ರಾಜ್ಯದ ಬಿಜೆಪಿ ಪಕ್ಷದಲ್ಲಿ ಇತ್ತೀಚೆಗೆ ನಡೆಯುತ್ತಿರುವ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮೊದಲಿನಂತೆ ಲಿಂಗಾಯತ ಸಮಾಜದ ಪ್ರಶ್ನಾತೀತ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿ ಪಕ್ಷ ರಾಜ್ಯದಲ್ಲಿ ಕಳೆದು ಹೋಗಿರುವುದರಿಂದ, ಕಲ್ಪತರು ನಾಡಿನ ಲಿಂಗಾಯತ ಸಮಾಜ ಬಂಧುಗಳು ಜನಪರ ನಿಲುವು ತಾಳಿರುವ ನಮ್ಮ ಜಾತ್ಯತೀತ ಜನತಾ ದಳವನ್ನು ಈ ಬಾರಿ ದಯಮಾಡಿ ಬೆಂಬಲಿಸಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅತ್ಯಂತ ಭಾವುಕದಿಂದ ಮನವಿ ಮಾಡಿಕೊಂಡರು.
ತಿಪಟೂರು (ಫೆ.4) : ರಾಜ್ಯದ ಬಿಜೆಪಿ ಪಕ್ಷದಲ್ಲಿ ಇತ್ತೀಚೆಗೆ ನಡೆಯುತ್ತಿರುವ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮೊದಲಿನಂತೆ ಲಿಂಗಾಯತ ಸಮಾಜದ ಪ್ರಶ್ನಾತೀತ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿ ಪಕ್ಷ ರಾಜ್ಯದಲ್ಲಿ ಕಳೆದು ಹೋಗಿರುವುದರಿಂದ, ಕಲ್ಪತರು ನಾಡಿನ ಲಿಂಗಾಯತ ಸಮಾಜ ಬಂಧುಗಳು ಜನಪರ ನಿಲುವು ತಾಳಿರುವ ನಮ್ಮ ಜಾತ್ಯತೀತ ಜನತಾ ದಳವನ್ನು ಈ ಬಾರಿ ದಯಮಾಡಿ ಬೆಂಬಲಿಸಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅತ್ಯಂತ ಭಾವುಕದಿಂದ ಮನವಿ ಮಾಡಿಕೊಂಡರು.
ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಶುಕ್ರವಾರ ಇಲ್ಲಿನ ಕಾಂಗ್ರೆಸ್ ಮುಖಂಡರಾಗಿದ್ದ ಕೆ.ಟಿ.ಶಾಂತಕುಮಾರ್‌ರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕಾರ್ಯಕ್ರಮ ಆಯೋಜಿಸಿದ್ದು, ಕಾರ್ಯಕ್ರಮದಲ್ಲಿ ಕೆ.ಟಿ. ಶಾಂತಕುಮಾರ್‌ಗೆ ಜೆಡಿಎಸ್ ಪಕ್ಷದ ಬಾವುಟ ನೀಡುವ ಮೂಲಕ ಬರಮಾಡಿಕೊಂಡು ಮಾತನಾಡಿದರು.
