು ಪಟ್ಟಣಕ್ಕೆ ಬರಲಿರುವ ರಥವನ್ನು ನಾಗರಿಕರು ಅದ್ದೂರಿಯಾಗಿ ಸ್ವಾಗತಿಸಕೊಳ್ಳಬೇಕು ಎಂದು ವಿನಂತಿಸಿದರು.

Tap to resize

Latest Videos

undefined

ದೊಡ್ಡಗೌಡರ ಕ್ಷಮೆ ಕೇಳದಿದ್ರೆ ಕಟೀಲ್ ವಿರುದ್ಧ ಕಪ್ಪು ಬಾವುಟ ಪ್ರದರ್ಶನ: ಸಿಎಂ ಇಬ್ರಾಹಿಂ

ಪಟ್ಟಣದ ಅ.ರಾ.ಹಿರೇಮಠ ಪ್ರೌಢ ಶಾಲಾವರಣದಲ್ಲಿ ವಿ.ವ.ಸಂಘದ ಅಧ್ಯಕ್ಷ ಮಹಾಂತೇಶ ಮೆಣಸಗಿ ಅಧ್ಯಕ್ಷತೆಯಲ್ಲಿ ಬಹಿರಂಗ ಸಭೆ ನಡೆಯಲಿದೆ. 10 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಪಕ್ಷದ ಕಾರ್ಯಕರ್ತರು ಧುರೀಣರು ಉಪಸ್ಥಿತರಿದ್ದು ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಾರೆ. ಕ್ಷೇತ್ರದ ಜನ ನನ್ನನ್ನು ಮನೆಯ ಮಗನಂತೆ ಕಂಡು ಆಶೀರ್ವದಿಸುತ್ತ ಬಂದಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ 24,484 ಮತಗಳನ್ನು ಪಡೆದಿರುವುದೇ, ಪಕ್ಷದ ಕೋರ ಕಮಿಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿದೆ. ನಾನು ಶ್ರೀಮಂತನಲ್ಲ ಕೆಳಮಟ್ಟದ ರಾಜಕಾರಣದಿಂದ ಪಕ್ಷ ಸಂಘಟಿಸಿ ಮೇಲೆ ಬಂದವನು. ಬಡವರ, ದಲಿತರ ನಾಡಿಮಿಡಿತ ಬಲ್ಲವನು ಕ್ಷೇತ್ರದ ಸೇವೆ ಬಯಸಿ ತಮ್ಮ ಮುಂದೆ ಬಂದಿದ್ದೇನೆ ಸೇವೆಗೆ ಒಂದು ಅವಕಾಶ ನೀಡಿ ಎಂದು ವಿನಂತಿಸಿದರು.

ಬಾಗಲಕೋಟ ಜಿಲ್ಲಾ ಎಸ್ಸಿ, ಎಸ್ಟಿಘಟಕದ ಕಾರ್ಯಕಾರಣಿ ಸದಸ್ಯ ಡಿ.ಡಿ.ಬಂಡಿವಡ್ಡರ ಮಾತನಾಡಿ, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಕಷ್ಟಸುಖಕ್ಕೆ ತಕ್ಷಣ ಸ್ಪಂದಿಸುವ ರಾಜಕಾರಣಿ. ಕೆರೂರಿನ ಬಡ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ತಮ್ಮ ಜೇಬಿನಿಂದ ದುಡ್ಡು ನೀಡಿದ್ದಾರೆ. ಪಟ್ಟಣದ ಶಾಶ್ವತ ಕುಡಿಯುವ ನೀರಿಗೆ ಅನುದಾನ ನೀಡಿದವರು. ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿಯಾಗುವುದು ಪ್ರಸ್ತುತ ಅವಶ್ಯವಿದೆ. ಬಾದಾಮಿ ಮತಕ್ಷೇತ್ರದ ಅಭ್ಯರ್ಥಿ ಹನಮಂತ ಮಾವಿನಮರದ ಸರಳ ಸಜ್ಜನಿಕೆಯ ಸಾರ್ವಜನಿಕ ಸೇವೆಯ ಹಸಿವು ತುಂಬಿಕೊಂಡ ಯುವಕರಾಗಿದ್ದಾರೆ. ಕಾರ್ಯಕರ್ತರೆಲ್ಲರು ಒಗ್ಗಟ್ಟಿನಿಂದ ಜೆಡಿಎಸ್‌ ಸಾಧನೆಯನ್ನು ಪ್ರತಿ ಮನೆಗೆ ವಿವರಿಸಿ ಪಕ್ಷದ ಗೆಲುವಿಗೆ ಶ್ರಮಿಸಬೇಕೆಂದು ಕರೆ ನೀಡಿದರು.

