ವಿಜಯನಗರ ಕ್ಷೇತ್ರದಲ್ಲಿ ಸತತ ನಾಲ್ಕು (ಉಪ ಚುನಾವಣೆ ಸೇರಿ) ಬಾರಿ ಗೆಲುವು ಸಾಧಿಸಿರುವ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಅವರ ನಾಗಾಲೋಟಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ಹೈಕಮಾಂಡ್ 11 ಆಕಾಂಕ್ಷಿಗಳ ಪಡೆಯ ವ್ಯೂಹ ರಚಿಸಿದೆ!
ಕೃಷ್ಣ ಎನ್. ಲಮಾಣಿ
ಹೊಸಪೇಟೆ (ಡಿ.3) ವಿಜಯನಗರ ಕ್ಷೇತ್ರದಲ್ಲಿ ಸತತ ನಾಲ್ಕು (ಉಪ ಚುನಾವಣೆ ಸೇರಿ) ಬಾರಿ ಗೆಲುವು ಸಾಧಿಸಿರುವ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಅವರ ನಾಗಾಲೋಟಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ಹೈಕಮಾಂಡ್ 11 ಆಕಾಂಕ್ಷಿಗಳ ಪಡೆಯ ವ್ಯೂಹ ರಚಿಸಿದೆ!
undefined
ಈಗಾಗಲೇ ಕೈ ಪಡೆಯ 11 ಆಕಾಂಕ್ಷಿಗಳು ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಆರು ಜನರ ಹೆಸರನ್ನು ಮೊದಲ ಹಂತದಲ್ಲಿ ಪರಿಗಣಿಸಿ ಹೈಕಮಾಂಡ್‌ಗೆ ಹೆಸರು ಅಖೈರುಗೊಳಿಸಲು ಮೂವರ ಹೆಸರು ಕಳುಹಿಸಲು ಪಕ್ಷ ತೀರ್ಮಾನಿಸಿದೆ.
ಕೊಪ್ಪಳ: ನವಲಿ ಸಮಾನಾಂತರ ಜಲಾಶಯಕ್ಕೆ ಶೀಘ್ರ ಭೂಮಿಪೂಜೆ, ಆನಂದ ಸಿಂಗ್
ಸಿಂಗ್ ಕಾರುಬಾರು:
2008ರಿಂದಲೂ ಆನಂದ ಸಿಂಗ್ ವಿಜಯನಗರ ಕ್ಷೇತ್ರದ ಪ್ರಶ್ನಾತೀತ ನಾಯಕರಾಗಿ ಹೊರಹೊಮ್ಮಿದ್ದಾರೆ. ಸತತ ಗೆಲುವು ಸಾಧಿಸಿರುವ ಅವರಿಗೆ ಈ ಸಲ ಚದುರಂಗದಾಟದಂತೇ ಚಕ್‌ಮೇಟ್ ನೀಡಲು ಸದ್ದಿಲ್ಲದೇ ಎಲ್ಲ ಸಿದ್ಧತೆಯನ್ನು ಕೈ ಪಡೆ ಮಾಡಿಕೊಂಡಿದೆ. ಆನಂದ ಸಿಂಗ್ ಮೂರು ಬಾರಿ ಬಿಜೆಪಿಯಿಂದ ಹಾಗು ಒಮ್ಮೆ ಕಾಂಗ್ರೆಸ್‌ನಿಂದ ಗೆದ್ದಿದ್ದಾರೆ. ಹೀಗಾಗಿ ಹಸ್ತ ಪಾಳಯ ಈ ಸಲ ಅಹಿಂದ ಮತಗಳನ್ನೇ ಕ್ರೋಢೀಕರಿಸಿ ಸಿಂಗ್‌ರನ್ನು ಸೋಲಿಸಲು ಪಣತೊಟ್ಟಿದೆ.
