'ವಿಜಯೇಂದ್ರ ಆಡಿಯೋ-ವಿಡಿಯೋ ನನ್ನ ಬಳಿ ಇವೆ' ಯತ್ನಾಳ್ ಹೊಸ ಬಾಂಬ್!

ಬಿಜೆಪಿಯಿಂದ ಉಚ್ಚಾಟನೆಗೊಂಡ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದಾರೆ. ತಮ್ಮ ಬಳಿ ಸಾವಿರಾರು ಕೋಟಿ ರೂಪಾಯಿ ಹಗರಣದ ದಾಖಲೆಗಳು ಮತ್ತು ಆಡಿಯೋಗಳಿವೆ ಎಂದು ಅವರು ಹೇಳಿದ್ದಾರೆ, ಮತ್ತು ಸಂದರ್ಭ ಬಂದಾಗ ಅವುಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.


ಬೆಂಗಳೂರು (ಏ.2): ಬಿಜೆಪಿಯಿಂದ ಉಚ್ಚಾಟನೆಗೊಂಡ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್ ಎದುರು ಹೊಸ ಬಾಂಬ್ ಸಿಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮುಂದಿಟ್ಟುಕೊಂಡು, ತಮ್ಮ ಬಳಿ ಸಾವಿರಾರು ಕೋಟಿ ರೂಪಾಯಿ ಹಗರಣದ ದಾಖಲೆಗಳು ಮತ್ತು ಆಡಿಯೋಗಳಿವೆ ಎಂದು ಯತ್ನಾಳ್ ಹೇಳಿದ್ದಾರೆ. ಸಂದರ್ಭ ಬಂದಾಗ ಈ ದಾಖಲೆಗಳನ್ನು ಮತ್ತು ಆಡಿಯೋಗಳನ್ನು ವಿಧಾನಸಭೆಯಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.

ಭ್ರಷ್ಟಾಚಾರದ ದಾಖಲೆಗಳು ಮತ್ತು ಆಡಿಯೋಗಳ ಬಗ್ಗೆ ಯತ್ನಾಳ್ ಹೇಳಿಕೆ
ಯತ್ನಾಳ್ ಪ್ರಕಾರ, ತಮ್ಮ ಬಳಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಮಾತಿನ ಆಡಿಯೋಗಳು ಇವೆ. ವಿಜಯೇಂದ್ರ ಮಾತನಾಡಿರುವ ಆಡಿಯೋಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದೇನೆ. ಸಂದರ್ಭ ಬಂದಾಗ ಆಡಿಯೋ  ಬಿಡುಗಡೆ ಮಾಡುತ್ತೇನೆ. ಕೊರೊನಾ ಸಂದರ್ಭದಲ್ಲಿ ನಡೆದ ಭ್ರಷ್ಟಾಚಾರದ ಒಂದು ಸಾವಿರ ಪುಟಗಳ ದಾಖಲೆಗಳು ನನ್ನ ಬಳಿ ಇವೆ ಎಂದು ಅವರು ತಿಳಿಸಿದ್ದಾರೆ. ಕೊರೊನಾ ಕಿಟ್‌ಗಳಲ್ಲಿ, ಬೆಡ್ ಬಾಡಿಗೆಯಲ್ಲಿ ಮತ್ತು ಅಂತ್ಯಕ್ರಿಯೆ ಜಾಗದಲ್ಲಿ ಭಾರೀ ಗೋಲ್ಮಾಲ್ ನಡೆದಿದೆ ಎಂದು ಆರೋಪಿಸಿದ ಯತ್ನಾಳ್, 10 ಸಾವಿರಕ್ಕೆ ಖರೀದಿಸಿದ ಬೆಡ್‌ಗೆ ದಿನಕ್ಕೆ 30 ಸಾವಿರ ಬಾಡಿಗೆ ಪಡೆದಿದ್ದಾರೆ. ಇದರ ದಾಖಲೆಗಳು ನನ್ನ ಬಳಿ ಇವೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

Latest Videos

ಇದನ್ನೂ ಓದಿ: 18 ಶಾಸಕರ ಸಸ್ಪೆಂಡ್ ವಾಪಸ್ ಕೋರಿ ಸ್ಪೀಕರ್‌ಗೆ ಅಶೋಕ್ ಪತ್ರ! ಬಿಜೆಪಿಯಲ್ಲಿ ಅಸಮಾಧಾನ!

