
ಬಳ್ಳಾರಿ(ಫೆ.04): ಶ್ರೀರಾಮುಲು ಹಾಗೂ ನನ್ನ ನಡುವಿನ ಆಲಿಂಗನ ಸಾಕಷ್ಟುಬಾರಿ ನಡೆದಿದೆ. ಈ ಬಾರಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದೇವೆ ಅಷ್ಟೇ ಎಂದು ಮಾಜಿ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದಾರೆ. ಸಚಿವ ಬಿ.ಶ್ರೀರಾಮುಲು ನಡುವಿನ ಆಲಿಂಗನ-ಚುಂಬನ ಕುರಿತು ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಲಾಡ್, ನಾನು ಹಾಗೂ ಶ್ರೀರಾಮುಲು ಬಹಳ ವರ್ಷಗಳಿಂದಲೂ ಆತ್ಮೀಯರು. ರಾಜಕೀಯ ಬೇರೆ ಗೆಳತನವೇ ಬೇರೆ. ನಾನು ಶ್ರೀರಾಮುಲುಗೆ ಆಲಿಂಗ ಮಾಡುವಾಗ ಬಿಜೆಪಿ ಧುರೀಣ ಕಾರ್ತೀಕ್ ಘೋರ್ಪಡೆ ಮಹಾರಾಜರು ಸಹ ಇದ್ದರು. ಸ್ನೇಹಿತರಾದ ಬಳಿಕ ಎದುರು ಕಂಡಾಗ ಆಲಿಂಗನ ಮಾಡುವುದು ಸಹಜ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.
ನನ್ನ ಸಹೋದರ ಅನಿಲ್‌ಲಾಡ್ ಬಳ್ಳಾರಿಯಿಂದ ಸ್ಪರ್ಧೆ ಮಾಡಿದಾಗ ತೀವ್ರ ಹಣಾಹಣಿ ನಡೆದಿತ್ತು. ಬಡಿದಾಟದ ರಾಜಕೀಯವಾಗಿತ್ತು. ಶ್ರೀರಾಮುಲು ಸಹೋದರಿ ನಮ್ಮ ವಿರುದ್ಧ ಸ್ಪರ್ಧೆ ಮಾಡಿದಾಗಲೂ ನಾನು ಹೊಂದಾಣಿಕೆ ರಾಜಕೀಯ ಮಾಡಲಿಲ್ಲ. ನನ್ನ ವಿರುದ್ಧ ಗೆದ್ದಿರುವ ಕಲಘಟಗಿ ಶಾಸಕ ಸಿ.ಎಂ.ನಿಂಬಣ್ಣವರ ಕೋವಿಡ್‌ನಿಂದ ಬಳಲುತ್ತಿರುವಾಗ ಅವರನ್ನು ಭೇಟಿ ಮಾಡಿ ಮಾತನಾಡಿಸಿಕೊಂಡು ಬಂದಿದ್ದೇನೆ. ನಾನು ಚುನಾವಣೆಯಲ್ಲಿ ರಾಜಕೀಯ ಮಾಡುತ್ತೇನೆ. ಉಳಿದಂತೆ ಎಲ್ಲರನ್ನೂ ಸ್ನೇಹಿತರಂತೆ ಕಾಣುತ್ತೇನೆ ಎಂದರು.
ಬಳ್ಳಾರಿಯಲ್ಲಿ ರೆಡ್ಡಿ ಬ್ರದರ್ಸ್ ಸವಾಲ್: ಸೋಮಶೇಖರ್‌ರೆಡ್ಡಿ ವಿರುದ್ಧ ಜನಾರ್ಧನರೆಡ್ಡಿ ಪತ್ನಿ ಸ್ಪರ್ಧೆ
ಶ್ರೀರಾಮುಲು ಸಂಡೂರಿನಿಂದ ಸ್ಪರ್ಧೆ ಮಾಡಿದರೆ ಮಾಡಲಿ. ಅದು ಅವರ ಪಕ್ಷದ ತೀರ್ಮಾನ. ನಾನು ಕಾಂಗ್ರೆಸ್ ಮುಖಂಡನಾಗಿ ನನ್ನ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವುದು ನನ್ನ ಕರ್ತವ್ಯ, ಅದನ್ನು ನಾನು ಮಾಡಿಯೇ ಮಾಡುತ್ತೇನೆ. ಶ್ರೀರಾಮುಲು ಅವರನ್ನು ನಾನು ಕಾಂಗ್ರೆಸ್‌ಗೆ ಆಹ್ವಾನಿಸಿಲ್ಲ, ಅವರು ನನ್ನನ್ನು ಬಿಜೆಪಿಗೆ ಆಹ್ವಾನಿಸಿಲ್ಲ. ಊಹಾಪೋಹ ಸುದ್ದಿಗಳ ಬಗ್ಗೆ ನಾನು ಹೆಚ್ಚು ಆದ್ಯತೆ ನೀಡುವುದಿಲ್ಲ ಎಂದರು.
ಈ ಬಾರಿ ಕಲಘಟಗಿಯಿಂದ ಸ್ಪರ್ಧಿಸಲು ಪಕ್ಷ ಟಿಕೆಟ್ ನೀಡಲಿದೆ ಎಂಬ ವಿಶ್ವಾಸದಲ್ಲಿದ್ದೇನೆ. ಈ ಬಾರಿ ಕಲಘಟಗಿ ಮತದಾರರು ಕೈ ಹಿಡಿಯುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಸಂತೋಷ ಲಾಡ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.