ಬೆಂಗಳೂರು (ನ.13) : ಕೋಲಾರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಒತ್ತಡ ಹೆಚ್ಚಾದ ಬೆನ್ನಲ್ಲೇ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭಾನುವಾರ ದಿನವಿಡೀ ಕೋಲಾರ ಕ್ಷೇತ್ರ ಪರ್ಯಟನೆ ಹಮ್ಮಿಕೊಂಡಿದ್ದಾರೆ. ತನ್ಮೂಲಕ ಖುದ್ದಾಗಿ ಮತದಾರರ ನಾಡಿ ಮಿಡಿತ ಅರಿಯಲು ಮುಂದಾಗಿದ್ದಾರೆ. ಇಡೀ ದಿನ ಕ್ಷೇತ್ರದಲ್ಲಿ ಸುತ್ತಾಟ ನಡೆಸಿ ಜನರ ಸ್ಪಂದನೆ, ಕ್ಷೇತ್ರದ ಚಿತ್ರಣ ಅರಿತು ಭಾನುವಾರ ಸಂಜೆ ಸ್ಥಳೀಯ ನಾಯಕರು ಹಾಗೂ ಮುಖಂಡರ ಜತೆ ಸಭೆ ನಡೆಸಲಿದ್ದಾರೆ. ಈ ಮೂಲಕ ಜನರ ಅಭಿಪ್ರಾಯ ಹಾಗೂ ಮುಖಂಡರ ಅಭಿಪ್ರಾಯವನ್ನು ಕ್ರೋಢೀಕರಿಸಿ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆ ಅಥವಾ ಬೇಡವೇ ಎಂದು ನಿರ್ಧರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಭಾನುವಾರ ಬೆಳಗ್ಗೆ 10 ಗಂಟೆಗೆ ಕೋಲಾರಕ್ಕೆ ತೆರಳಲಿರುವ ಅವರು ಮೊದಲಿಗೆ ಕೋಲಾರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಮೆಥೋಡಿಸ್ಟ್ ಚಚ್‌ರ್‍ಗೆ ಭೇಟಿ ನೀಡಿ ಅಲ್ಲಿಂದ ಕಾಲೇಜು ವೃತ್ತದ ಬಳಿಯ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ.
Karnataka Politics: ಕಣ 'ಪರೀಕ್ಷೆ'ಗಾಗಿ ನ.13ಕ್ಕೆ ಸಿದ್ದು ಕೋಲಾರ ಯಾತ್ರೆ
ನಂತರ ಇಟಿಸಿಎಂ ವೃತ್ತದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಪ್ರತಿಮೆ, ಬಂಗಾರಪೇಟೆ ವೃತ್ತದಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ, ಗಾಂಧಿ ರಸ್ತೆಯಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆಗಳಿಗೆ ಮಾಲಾರ್ಪಣೆ ನಡೆಸಲಿದ್ದಾರೆ. ಇದಾದ ನಂತರ ಕನಕ ಮಂದಿರಕ್ಕೆ ಭೇಟಿ, ಯೋಗಿ ಶ್ರೀ ನಾರಾಯಣ ಯತೀಂದ್ರ ಪ್ರತಿಮೆಗೆ ಮಾಲಾರ್ಪಣೆ, ಕ್ಲಾಕ್‌ಟವರ್ ಬಳಿಯ ದರ್ಗಾಕ್ಕೆ ಭೇಟಿ, ನರಸಾಪುರ ಕೆರೆ ವೀಕ್ಷಣೆ, ವೇಮಗಲ್ ರಸ್ತೆಯ ಕುರುಬರಹಳ್ಳಿ ಗೇಟ್ ಬಳಿಯಿರುವ ಆಂಜನೇಯ ದೇವಾಲಯ ಭೇಟಿ, ಸೀತಿ ಬೆಟ್ಟದಲ್ಲಿ ಕಾಲ ಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಗರುಡಪಾಳ್ಯದಲ್ಲಿನ ದಿವಂಗತ ಬೈರೇಗೌಡರ ಸಮಾಧಿಗೆ ಭೇಟಿ ಸೇರಿದಂತೆ ಸಾಲು-ಸಾಲು ಕಾರ್ಯಕ್ರಮಗಳ ಮೂಲಕ ಕ್ಷೇತ್ರ ಪರ್ಯಟನೆ ನಡೆಸಲಿದ್ದಾರೆ.