ಯುವ ಮುಖಂಡ ಟೋಪೇಶ ಬದಾಮಿ ಮಾತನಾಡಿ, ರಾಷ್ಟ್ರೀಯ ಪಕ್ಷಗಳ ಬೇಜವಾಬ್ದಾರಿ ಆಡಳಿತದಿಂದ ಅಭಿವೃದ್ದಿ ಕುಂಠಿತವಾಗುತ್ತಿದ್ದು, ಈ ಬಾರಿ ಬದಲಾವಣೆ ಮಾಡಬೇಕೆಂಬ ಉದ್ದೇಶದಿಂದ ಹಲವಾರು ಹಿರಿಯರ ಸಲಹೆ ಸೂಚನೆ ಪಡೆದು ನಾನು ಜ.23ರಂದು ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಸಾವಿರಾರು ಯುವಕರೊಂದಿಗೆ ಜೆಡಿಎಸ್‌ ಸೇರುತ್ತಿದ್ದೇನೆ. ಎಲ್ಲರೂ ಜೆಡಿಎಸ್‌ ಗೆಲುವಿಗೆ ಸಹಕರಿಸಬೇಕು ಎಂದರು. ಸ್ಥಳೀಯ ಜೆಡಿಎಸ್‌ ಅಧ್ಯಕ್ಷ ಮಂಜುನಾಥ ಪತ್ತಾರ, ಪ.ಪಂ.ಮಾಜಿ ಉಪಾಧ್ಯಕ್ಷ ಫಕೀರಪ್ಪ ಕಾಂಬಳೆ, ರಾಮು ಕೊಣ್ಣೂರ, ಮಯೂರ ರೂಡಗಿ, ಅಬೂಬಕ್ಕರ ಯಡಹಳ್ಳಿ, ಜಗದೀಶ ಪ್ರಭಾಕರ, ಎಲ್‌,ಎಚ್‌,ಕೊಣ್ಣೂರ, ಶ್ರೀನಿವಾಸ ಕಲಾಲ ಇತರರಿದ್ದರು. ಹಾಸಿಮ್‌ಸಾಬ ಮುಲ್ಲಾ ನಿರೂಪಿಸಿದರು.

ಪಂಚರತ್ನ ರಥಯಾತ್ರೆಗೆ 25 ಸಾವಿರ ಜನ ಭಾಗಿ

ಬಾಗಲಕೋಟೆ: ಜೆಡಿಎಸ್‌ ಪಕ್ಷದಿಂದ ನಡೆಯುತ್ತಿರುವ ಪಂಚರತ್ನ ರಥಯಾತ್ರೆಯು ಬಾಗಲಕೋಟೆ ಜಿಲ್ಲೆಗೆ ಆಗಮಿಸಲಿದೆ ಎಂದು ಜೆಡಿಎಸ್‌ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಹೇಳಿದರು. ನವನಗರದ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜ.23 ರಂದು ಜಿಲ್ಲೆಯ ಬಾದಾಮಿ ಮತಕ್ಷೇತ್ರದ ಗುಳೇದಗುಡ್ಡ ಪಟ್ಟಣದಿಂದ ರಥಯಾತ್ರೆ ಆರಂಭವಾಗಲಿದೆ ಎಂದರು.

