ಬಿಜೆಪಿ ಹಾಗೂ ಆಶ್ವತ್ಥನಾರಾಯಣ ವಿರುದ್ಧ ಗುಡುಗಿದ ನಿಖಿಲ್ ಕುಮಾರಸ್ವಾಮಿ
ರಾಮದೇವರ ಬೆಟ್ಟ ಅಭಿವೃದ್ಧಿ ಮೂರು ವರ್ಷ ಹಳೆಯ ಪ್ರಸ್ತಾವನೆ
ಚುನಾವಣೆ ಹತ್ತಿರ ಇಟ್ಟುಕೊಂಡು ಜನರಲ್ಲಿ ಮತ ಪಡೆಯಲು ಯತ್ನ
ರಾಮನಗರ (ಜ.03): ರಾಮದೇವರ ಬೆಟ್ಟವನ್ನು ಅಯೋದ್ಯೆ ಮಾದರಿಯಲ್ಲಿ ನಿರ್ಮಾಣ ಮಾಡುವ ಯೋಜನೆಯನ್ನು ಸರ್ಕಾರದಿಂದ ಕಳೆದ ಮೂರೂವರೆ ವರ್ಷದ ಹಿಂದೆ ರೂಪಿಸಲಾಗಿತ್ತು. ಆದರೆ, ಈಗ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತ್ತೆ ಅದನ್ನು ಪ್ರಸ್ತಾಪ ಮಾಡುವ ಮೂಲಕ ಬಿಜೆಪಿ ನಾಯಕರು ಮತಗಳನ್ನು ಪಡೆಯುವ ಗಿಮಿಕ್ ಮಾಡುತ್ತಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಯೋಧ್ಯೆ ಶ್ರೀರಾಮ ಮಂದಿರ ಮಾದರಿಯಲ್ಲಿ ರಾಮದೇವರ ಬೆಟ್ಟ ಅಭಿವೃದ್ಧಿ ಮಾಡುವ ಪ್ರಸ್ತಾವನೆ ಕಳೆದ ಮೂರುವರೆ ವರ್ಷದಿಂದ ಸರ್ಕಾರದ ಬಳಿ ಇತ್ತು. ಈಗ ಅದನ್ನ ಪ್ರಸ್ತಾಪ ಮಾಡುತ್ತಿದ್ದಾರೆ. ಸರ್ಕಾರ ಮನಸ್ಸು ಮಾಡಿದ್ದರೆ ಮಂದಿರವನ್ನು ಯಾವತ್ತೋ ಕಟ್ಟಬಹುದಿತ್ತು. ಆದರೆ, ಚುನಾವಣೆ ಹತ್ತಿರ ಇಟ್ಟುಕೊಂಡು ಜನರಲ್ಲಿ ಮತ ಪಡೆಯಲು ಮತ್ತೆ ರಾಮದೇವರ ಬೆಟ್ಟ ಅಭಿವೃದ್ಧಿಯ ಗಿಮಿಕ್ ಆರಂಭಿಸಿದ್ದಾರೆ. ನಾವು ಎಲ್ಲವನೂ ಗಮನಿಸುತ್ತಿದ್ದೇವೆ ಎಂದು ಹೇಳಿದರು.
KMF, ಅಮುಲ್ ವಿಲೀನ ಇಲ್ಲ: ಸಿದ್ದರಾಮಯ್ಯ, ಎಚ್ಡಿಕೆ ವಿರುದ್ದ ಅಶ್ವತ್ಥ್‌ನಾರಾಯಣ್ ಗರಂ
ಬಿಜೆಪಿ ಸರ್ಕಾರ ಸಂಘರ್ಷ ಆರಂಭಿಸಿದೆ: ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತಕ್ಕೆ ಬಂದಾಗಿಂದ ಸಂಘರ್ಷ ಉಂಟು ಮಾಡುವ ಕೆಲಸ ಮಾಡುತ್ತಿದ್ದಾರೆ. ಇದು ಆರೋಗ್ಯಕರ ಬೆಳವಣಿಗೆ ಅಲ್ಲ. ಹಿಂದು, ಮುಸಲ್ಮಾನ್, ಕ್ರೈಸ್ತರು ಸೇರಿ ಎಲ್ಲ ಧರ್ಮೀಯರು ಸಹೋದರರಂತೆ ಬದುಕುತ್ತಿದ್ದೇವೆ. ಬಿಜೆಪಿಯವರು ಹಿಂದೂಗಳನ್ನು ಗುತ್ತಿಗೆ ತೆಗೆದುಕೊಂಡಿರುವ ಮನಸ್ಥಿತಿ ಇಟ್ಟುಕೊಂಡಿದ್ದಾರೆ. ಇದು ಜಾಸ್ತಿ ದಿನ ನಡೆಯೋದಿಲ್ಲ. ಇದು ತಾತ್ಕಾಲಿಕವಾಗಿ ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಪ್ರಚೋದನೆಯನ್ನು ಬಹಳ ದಿನ ಉಳಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.