ಸಿಎಂ ಸಿದ್ದರಾಮಯ್ಯಗೆ ಸವಾಲ್

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲ್ ಹಾಕಿರುವ ಯತ್ನಾಳ್, 'ತಾಕತ್ತಿದ್ದರೆ ತನಿಖೆ ಮಾಡಲಿ. ಭೂಮಿ ಹೊಡೆದ ದಾಖಲೆಗಳು, ಕೊರೊನಾ ಹಗರಣದ ದಾಖಲೆಗಳು ಎಲ್ಲವೂ ನನ್ನ ಬಳಿ ಇವೆ. ವಿಧಾನಸಭೆಯಲ್ಲಿ ಈ ದಾಖಲೆಗಳನ್ನು ಪಕ್ಕಾ ಬಿಡುಗಡೆ ಮಾಡುತ್ತೇನೆ. ತಮ್ಮ ಬಳಿ 11 ಪುಟಗಳ ಹಗರಣದ ದಾಖಲೆಗಳನ್ನು ಹೈಕಮಾಂಡ್‌ಗೆ ಕಳುಹಿಸಿದ್ದಾಗಿ ಹೇಳಿರುವ ಅವರು, ಇದು ಕಟ್ ಆಂಡ್ ಪೇಸ್ಟ್ ಅಲ್ಲ, ನಿಜವಾದ ದಾಖಲೆಗಳು ಎಂದು ಸ್ಪಷ್ಟಪಡಿಸಿದ್ದಾರೆ.

ಉಚ್ಚಾಟನೆಯ ಹಿಂದಿನ ಅಸಲಿ ಕಹಾನಿ!

ತಮ್ಮ ಉಚ್ಚಾಟನೆಯ ಹಿಂದಿನ ಸತ್ಯವನ್ನು ಬಿಚ್ಚಿಟ್ಟಿರುವ ಯತ್ನಾಳ್, 'ಯಡಿಯೂರಪ್ಪ ಆತ್ಮಹತ್ಯೆ ಬೆದರಿಕೆ ಹಾಕಿ ನನ್ನನ್ನು ಉಚ್ಚಾಟನೆ ಮಾಡಿಸಿದ್ದಾರೆ. ಅವರು ಹೈಕಮಾಂಡ್‌ಗೆ ಫೋನ್ ಮಾಡಿ, 'ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ, ನನ್ನ ಹೆಣದ ಮೇಲೆ ರಾಜಕಾರಣ ಮಾಡಿ' ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಇಷ್ಟು ದಾಖಲೆಗಳನ್ನು ಕೊಟ್ಟ ಮೇಲೂ ನನ್ನ ಉಚ್ಚಾಟನೆ ಆಗಿದೆ. ಇದರ ಹಿಂದೆ ಬೇರೆ ಏನೋ ಇದೆ' ಎಂದು ಮತ್ತೊಂದು ಬಾಂಬ್ ಹಾಕಿದ್ದಾರೆ.

2028ರಲ್ಲಿ ಸಿಎಂ ಆಗುವೆ ಎಂದ ಯತ್ನಾಳ್

'ನಾನು ಅಷ್ಟು ಸಾಮಾನ್ಯನಲ್ಲ. ನನ್ನನ್ನು ಜೋಕರ್ ಎಂದು ತಿಳಿದುಕೊಂಡಿರಬಹುದು. ಆದರೆ 2028ರಲ್ಲಿ ನಾನು ಸಿಎಂ ಆಗುತ್ತೇನೆ. ಇದು ಜೋಕ್ ಅಲ್ಲ, ನನ್ನ ನಂಬಿಕೆ. ನಂಬಿಕೆ ಇಲ್ಲದಿದ್ದರೆ ನಿಮ್ಮ ಚಾನೆಲ್‌ನಲ್ಲಿ ಜೋಕರ್ ಎಂದು ಪ್ರಸಾರ ಮಾಡಿ. ನಾನು ಸಿಎಂ ಆದರೆ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕುತ್ತೇನೆ' ಎಂದು ಯತ್ನಾಳ್ ವಿಶ್ವಾಸದಿಂದ ಹೇಳಿದ್ದಾರೆ. ಪ್ರಧಾನಮಂತ್ರಿ ಮೋದಿ ಭ್ರಷ್ಟಾಚಾರದ ವಿರುದ್ಧ ಇರುವಾಗಲೇ ಇಂತಹ ಘಟನೆಗಳು ನಡೆಯುತ್ತಿರುವುದು ದುರಂತ ಎಂದು ಅವರು ಟೀಕಿಸಿದ್ದಾರೆ.