ಐಎಎಸ್ ಮಕ್ಕಳು ಐಎಎಸ್ ಆಗ್ತಾರೆ, ರಾಜಕಾರಣಿಗಳ ಮಕ್ಕಳು ರಾಜಕಾರಣಿ ಆಗ್ಬಾರ್ದೆ: ಎಚ್‌ಡಿಕೆ
ತಿಪಟೂರಿನ ಲಿಂಗಾಯತ ಸಮಾಜದ ಮತದಾರರು ಯಡಿಯೂರಪ್ಪನವರ ಮನವಿಗೆ ಸ್ಪಂದಿಸುತ್ತ ಸ್ವಾರ್ಥಿಯಾದ ಇಲ್ಲಿನ ಶಾಸಕ ನಾಗೇಶ್‌ಗೆ ಮತ ನೀಡಿ ಸಂಕಟಪಡುವಂತಾಗಿದೆ. ಆದರೆ ಈಗ ಯಡಿಯೂರಪ್ಪನವರ ಮಾತು ಕೇಳಬೇಡಿ. ರಾಜ್ಯದಲ್ಲಿ ಯಡಿಯೂರಪ್ಪನವರ ಬಿಜೆಪಿ ಇಲ್ಲ. ಕೇಂದ್ರದ ಮೋದಿ ಹಾಗೂ ಅಮಿತ್‌ಶಾ ಬಿಜೆಪಿ ಮಾತ್ರವಿದ್ದು ಅವರು ರೈತರು, ಮಹಿಳೆಯರು ಸೇರಿದಂತೆ ಬಡವರಿಗೆ ತೆರಿಗೆ ಹೇರಿ ಅವರ ರಕ್ತ ಹೀರುತ್ತಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಈ ಜಿಲ್ಲೆಯ ತೆಂಗಿನ ಮರಗಳಿಗೆ ನುಸುರೋಗ ಹೆಚ್ಚಾದಾಗ ರು.180 ಕೋಟಿ ಪರಿಹಾರ ಒದಗಿಸಿದಾಗಲೂ ಇಲ್ಲಿನ ಜನಪ್ರತಿನಿಧಿಗಳು ಕೇವಲ 17 ಕೋಟಿ ಮಾತ್ರ ಬಳಕೆ ಮಾಡಿಕೊಂಡು ಇಲ್ಲಿನ ಬೆಳೆಗಾರರಿಗೆ ಮೋಸಮಾಡಿದರು. ಆದರೆ ಅರಸೀಕೆರೆ, ತುರುವೇಕೆರೆ, ಚಿ.ನಾ. ಹಳ್ಳಿ, ಚನ್ನರಾಯಪಟ್ಟಣ ಮತ್ತಿತರೆ ಭಾಗದ ಜನಪ್ರತಿನಿಧಿಗಳು ತೆಂಗಿನ ಬೆಳೆಗಾರರಿಗೆ ಹೆಚ್ಚಿನ ಪರಿಹಾರ ಬಳಸಿಕೊಂಡು ರೈತರ ಕೈಹಿಡಿದರು. ಹಾಗಾಗಿ ಇಲ್ಲಿ ರೈತಪರ, ಜನಪರ ಹಾಗೂ ಅಭಿವೃದ್ಧಿಪರ ಕೆಲಸ ಮಾಡುವ ಜನಪ್ರತಿನಿಧಿಗಳ ಕೊರತೆ ಇರುವ ಕಾರಣ, ಇಂದು ನಮ್ಮ ಜೆಡಿಸ್ ಪಕ್ಷಕ್ಕೆ ಪುನರ್ ಸೇರ್ಪಡೆಯಾಗಿರುವ ಬಡವರ ಪರವಾದ ಕೆ.ಟಿ. ಶಾಂತಕುಮಾರ್‌ರವರನ್ನು ಗೆಲ್ಲಿಸುವ ಮೂಲಕ ಈ ತಾಲೂಕಿನ ಪ್ರತಿಯೊಂದೂ ಸಮಸ್ಯೆಗಳಿಗೆ ನಾನು ಸ್ಪಂದಿಸಲು ಸಹಾಯ ಮಾಡಬೇಕೆಂದು ಮನವಿ ಮಾಡಿಕೊಂಡರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಮಾತನಾಡಿ, ಇಲ್ಲಿನ ಸಚಿವ ನಾಗೇಶ್‌ಗೆ ಮೋದಿ ಚಿಂತೆ, ಸಿದ್ದರಾಮಯ್ಯಗೆ ಸೋನಿಯಾ ಚಿಂತೆ, ನಮ್ಮ ಕುಮಾರಣ್ಣನಿಗೆ ರೈತರ ಚಿಂತೆ. ಬಿಜೆಪಿಯವರಿಗೆ ಬಡವರು ಸೇರಿದಂತೆ ರೈತರ ಯಾರ ಕಷ್ಟಅರ್ಥವಾಗುವುದಿಲ್ಲ. ಹಣಮಾಡುವುದೇ ದೊಡ್ಡ ಕೆಲಸವಾಗಿದೆ. ಬಿಜೆಪಿಯಲ್ಲಿರುವವರು ಬೇಲ್ ಮತ್ತು ಜೈಲ್‌ನಲ್ಲಿರುವವರೇ ಹೆಚ್ಚು. ಧರ್ಮ, ಜಾತಿಗಳನ್ನು ಒಡೆಯುತ್ತಾ 40ಪರ್ಸೆಂಟ್ ಕಮಿಷನ್ ದಂಧೆಯ ಸರ್ಕಾರ ನಡೆಸುತ್ತಿದ್ದಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 1 ಎಕರೆ ಜಮೀನಿಗೆ 10 ಸಾವಿರ ರು. 10 ಎಕರೆ ಇದ್ದವರಿಗೆ 1ಲಕ್ಷ ರು.ನೀಡಲಾಗುವುದು. ರೈತರ ಪಂಪ್‌ಸಟ್‌ಗಳಿಗೆ 10 ಗಂಟೆ ವಿದ್ಯುತ್, ಸ್ತ್ರೀಶಕ್ತಿ ಮತ್ತು ರೈತರ ಸಾಲ ಮನ್ನಾ ಮಾಡುತ್ತೇವೆ. ಹಗಲು ರಾತ್ರಿ ನಿಮಗಾಗಿ ಹೋರಾಟ ಮಾಡುತ್ತಿರುವ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಬೇಕು. ಆದ್ದರಿಂದ ನಿಮ್ಮ ಬೆಂಬಲ ನಮ್ಮ ಪಕ್ಷಕ್ಕೆ ಬೇಕಿದ್ದು ಕೆ.ಟಿ. ಶಾಂತಕುಮಾರ್ ಸರಳ ವ್ಯಕ್ತಿಯಾಗಿದ್ದು ಅವರ ಕೆಲಸಕಾರ್ಯಗಳನ್ನು ನಾವು ನೋಡುತ್ತಿದ್ದು, ಇಲ್ಲಿ ಅವರಿಗೇ ಟಿಕೆಟ್ ನೀಡುತ್ತಿದ್ದು ಇವರನ್ನು ಗೆಲ್ಲಿಸುವ ಹೊಣೆ ನಿಮ್ಮದು ಎಂದರು.
ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡು ಮಾತನಾಡಿದ ಕೆ.ಟಿ. ಶಾಂತಕುಮಾರ್, ನಾನು ಹಣಮಾಡಲೋ ಅಥವಾ ಪ್ರತಿಷ್ಠೆಗೊ ರಾಜಕಾರಣಕ್ಕೆ ಬಂದಿಲ್ಲ. ಕಳೆದ 8 ವರ್ಷಗಳಿಂದ ತಾಲೂಕಿನಲ್ಲಿ ರೈತಪರ, ಜನಪರ ಕೆಲಸ ಕಾರ್ಯಗಳನ್ನು ಮಾಡುತ್ತಾ ಹಲವು ಹೋರಾಟಗಳನ್ನು ಮಾಡಿ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದೇನೆ. ಬರಗಾಲದಲ್ಲಿ ಕುಡಿಯುವ ನೀರು, ದನಕರುಗಳಿಗೆ ಮೇವು, ಸಂಕಷ್ಟಬಂದಾಗ ಸ್ಪಂದಿಸಿದ ನನಗೆ ಇಲ್ಲಿನ ಜನರೂ ಸಹ ಹೆಚ್ಚಿನ ಪ್ರೀತಿ, ವಿಶ್ವಾಸ ತೋರಿಸುತ್ತಿದ್ದಾರೆ. ಪಕ್ಷದ ಪಂಚರತ್ನ ರಥಯಾತ್ರೆ ಯಶಸ್ವಿಯಾಗಿ ನಡೆಯುತ್ತಿದ್ದು ಅದರ ಕಾರ್ಯ ಯೋಜನೆಗಳು ಎಲ್ಲರೂ ಮೆಚ್ಚುವಂತಹುದ್ದಾಗಿದ್ದು, ಮುಂದಿನ ಮುಖ್ಯಮಂತ್ರಿಯನ್ನಾಗಿ ಕುಮಾರಸ್ವಾಮಿಯವರನ್ನು ಮಾಡಬೇಕು. ಅದಕ್ಕಾಗಿ ತಾಲೂಕಿನ ಜನತೆ ನನಗೆ ಶಕ್ತಿ ತುಂಬುವ ಕೆಲಸ ಮಾಡಬೇಕೆಂದರು.
