
ಬೆಂಗಳೂರು (ನ.13) : ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಲು ಕೇವಲ ಮೂರು ದಿನ ಉಳಿದಿವೆ. ಈವರೆಗೆ ಸುಮಾರು 750 ಮಂದಿ ಅರ್ಜಿಗಳನ್ನು ಪಡೆದುಕೊಂಡಿದ್ದು, ಆ ಪೈಕಿ 200 ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಅರ್ಜಿ ಸಲ್ಲಿಸುವ ಅಂತಿಮ ದಿನವನ್ನು ಮುಂದೂಡುವ ಸಾಧ್ಯತೆಯಿದೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ. ಪಕ್ಷದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಲು ನ.15 ಅಂತಿಮ ದಿನವಾಗಿದೆ. ಆದರೆ, ಸಿದ್ದರಾಮಯ್ಯ, ಡಾ
ಜಿ.ಪರಮೇಶ್ವರ್, ಕೆ.ಜೆ.ಜಾಜ್‌ರ್, ಎಂ.ಬಿ.ಪಾಟೀಲ್ ಸೇರಿದಂತೆ ಪ್ರಮುಖ ನಾಯಕರು ಅರ್ಜಿ ಸಲ್ಲಿಸಿಲ್ಲ. ಹೀಗಾಗಿ ಅಂತಿಮ ದಿನವನ್ನು ಕನಿಷ್ಠ ಒಂದು ವಾರವಾದರೂ ಮುಂದೂಡುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಟಿಕೆಟ್‌ಗೆ ಬಿಗ್ ಫೈಟ್..!
ಕುತೂಹಲಕಾರಿ ಸಂಗತಿಯೆಂದರೆ, ಸಿದ್ದರಾಮಯ್ಯ ಅವರ ಆಸಕ್ತ ಕ್ಷೇತ್ರಗಳೆನಿಸಿದ ಕೋಲಾರ, ಬಾದಾಮಿ ಹಾಗೂ ಚಾಮರಾಜಪೇಟೆ ಕ್ಷೇತ್ರಗಳಿಗೆ ಈಗಾಗಲೇ ಹಲವಾರು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅವರ ಮತ್ತೊಂದು ಆಸಕ್ತ ಕ್ಷೇತ್ರವೆನಿಸಿದ ಹಾಗೂ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಹಾಲಿ ಶಾಸಕರಾಗಿರುವ ವರುಣ ಕ್ಷೇತ್ರಕ್ಕೆ ಇನ್ನೂ ಯಾರೂ ಅರ್ಜಿ ಸಲ್ಲಿಸಿಲ್ಲ. ಉಳಿದಂತೆ ಕೋಲಾರಕ್ಕೆ 8, ಬಾದಾಮಿಗೆ 7ಕ್ಕೂ ಹೆಚ್ಚು ಹಾಗೂ ಚಾಮರಾಜಪೇಟೆಗೆ ಎರಡು ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಸಿದ್ದರಾಮಯ್ಯ ಅವರು ಇನ್ನೂ ಯಾವ ಕ್ಷೇತ್ರದ ಅರ್ಜಿಯನ್ನು ಪಡೆದುಕೊಂಡಿಲ್ಲ.
ಇದೇ ವೇಳೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕನಕಪುರ ಕ್ಷೇತ್ರಕ್ಕಾಗಿ ಟಿಕೆಟ್ ಬಯಸಿ ಅರ್ಜಿಯನ್ನು ಒಯ್ದಿದ್ದಾರೆ. ಇನ್ನೂ ಸಲ್ಲಿಕೆ ಮಾಡಿಲ್ಲ. ಈ ಬಾರಿ ವಿಧಾನಸಭಾ ಚುನಾವಣೆಗೆ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗುತ್ತಿರುವ ಅವರ ಸಹೋದರ ಹಾಗೂ ಹಾಲಿ ಸಂಸದ ಡಿ.ಕೆ.ಸುರೇಶ್ ಅವರು ಯಾವ ಕ್ಷೇತ್ರಕ್ಕೂ ಇನ್ನೂ ಅರ್ಜಿ ಪಡೆದಿಲ್ಲ.
ಶಾಮನೂರು ಅತಿ ಹಿರಿಯ ಅರ್ಜಿದಾರ:
ಅರ್ಜಿ ಸಲ್ಲಿಸಿದವರ ಪೈಕಿ ಅತಿ ಹಿರಿಯ ಅಭ್ಯರ್ಥಿ 91 ವರ್ಷ ವಯಸ್ಸಿನ ಶಾಮನೂರು ಶಿವಶಂಕರಪ್ಪ ಅವರು ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಸ್ಪರ್ಧೆ ಬಯಸಿ ಅರ್ಜಿಯನ್ನು ಪಡೆದುಕೊಂಡಿದ್ದಾರೆ. ಇನ್ನು ಅತಿ ಕಿರಿಯೆ ಮಾಜಿ ಸಚಿವ ಮಹದೇವ ಅವರ ಪುತ್ರಿ 27 ವರ್ಷ ವಯಸ್ಸಿನ ಐಶ್ವರ್ಯ ಮಹದೇವ ಅವರು ಕೆ.ಆರ್. ನಗರ ಕ್ಷೇತ್ರದ ಟಿಕೆಟ್‌ಗಾಗಿ ಅರ್ಜಿ ಪಡೆದುಕೊಂಡಿದ್ದಾರೆ.