ಗೋವಿಂದ ಕಾರಜೋಳ ಮತ್ತು ವಿಜಯೇಂದ್ರ ವಿಚಾರ

ಗೋವಿಂದ ಕಾರಜೋಳ ಮತ್ತು ಸುಧಾಕರ್ ಅವರ ಎಂಪಿ ಟಿಕೆಟ್ ಹೇಗೆ ಸಿಕ್ಕಿತು ಎಂದು ಹೇಳಲಿ ಎಂದು ಪ್ರಶ್ನಿಸಿರುವ ಯತ್ನಾಳ್, 'ಕಾರಜೋಳ ನೀರಾವರಿ ಸಚಿವರಾಗಿದ್ದಾಗ ಎಲ್ಲ ಡೀಲ್‌ಗಳನ್ನು ವಿಜಯೇಂದ್ರ ಮಾಡುತ್ತಿದ್ದರು. ಚಿತ್ರದುರ್ಗದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ' ಎಂದು ಆರೋಪಿಸಿದ್ದಾರೆ.

ನಡಹಳ್ಳಿಗೆ ಸವಾಲ್

ನಡಹಳ್ಳಿ ತಮ್ಮ ಕುರಿತು ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದಕ್ಕೆ ಪ್ರತಿಕ್ರಿಯಿಸಿರುವ ಯತ್ನಾಳ್, 'ಅದು ಹಂದಿ ಎಂದು ನಾನು ಭಾವಿಸಿದ್ದೇನೆ. ಹಂದಿಯ ಬಗ್ಗೆ ಮಾತನಾಡುವುದಿಲ್ಲ. ತಾಕತ್ತು, ಧಮ್ ಇದ್ದರೆ ನಡಹಳ್ಳಿ ದಾಖಲೆ ಬಿಡುಗಡೆ ಮಾಡಲಿ' ಎಂದು ಸವಾಲ್ ಹಾಕಿದ್ದಾರೆ. 'ವಿಜಯೇಂದ್ರ ನನಗೆ ಏನಾದರೂ ಮಾಡಿದರೆ, ನಾನು ಆಡಿಯೋ ಬಿಡುಗಡೆ ಮಾಡುತ್ತೇನೆ'ಎಂದು ಮತ್ತೊಮ್ಮೆ ಆಡಿಯೋ ಬಾಂಬ್ ಎತ್ತಿ ಹಿಡಿದಿದ್ದಾರೆ.

ಇದನ್ನೂ ಓದಿ: ಇಂದಿನಿಂದ ಬಿಜೆಪಿ 'ಬೆಲೆ ಏರಿಕೆ' ವಿರುದ್ಧ ಅಹೋರಾತ್ರಿ ಹೋರಾಟ, ಯಡಿಯೂರಪ್ಪ ಹೇಳಿದ್ದೇನು?

ಒಟ್ಟಿನಲ್ಲಿ ಯತ್ನಾಳ್ ಅವರ ಈ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿವೆ. ತಮ್ಮ ಉಚ್ಚಾಟನೆಯ ಹಿಂದಿನ ಕಥೆಯನ್ನು ಬಿಚ್ಚಿಟ್ಟು, ಭ್ರಷ್ಟಾಚಾರದ ದಾಖಲೆಗಳನ್ನು ಬಿಡುಗಡೆ ಮಾಡುವ ಘೋಷಣೆಯೊಂದಿಗೆ, ಯತ್ನಾಳ್ ರಾಜಕೀಯ ವಲಯದಲ್ಲಿ ಹೊಸ ತಿರುವು ತರುವ ಸಾಧ್ಯತೆ ಇದೆ.

click me!