ರೈತರಿಗೆ ಒಳ್ಳೆಯ ಕಾರ್ಯಕ್ರಮ ನೀಡದಿದ್ದರೆ ಜೆಡಿಎಸ್‌ ವಿಸರ್ಜನೆ: ಕುಮಾರಸ್ವಾಮಿ

ಜ.23ರ ಬೆಳಿಗ್ಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ರಥಯಾತ್ರೆ ನಡೆಯಲಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ಅವರು ನೇಕಾರರನ್ನು ಭೇಟಿಯಾಗಲಿದ್ದಾರೆ. ನಂತರ ಪಟ್ಟಸಾಲಿ ಸಮಾಜದ ಸ್ವಾಮೀಜಿ ಅವರನ್ನು ಭೇಟಿಯಾಗಲಿದ್ದಾರೆ. ಸುಮಾರು 25 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ಬಳಿಕ ಬಾದಾಮಿ ಕ್ಷೇತ್ರದ ಕೆರೂರ ಪಟ್ಟಣಕ್ಕೆ ರಥಯಾತ್ರೆ ಆಗಮಿಸಲಿದ್ದು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿ ಬೃಹತ್‌ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿವಿಧ ಸಮಾಜದ ಮುಖಂಡರು, ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಗೊಳ್ಳುವರು. ಅಲ್ಲಿಂದ ರಥಯಾತ್ರೆಯು ಹಳಗೇರಿ, ಮುಷ್ಠಿಗೇರಿ, ತಿಮ್ಮಾಪೂರ ಎಸ್‌.ಎನ್‌. ನೀಲಗುಂದ, ಸೋಮನಕೊಪ್ಪ, ಕುಳಗೇರಿ ಕ್ರಾಸ್‌, ಚಿಮ್ಮನಕಟ್ಟಿ, ಖಾನಾಪೂರ ಎಸ್‌ಕೆ, ಕಳಸ, ಕಿತ್ತಲಿ, ಸುಳ್ಳ, ಹೆಬ್ಬಳ್ಳಿ ಮೂಲಕ ಬಾದಾಮಿ ಬನಶಂಕರಿಗೆ ಆಗಮಿಸಲಿದೆ. ಕುಮಾರಸ್ವಾಮಿ ಅವರು ಬನಶಂಕರಿದೇವಿ ದರ್ಶನ ಪಡೆದು ನಂತರ ಬಾದಾಮಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವರು. ಇದಕ್ಕೂ ಮುನ್ನ ಬಾದಾಮಿ ಪಟ್ಟಣದ ಎಪಿಎಂಸಿಯಿಂದ ಕಬ್ಬಲಗೇರಿ ಕ್ರಾಸ್‌ವರೆಗೆ ಬೃಹತ್‌ ಮೆರವಣಿಗೆ ನಡೆಯಲಿದೆ. ಬಳಿಕ ಆಡಗಲ್‌ ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಜ.24 ರಂದು ಬೆಳಿಗ್ಗೆ ಕೆಂದೂರು ಕೆರೆಗೆ ಭೇಟಿ ನೀಡಿ, ಮುಂದಿನ ಕ್ಷೇತ್ರಕ್ಕೆ ಪ್ರಯಾಣ ಬೆಳಸಲಿದ್ದಾರೆಂದು ಮಾಹಿತಿ ನೀಡಿದರು.

ಬಾದಾಮಿ ಪಟ್ಟಣದಲ್ಲಿ ನಡೆಯಲಿರುವ ಬೃಹತ್‌ ಸಾರ್ವಜನಿಕ ಸಮಾವೇಶಕ್ಕೆ ಸುಮಾರು 50 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಕೆರೂರನಲ್ಲಿ ಜರಗಲಿರುವ ಸಾರ್ವಜನಿಕ ಸಭೆಯಲ್ಲಿ ಜನರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿದಂತೆ ಪಕ್ಷದ ಮುಖಂಡರು, ಜಿಲ್ಲೆಯ ನಾಯಕರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಾವಿನಮರದ ತಿಳಿಸಿದರು.

click me!