ಕ್ಷೇತ್ರ ಪರೀಕ್ಷೆ:
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ತೀವ್ರ ಕುತೂಹಲ ರಾಜಕೀಯ ವಲಯದಲ್ಲಿದೆ. ಯಾವ ಕ್ಷೇತ್ರದಿಂದ ಸ್ಪರ್ಧಿಸಿದರೂ ಅವರ ವಿರುದ್ಧ ವಿರೋಧಿಗಳು ಪ್ರಬಲ ಪೈಪೋಟಿಯನ್ನೇ ನೀಡಲಿದ್ದಾರೆ. ಈ ಅರಿವಿರುವ ಸಿದ್ದರಾಮಯ್ಯ ಅವರು ತಮ್ಮ ಸ್ಪರ್ಧೆಯ ಕ್ಷೇತ್ರ ಆಯ್ಕೆಗೆ ಭಾರಿ ಎಚ್ಚರಿಕೆ ವಹಿಸುತ್ತಿದ್ದಾರೆ. ಕುಟುಂಬ ವರ್ಗದವರು ವರುಣಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದರೆ ಕೋಲಾರ ಜಿಲ್ಲೆಯ ನಾಯಕರು ಸ್ಪರ್ಧೆಗೆ ಕೋಲಾರ ಆಯ್ಕೆ ಮಾಡಿಕೊಳ್ಳುವಂತೆ ಮನವೊಲಿಸುವ ಪ್ರಯತ್ನವನ್ನು ಸತತವಾಗಿ ನಡೆಸಿದ್ದರು. ಇದರ ಫಲವಾಗಿ ಕೋಲಾರ ಕ್ಷೇತ್ರದ ಕಣ ಪರೀಕ್ಷೆಗೆ ಸಿದ್ದರಾಮಯ್ಯ ಮುಂದಾಗಿದ್ದಾರೆ.
ಆರೇಳು ಕ್ಷೇತ್ರದಿಂದ ಸ್ಪರ್ಧೆಗೆ ಒತ್ತಡವಿದೆ: ಸಿದ್ದರಾಮಯ್ಯ
ಹೈಕಮಾಂಡ್ ಹೇಳಿದ ಕಡೆ ಸ್ಪರ್ಧೆ ಮಾಡುವೆ
ಕೋಲಾರಕ್ಕೆ ಬನ್ನಿ ಎಂದು ಕರೆಯುತ್ತಿದ್ದಾರೆ, ಹೀಗಾಗಿ ಅಲ್ಲಿಗೆ ಹೋಗುತ್ತಿದ್ದೇನೆ. ಕೆ.ಎಚ್. ಮುನಿಯಪ್ಪ, ರಮೇಶ್‌ಕುಮಾರ್ ಅಂಡ್ ಕಂಪನಿ ಜತೆ ಮಾತನಾಡಿದ್ದೇನೆ. ಒಟ್ಟಾಗಿ ಕೆಲಸ ಮಾಡುತ್ತೇವೆ ಬನ್ನಿ ಎಂದಿದ್ದಾರೆ. ನನ್ನ ಆಯ್ಕೆಯಲ್ಲಿ 3-4 ಕ್ಷೇತ್ರ ಇದೆ. ಅದನ್ನು ಹೈಕಮಾಂಡ್‌ಗೆ ಹೇಳುತ್ತೇನೆ. ಅವರು ಎಲ್ಲಿ ಸ್ಪರ್ಧೆ ಮಾಡು ಎನ್ನುತ್ತಾರೋ ಅಲ್ಲಿ ಸ್ಪರ್ಧೆ ಮಾಡುತ್ತೇನೆ.
- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