ರಾಮನಗರದ ಅಭಿವೃದ್ಧಿ ಮಾಡಿಲ್ಲ: ಸಚಿವ ಅಶ್ವತ್ಥ ನಾರಾಯಣ್ ಅವರಿಗೆ ನಿನ್ನೆ ಮೊನ್ನೆಯಿಂದ ರಾಮನಗರದ ವಿಳಾಸ ಗೊತ್ತಾಗಿದೆ. ರಾಮನಗರವನ್ನು ಜಿಲ್ಲೆಯನ್ನಾಗಿ ಮಾಡಿದ್ದು ಕುಮಾರಣ್ಣ. ಬಿಜೆಪಿನೂ ಅಲ್ಲ, ಅಶ್ವತ್ಥ ನಾರಾಯಣನೂ ಅಲ್ಲ. ನಾವು ಏನು ಮಾಡಿದ್ದೇವೆ ಎಂಬುದನ್ನು ಜನಸಾಮಾನ್ಯರು ಮಾತನಾಡುತ್ತಿದ್ದಾರೆ. ಅವರಿಗೆ ಮಾಹಿತಿ ಕೊರತೆ ಇದ್ದರೆ ಜನಸಾಮಾನ್ಯರ ಬಳಿ ಹೋಗಿ ಪಡೆದುಕೊಳ್ಳಲಿ. ಉದ್ಯಮಿ ಪ್ರದೀಪ ಆತ್ಮಹತ್ಯೆ ಪ್ರಕರಣದ ಕುರಿತು ಮಾಜಿ ಸಚಿವ ಅರವಿಂದ ಲಿಂಬಾವಳಿ ಉತ್ತರ ಕೊಡಬೇಕು. ಈ ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆ ಕುಲಂಕುಶವಾಗಿ ತನಿಖೆ ಮಾಡಲಿ. ಸರ್ಕಾರ ಅವರ ಕೈಯಲ್ಲಿದೆ ಎಂದು ದುರುಪಯೋಗ ಮಾಡಿಕೊಳ್ಳಬಾರದು ಎಂದರು.
ಉದ್ಯಮಿ ಆತ್ಮಹತ್ಯೆ: ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಎಫ್‌ಐಆರ್ ಪ್ರಶ್ನಿಸಿ ಪೊಲೀಸರಿಗೆ ಪ್ರಭಾವಿಗಳ ಕರೆ
ದೇವೇಗೌಡರ ಬಗ್ಗೆ ಮಾತನಾಡುವಾಗ ಅರಿವಿರಬೇಕು: ಇತ್ತೀಚೆಗೆ ಮಂಡ್ಯದಲ್ಲಿ ಆಯೋಜಿಸಲಾಗಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರು ಹಳೆ ಮೈಸೂರು ಭಾಗದಲ್ಲಿ ಅಹಂನಿಂದ ಮಾತನಾಡಿದ್ದಾರೆ. ಯಾರು ಜನರ ಜೊತೆಗಿದ್ದಾರೆ ಎಂಬುದು ಜನರ ಮನಸ್ಸಿನಲ್ಲಿರುವ ಕಾರಣದಿಂದಲೇ ದೇವೇಗೌಡರು ಮತ್ತು ಕುಮಾರಣ್ಣ ಅವರ ಪಕ್ಷವನ್ನ ಜನ ಕೈ ಹಿಡಿಯುವ ಕೆಲಸ ಮಾಡಿದ್ದಾರೆ. ರಾಜ್ಯದ ನಾಯಕರು ಅಮಿತ್ ಶಾ ಅವರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ದೇವೇಗೌಡದ ಬಗ್ಗೆ ಮಾತಾನಾಡುವ ಮುಂಚೆ ಪೂರ್ಣವಾಗಿ ತಿಳಿದುಕೊಳ್ಳಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ದೇವೇಗೌಡರನ್ನ ಪ್ರೀತಿಯಿಂದ ಕಾಣುತ್ತಾರೆ. ಆದರೆ, ಅಮಿತ್ ಶಾ ಯಾಕೆ ಹೀಗೆ ಮಾತನಾಡಿದ್ದಾರೆ ಗೊತ್ತಿಲ್ಲ. ಅವರು ರಾಜಕೀಯ ಮಾಡುವುದಕ್ಕೆ ಬೇಸರವಿಲ್ಲ, ಆದರೆ ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡಿದರೆ ರಾಜ್ಯದ ಜನರು ಒಪ್ಪುವುದಿಲ್ಲ ಎಂದು ತಿಳಿಸಿದರು.