ರಾಜಕಾರಣದಲ್ಲಿ ಏನು ಬೇಕಾದರೂ ಆಗ್ತದ, ಯಾವತ್ತೂ ಸೂರ್ಯ ಪೂರ್ವಕ್ಕೆ ಹುಟ್ಟೋದು ನಿಸರ್ಗ ನಿಯಮ. ಆದ್ರೆ ರಾಜಕಾರಣದಲ್ಲಿ ಏನು ಬೇಕಾದರೂ ಆಗುತ್ತದೆ. ಇಲ್ಲಿ ಯಾವತ್ತೂ ಮೆಥಾಮೆಟಿಕ್ಸ್ ಅಪ್ಲೈ ಆಗಲ್ಲ. ಏನೇ ಇದ್ದರೂ ಅದು ಕೆಮಿಷ್ಟ್ರಿ, ಟು ಪ್ಲಸ್ ಟು ಫೋರ್ ಆಗಬಹುದು.
ಬಾಗಲಕೋಟೆ (ಏ.02): ರಾಜಕಾರಣದಲ್ಲಿ ಏನು ಬೇಕಾದರೂ ಆಗ್ತದ, ಯಾವತ್ತೂ ಸೂರ್ಯ ಪೂರ್ವಕ್ಕೆ ಹುಟ್ಟೋದು ನಿಸರ್ಗ ನಿಯಮ. ಆದ್ರೆ ರಾಜಕಾರಣದಲ್ಲಿ ಏನು ಬೇಕಾದರೂ ಆಗುತ್ತದೆ. ಇಲ್ಲಿ ಯಾವತ್ತೂ ಮೆಥಾಮೆಟಿಕ್ಸ್ ಅಪ್ಲೈ ಆಗಲ್ಲ. ಏನೇ ಇದ್ದರೂ ಅದು ಕೆಮಿಷ್ಟ್ರಿ, ಟು ಪ್ಲಸ್ ಟು ಫೋರ್ ಆಗಬಹುದು. ಟೆನ್ ಕೂಡ ಆಗಬಹುದು. ಏನಾದರೂ ಆಗಬಹುದು. ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳು ಅಲ್ಲ. ಶಾಶ್ವತ ಮಿತ್ರರೂ ಅಲ್ಲ ಕಾಯ್ದು ನೋಡಿ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.
ಡಿ.ಕೆ.ಶಿವಕುಮಾರ್ ಬಿಜೆಪಿಗೆ ಬರ್ತಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಜಮಖಂಡಿಯಲ್ಲಿ ಉತ್ತರಿಸಿದ ಅವರು, ಡಿಕೆಶಿ ಬಿಜೆಪಿಗೆ ಬರುವುದು ನಮ್ಮ ನಡುವೆ ಇಲ್ಲ. ಇಂತಹ ವಿಚಾರ ನಾಲ್ಕು ಗೋಡೆ ಮಧ್ಯೆ ನಡೆಯುತ್ತದೆ. ಆದರೆ ಒಂದು ಮಾತ್ರ ಸತ್ಯ ಹೇಳ್ತಿನಿ. ಅವರು ಕೇಂದ್ರದ ಮುಖಂಡರನ್ನು ಭೇಟಿಯಾಗುತ್ತಿರುವುದು ಕರ್ನಾಟಕದ ಅನುಕೂಲಕ್ಕಾಗಿ ಎಂದು ಹೇಳಿದರು.