ಈ ಬಾರಿಯ ಚುನಾವಣೆಗೆ ಟಿಕೆಟ್ ಬಯಸುವ ಅಪ್ಪ-ಮಕ್ಕಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಈಗಾಗಲೇ ನಾಲ್ಕು ಅಪ್ಪ-ಮಗ ಜೋಡಿ ಟಿಕೆಟ್‌ಗಾಗಿ ಅರ್ಜಿ ಪಡೆದುಕೊಂಡಿದ್ದಾರೆ. ಈ ಪೈಕಿ ಮುಖ್ಯವಾಗಿ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ನಂಜನಗೂಡು ಕ್ಷೇತ್ರದಿಂದ ಹಾಗೂ ಅವರ ಪುತ್ರ ಸುನೀಲ್ ಬೋಸ್ ಟಿ.ನರಸೀಪುರಕ್ಕಾಗಿ ಅರ್ಜಿ ಪಡೆದುಕೊಂಡಿದ್ದಾರೆ. ಮತ್ತೊಬ್ಬ ಮಾಜಿ ಸಚಿವ ಶಿವಾನಂದ ಪಾಟೀಲ ಅವರು ವಿಜಯಪುರ ಸಿಟಿ ಹಾಗೂ ಅವರ ಪುತ್ರಿ ಸಂಯುಕ್ತಾ ಪಾಟೀಲ್ ಅವರು ಬಸವನ ಬಾಗೇವಾಡಿ ಕ್ಷೇತ್ರದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಕಳೆದ ಬಾರಿ ಸಿದ್ದರಾಮಯ್ಯ ಅವರಿಗಾಗಿ ಬಾದಾಮಿ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದ ಬಿ.ಬಿ.ಚಿಮ್ಮನಕಟ್ಟಿಅವರು ಅದೇ ಕ್ಷೇತ್ರದ ಟಿಕೆಟ್‌ಗಾಗಿ ಅರ್ಜಿ ಹಾಕಿಕೊಂಡಿದ್ದರೆ, ಅವರ ಪುತ್ರ ಭೀಮಸೇನ ಚಿಮ್ಮನಕಟ್ಟಿಅವರೂ ಬಾದಾಮಿ ಕ್ಷೇತ್ರದ ಟಿಕೆಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಮತ್ತೊಂದು ಅಪ್ಪ-ಮಗ ಜೋಡಿಯಾದ ಹಿರಿಯ ನಾಯಕ ಅಲ್ಲಂ ವೀರಭದ್ರಪ್ಪ ಹಾಗೂ ಅವರ ಪುತ್ರ ಅಲ್ಲಂ ಪ್ರಶಾಂತ್ ಅವರು ಬಳ್ಳಾರಿ ಕ್ಷೇತ್ರಕ್ಕೆ ಅರ್ಜಿ ಪಡೆದುಕೊಂಡಿದ್ದಾರೆ.
Karnataka Politics: ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ ಕಡ್ಡಾಯ; ಡಿಕೆಶಿ
ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್ (ಗಾಂಧಿನಗರ), ಧ್ರುವನಾರಾಯಣ (ನಂಜನಗೂಡು) ಕ್ಷೇತ್ರಕ್ಕೆ ಅರ್ಜಿ ಪಡೆದುಕೊಂಡಿದ್ದಾರೆ. ಇದಲ್ಲದೆ ಸುಮಾರು 15 ಹಾಲಿ ಶಾಸಕರು ತಮ್ಮ ಕ್ಷೇತ್ರಗಳ ಟಿಕೆಟ್ ಬಯಸಿ ಅರ್ಜಿ ಪಡೆದಿದ್ದಾರೆ. ಇನ್ನೂ ಸಿನಿಮಾ ನಟರ ಪೈಕಿ ನಟಿ ಭಾವನಾ ಯಶವಂತಪುರ ಕ್ಷೇತ್ರ ಹಾಗೂ ತುಳು ನಟ ರಾಜಶೇಖರ್ ಕೋಟ್ಯಾನ್ ಅವರು ಕಾಪು ಮತ್ತು ಮೂಡಬಿದರೆ ಕ್ಷೇತ್ರಗಳಿಗಾಗಿ ಅರ್ಜಿ ಪಡೆದುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.