ಗವಿಯಪ್ಪರ ಮೇಲೆ ಕಣ್ಣು:
ಮಾಜಿ ಶಾಸಕ ಎಚ್.ಆರ್.ಗವಿಯಪ್ಪರನ್ನು ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಕಮಲ ಪಾಳಯದಿಂದ ಕೈ ಪಾಳಯಕ್ಕೆ ಬರ ಮಾಡಿಕೊಂಡಿದ್ದಾರೆ. ಕ್ಷೇತ್ರದ ಆಳ-ಅಗಲ ಬಲ್ಲ ಗವಿಯಪ್ಪ ಕಾಂಗ್ರೆಸ್ ಸೇರ್ಪಡೆಗೊಂಡಿರುವುದು ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಏತನ್ಮಧ್ಯೆ,ಸದ್ದಿಲ್ಲದೇ ಅವರು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಅಖಾಡದಲ್ಲಿ ಸಿಂಗ್‌ಗೆ ಭಾರಿ ಹೊಡೆತ ನೀಡಬಲ್ಲರು ಎಂಬುದರ ಬಗ್ಗೆ ಕಾಂಗ್ರೆಸ್‌ನಲ್ಲಿ ಚರ್ಚೆಯಾಗುತ್ತಿದೆ.
ಸಿರಾಜ್ ಶೇಖ್:
ಒಂದು ವೇಳೆ, ಅಲ್ಪಸಂಖ್ಯಾತರಿಗೆ ಟಿಕೆಟ್ ಫಿಕ್ಸ್ ಆದರೆ ಮಾಜಿ ಶಾಸಕ ಸಿರಾಜ್ ಶೇಖ್ ಅವರ ಮೇಲೂ ಕೈ ಪಡೆ ಕಣ್ಣು ಹಾಕಿದೆ. ಹೀಗಾಗಿ ಅವರು ಈಗಾಗಲೇ ಕ್ಷೇತ್ರದಲ್ಲಿ ಆಕ್ಟೀವ್ ಆಗಿದ್ದಾರೆ. ಈಗಾಗಲೇ ಪ್ರಶ್ನಿಸು ವಿಜಯನಗರ ಅಭಿಯಾನದೊಂದಿಗೆ ಕ್ಷೇತ್ರ ಸುತ್ತುತ್ತಿದ್ದಾರೆ.
ಇಮಾಮ್ ಓಡಾಟ:
ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿದರೆ ತಮಗೂ ಟಿಕೆಟ್ ದೊರೆಯಲಿ ಎಂಬ ಆಶಯದೊಂದಿಗೆ ಮುಖಂಡರಾದ ಎಚ್‌ಎನ್‌ಎಫ್ ಇಮಾಮ್ ನಿಯಾಜಿ ಹಾಗು ಸಯ್ಯದ್ ಮೊಹಮ್ಮದ್ ಕೂಡ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ.
ರಾಜಶೇಖರ್ ಹಿಟ್ನಾಳ್:
ಮುಖಂಡ ರಾಜಶೇಖರ ಹಿಟ್ನಾಳ್ ಕುರುಬ ಸಮಾಜದವರಾಗಿದ್ದು,ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.ಈಗಾಗಲೇ ಕ್ಷೇತ್ರದ ತುಂಬಾ ಓಡಾಡುತ್ತಿದ್ದಾರೆ. ಅದೇ ಸಮಾಜದ ಕುರಿ ಶಿವಮೂರ್ತಿ, ಕೆಎಸ್‌ಎಲ್ ಸ್ವಾಮಿ ಮತ್ತು ಎಲ್.ಸಿದ್ದನಗೌಡ ಕೂಡ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ವೆಂಕಟರಾವ್ ಘೋರ್ಪಡೆ:
2019ರ ಉಪ ಚುನಾವಣೆಯಲ್ಲಿ ಉತ್ತಮ ಮತಗಳನ್ನು ಗಳಿಸಿರುವ ವೆಂಕಟರಾವ್ ಘೋರ್ಪಡೆ ಕೂಡ ಈ ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.ಅವರು ಕೂಡ ಕೈ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ದೀಪಕ್ ಸಿಂಗ್:
ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಸ್ವೀಕಾರ ಮಾಡಿರುವ ಹಿನ್ನೆಲೆಯಲ್ಲಿ ದೀಪಕ್ ಕುಮಾರ ಸಿಂಗ್ ಟಿಕೆಟ್ ಮೇಲೆ ಹೆಚ್ಚಿನ ಒಲವು ಹೊಂದಿದ್ದಾರೆ. ಅವರ ತಂದೆ ಸತ್ಯನಾರಾಯಣ ಸಿಂಗ್ ಎರಡು ಬಾರಿ ಮತ್ತು ಅವರ ಅಣ್ಣ ರತನ್ ಸಿಂಗ್ ಒಮ್ಮೆ ಶಾಸಕರಾಗಿದ್ದಾರೆ. ಹಾಗಾಗಿ ಕೈ ಟಿಕೆಟ್ ದೊರೆತರೆ ಮತದಾರರು ಕೈಹಿಡಿಯಲಿದ್ದಾರೆ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಪಕ್ಷದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಾಯಕ ಶೆಟ್ಟರ್ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ
ಬಿಜೆಪಿಯಿಂದ ಆನಂದ ಸಿಂಗ್ ಕಣಕ್ಕೀಳಿಯುವುದು ನಿಕ್ಕಿಯಾಗುತ್ತಿರುವುದರಿಂದ ಕೈ ಪಾಳಯದಲ್ಲಿ ತಂತ್ರಗಾರಿಕೆ ಬದಲಾಗುತ್ತಲೇ ಸಾಗಿದೆ. ಈ ಹನ್ನೊಂದು ಆಕಾಂಕ್ಷಿಗಳ ಜತೆಗೆ ಚರ್ಚಿಸಿ, ಸಿಂಗ್‌ಗೆ ಪೈಪೋಟಿ ನೀಡಬಲ್ಲ ಒಬ್ಬರಿಗೆ ಟಿಕೆಟ್ ನೀಡಿ ಒಗ್ಗಟ್ಟಿನ ಮಂತ್ರ ಜಪಿಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ. ಇನ್ನೊಂದೆಡೆ ಆನಂದ ಸಿಂಗ್ ತನ್ನ ಪುತ್ರ ಸಿದ್ದಾರ್ಥ ಸಿಂಗ್‌ರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಈ ಬಗ್ಗೆ ತಲೆಕೆಡಿಸಿಕೊಳ್ಳದ ಕಾಂಗ್ರೆಸ್ ಸಿಂಗ್‌ರನ್ನು ಕಟ್ಟಿಹಾಕಲು ಅಹಿಂದ ಫಾರ್ಮುಲಾದೊಂದಿಗೆ 11 ಜನರ ಆಕಾಂಕ್ಷಿಗಳ ಬಲೆ ಹೆಣೆದಿದೆ. ಇನ್ನೊಂದೆಡೆ ಜೆಡಿಎಸ್, ಆಪ್, ಕೆಆರ್‌ಎಸ್, ಸಿಪಿಐಎಂ, ಎಸ್‌ಡಿಪಿಐ ಪಕ್ಷಗಳು ಕೂಡ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಈಗಾಗಲೇ ಕ್ಷೇತ್ರದಲ್ಲಿ ಚಟುವಟಿಕೆ ನಡೆಸಿವೆ.
ಹೊಸಪೇಟೆ: ಜನಪ್ರತಿನಿಧಿಗಳಿಗೆ ದುಬಾರಿ ಮೊತ್ತದ ದೀಪಾವಳಿ ಗಿಫ್ಟ್ ನೀಡಿದ ಆನಂದ ಸಿಂಗ್
ಕಾಂಗ್ರೆಸ್ ಪಕ್ಷ ಈ ಬಾರಿ ಗೆಲ್ಲುವ ಕುದುರೆಗೆ ಟಿಕೆಟ್ ನೀಡಲಿದೆ. ಪಕ್ಷದ ಕಾರ್ಯಕರ್ತರು ಹಾಗು ಮುಖಂಡರಲ್ಲಿ ಒಗ್ಗಟ್ಟಿದೆ. ಜಿಲ್ಲಾ ಕೇಂದ್ರ ವಿಜಯನಗರದಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಾಗುವುದು.
ನಿಂಬಗಲ್ ರಾಮಕೃಷ್ಣ, ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರ.ಕಾರ್ಯದರ್ಶಿ