ಇತ್ತೀಚೆಗೆ ಬಿಜೆಪಿ ನಾಯಕರ ಜೊತೆಗೆ ಡಿಕೆಶಿ ಕಾಣಿಸಿಕೊಂಡ ವಿಚಾರದ ಕುರಿತು ಪ್ರತಿಕ್ರಿಯಿಸಿದ ನಿರಾಣಿ, ಕೆಲವೊಂದು ಪಕ್ಷದಲ್ಲಿ ಇರುತ್ತಾರೆ. ನಮ್ಮ ಪಕ್ಷದಲ್ಲಿ ಏನಾದರೂ ಕೆಲಸ ಬೇಕಾದರೆ ನಾವು ಬೇರೆ ಬೇರೆ ಸಚಿವರು, ಶಾಸಕರನ್ನು ಭೇಟಿಯಾಗುತ್ತಿರುತ್ತೇವೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಬೇರೆ ಪಕ್ಷದವರು ಆಯಾ ಇಲಾಖೆಯ ಕೆಲಸದ ನಿಮಿತ್ತ ಕೇಂದ್ರ ಸಚಿವರನ್ನು ಭೇಟಿಯಾಗಿರಬಹುದು. ದೆಹಲಿಗೆ ಹೋಗಿ ಭೇಟಿಯಾಗೋದು ಸರ್ವೇ ಸಾಮಾನ್ಯ. ಆ ರೀತಿ ಅವರೂ ಭೇಟಿಯಾಗಿರಬಹುದು. ನಾನು ಅವರ ಜೊತೆಗೆ ವೇದಿಕೆ ಮೇಲೆ ಮಾತಾಡಿದೆ ಎಂದು ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಡಿ.ಕೆ.ಶಿವಕುಮಾರ್ ಬಿಜೆಪಿಗೆ ಬರ್ತಾರೆ, ಮುರುಗೇಶ ನಿರಾಣಿ ಕಾಂಗ್ರೆಸ್‌ಗೆ ಹೋಗ್ತಾರೆ ಅಂತಲ್ಲ ಎಂದು ಸಮರ್ಥಿಸಿಕೊಂಡರು.
ನಟಿ ರನ್ಯಾಗೆ ಜಮೀನು ಹಂಚಿಕೆಯಲ್ಲಿ ಕಾನೂನು ಲೋಪದೋಷ ಇಲ್ಲ: ಮುರುಗೇಶ ನಿರಾಣಿ
ಜಮಖಂಡಿ ನಗರದಲ್ಲಿ ಡಿಕೆಶಿ ಜೊತೆಗೆ ವೇದಿಕೆಯಲ್ಲಿ ಪಿಸುಮಾತು ವಿಚಾರವಾಗಿ ಮಾಧ್ಯಮದವರು ಪ್ರಶ್ನೆಗೆ ಪ್ರತಿಕ್ರಿಯಿಸಿದ ನಿರಾಣಿ, ಆತ್ಮೀಯ ಸ್ನೇಹಿತರಾದ ಡಿಕೆಶಿ ಇಲ್ಲಿಗೆ ಬಂದಿದ್ದರು. ಅವರ ಜೊತೆಗೆ ಈ ಭಾಗದ ನೀರಾವರಿ ಯೋಜನೆ ಕುರಿತು ಮಾತಾಡಿದ್ದೇನೆ. ಆಮೆಗತಿಯಲ್ಲಿ ನಡೆಯುತ್ತಿರುವ ಯೋಜನೆಗಳಿಗೆ ವೇಗ ಸಿಗಲಿ ಎಂದು ಚರ್ಚೆ ಮಾಡಿದ್ದೇನೆ. ಹೊಸ ಹೊಸ ಯೋಜನೆ ಮಾಡಬೇಕು. ಆಲಮಟ್ಟಿ ಎತ್ತರವನ್ನು ೫೨೪.೨೫೬ಕ್ಕೆ ಏರಿಸಿ ಪರಿಹಾರ ನೀಡುವ ಕುರಿತು ಚರ್ಚಿಸಿದ್ದು, ಅದಕ್ಕವರು ಸ್ಪಂದಿಸಿದ್ದಾರೆ. ನಿಮ್ಮ ಕಾರ್ಖಾನೆ ಯಾವ ರೀತಿ ನಡೆಯುತ್ತಿದೆ. ರೈತರಿಗೆ ಯಾವ ರೀತಿ ಪರಿಹಾರ ಕೊಡುತ್ತಿದ್ದೀರಿ ಎಂದು ಡಿ.ಕೆ. ಶಿವಕುಮಾರ್ ಕೇಳಿದರು. ಸ್ನೇಹದ ರೂಪದಲ್ಲಿ ಮಾತುಕತೆ ಆಯ್ತು. ಬೇರೆ ಅರ್ಥ ಬೇಡ ಎಂದು ಹೇಳಿದರು.