ಕಾರ್ಯಕ್ರಮದಲ್ಲಿ ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ, ಮಾಜಿ ಶಾಸಕರಾದ ಸುರೇಶ್‌ಬಾಬು, ಎಂ.ಟಿ. ಕೃಷ್ಣಪ್ಪ, ಡಿ. ನಾಗರಾಜಯ್ಯ, ತಿಮ್ಮರಾಯಪ್ಪ, ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಸಹೇರಾ, ಜಿಲ್ಲಾಧ್ಯಕ್ಷ ಅಂಜನಪ್ಪ, ಎಂಎಲ್‌ಸಿ ಬೋಜೇಗೌಡ, ಜೆಡಿಎಸ್ ಮುಖಂಡರಾದ ಗೋವಿಂದರಾಜು, ತಾಲೂಕು ಕಾರ್ಯಾಧ್ಯಕ್ಷ ಶಿವಸ್ವಾಮಿ, ನಗರಸಭೆ ಮಾಜಿ ಸದಸ್ಯೆ ರೇಖಾಅನೂಪ್, ಯುವಮುಖಂಡರಾದ ರಾಕೇಶ್, ಮುಖಂಡರಾದ ಲಿಂಗರಾಜು ಜಕ್ಕನಹಳ್ಳಿ, ಕಾಂತರಾಜು, ರಾಮಕೃಷ್ಣ, ಪ್ರಕಾಶ್ ಹುಣಸೇಘಟ್ಟ, ಜಿಪಂ ಮಾಜಿ ಸದಸ್ಯೆ ರಾಧಾ ನಾರಾಯಣಗೌಡ, ಶಿವೇಗೌಡ, ತಿಮ್ಮೇಗೌಡ, ತಾಲೂಕು, ಜಿಲ್ಲೆಯ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನಾ ತಿಪಟೂರಿಗೆ ಎಚ್.ಡಿ. ಕುಮಾರಸ್ವಾಮಿ ಆಗಮಿಸುತ್ತಿದ್ದಂತೆಯೇ ಕ್ರೇನ್ ಮೂಲಕ ಕೊಬ್ಬರಿ ಹಾರ ಹಾಕಿ ಸ್ವಾಗತಿಸಲಾಯಿತು.
ಎಚ್ಡಿಕೆ ಸುನಾಮಿಗೆ ಕಾಂಗ್ರೆಸ್, ಬಿಜೆಪಿಗೆ ನಡುಕ : ಮಂತ್ರಿಗಿರಿ ಭರವಸೆಯೂ ಈಗಲೇ
ಕಾಲು ಮುರಿದ ಕುದುರೆ ಕೊಟ್ಟಕಾಂಗ್ರೆಸ್ಸಿಗರು
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ಕಾಂಗ್ರೆಸ್‌ನವರು ಕಾಲುಮುರಿದ ಕುದುರೆ ನೀಡಿ ನನಗೆ ಒತ್ತಾಯ ಮಾಡಿ ಆಡಳಿತ ನಡೆಸಲು ಬಿಟ್ಟರು. ನಾನು ರೈತರ ಸಾಲ ಮನ್ನಾ ಮಾಡಬೇಕೆಂದು ಹೊರಟರೆ ಅವರು ಸಹಕಾರ ನೀಡದೆ, ನಮ್ಮ ಪಕ್ಷದ ಯೋಜನೆಗಳನ್ನು ಮಾತ್ರ ಮುಂದುವರಿಸಿ ಎಂದು ಇಕ್ಕಟ್ಟಿಗೆ ಸಿಲುಕಿಸಿದರು. ಆದರೂ ನನ್ನ ಬುದ್ದಿವಂತಿಕೆಯಿಂದ ಸಂಕಷ್ಟದಲ್ಲಿದ್ದ ರಾಜ್ಯದ ರೈತರ ಸುಮಾರು 25 ಸಾವಿರ ಕೋಟಿ ಸಾಲಮನ್ನಾ ಮಾಡಿದೆ. ಮುಂದೆ ತಾವು ಅಧಿಕಾರ ನೀಡಿದರೆ ಎಲ್ಲ ರೈತರ, ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಹಾಗೂ ರೈತರ ಪ್ರತಿ ಎಕರೆಗೆ ರು.10 ಸಾವಿರ ಹಣವನ್ನು ಕೃಷಿ ವೆಚ್ಚಕ್ಕೆಂದು ನೀಡುತ್ತೇನೆ. ಆರೋಗ್ಯ, ಶಿಕ್ಷಣವನ್ನು ಉಚಿತಗೊಳಿಸುತ್ತೇನೆ. ವಯಸ್ಸಾದವರ ಜೀವನಕ್ಕೆ ನಿಶ್ಚಿತ ಆದಾಯ, ಯುವಕರಿಗೆ ದುಡಿಯುವ ಮಾರ್ಗ ಕಲ್ಪಿಸಲಾಗುವುದು ಎಂದು ತಿಳಿಸಿದರು.