ರಾಜ್ಯ ಬಿಜೆಪಿಗೆ ಅಮಿತ್‌ ಶಾ 3 ಗುರಿ: ಹಳೆ ಮೈಸೂರು ಬಗ್ಗೆ 2 ತಾಸು ಚರ್ಚೆ

By Govindaraj SFirst Published Dec 31, 2022, 3:40 AM IST
Highlights

ಜೆಡಿಎಸ್‌ ಪ್ರಾಬಲ್ಯ ಇರುವ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪಾರುಪತ್ಯ ಮೆರೆಯಲು ರಣತಂತ್ರ ಹೆಣೆಯುವ ದೃಷ್ಟಿಯಿಂದ ‘ಚುನಾವಣಾ ಚಾಣಕ್ಯ’ ಎಂದೇ ಹೆಸರಾದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶುಕ್ರವಾರ ಮಹತ್ವದ ಸಭೆ ನಡೆಸಿದ್ದಾರೆ. 

ಬೆಂಗಳೂರು (ಡಿ.31): ಜೆಡಿಎಸ್‌ ಪ್ರಾಬಲ್ಯ ಇರುವ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪಾರುಪತ್ಯ ಮೆರೆಯಲು ರಣತಂತ್ರ ಹೆಣೆಯುವ ದೃಷ್ಟಿಯಿಂದ ‘ಚುನಾವಣಾ ಚಾಣಕ್ಯ’ ಎಂದೇ ಹೆಸರಾದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶುಕ್ರವಾರ ಮಹತ್ವದ ಸಭೆ ನಡೆಸಿದ್ದಾರೆ. ಮೈಸೂರು ಭಾಗದ ಬಿಜೆಪಿ ಸಂಸದರು, ಶಾಸಕರು, ಜಿಲ್ಲಾಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರ ಜತೆ ಸಭೆ ನಡೆಸಿದ ಶಾ, ಹಳೇ ಮೈಸೂರಲ್ಲಿ ಪಕ್ಷದ ಸಂಘಟನೆ ಮಂತ್ರ ಪಠಣ ಮಾಡಿದ್ದು, ಸಂಘಟನೆ ಯಶಸ್ವಿಗೊಳಿಸಲು 1 ತಿಂಗಳ ಗಡುವನ್ನು ರಾಜ್ಯದ ನಾಯಕರಿಗೆ ನೀಡಿದ್ದಾರೆ.

ನಗರದ ತಾಜ್‌ವೆಸ್ಟ್‌ ಎಂಡ್‌ನಲ್ಲಿ ರಾತ್ರಿ 8 ಗಂಟೆಯಿಂದ 2 ತಾಸುಗಳ ಕಾಲ ನಡೆದ ಸಭೆಯಲ್ಲಿ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಭದ್ರಕೋಟೆಗೆ ನುಗ್ಗಲು ರಾಜಕೀಯ ತಂತ್ರಗಾರಿಕೆ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಲಾಯಿತು. ಈ ವೇಳೆ, ‘ಸಂಘಟನೆಯನ್ನು ಬಲಗೊಳಿಸಿ ಯಶಸ್ವಿಗೊಳಿಸಲು 1 ತಿಂಗಳ ಗಡುವು ನೀಡಲಾಗಿದೆ. ಮುಂದಿನ ತಿಂಗಳು ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸಿದಾಗ ಎಲ್ಲಾ ಯೋಜನೆಗಳು ಸರಿಯಾದ ಮಾರ್ಗದಲ್ಲಿ ಜಾರಿಯಾಗುತ್ತಿರಬೇಕು. ಈಗಿರುವ ವ್ಯವಸ್ಥೆ ಸುಧಾರಣೆಯಾಗಬೇಕು ಎಂದು ಶಾ ನಿರ್ದೇಶನ ನೀಡಿದರು’ ಎಂದು ಮೂಲಗಳು ಹೇಳಿವೆ.

ಸಮುದಾಯವನ್ನು ಮಂಗ ಮಾಡಲು ಬಿಜೆಪಿ ಸರ್ಕಾರ ಹೊರಟಿದೆ: ಎಚ್‌.ಡಿ.ಕುಮಾರಸ್ವಾಮಿ

‘ಹಳೆ ಮೈಸೂರು ಭಾಗದಲ್ಲಿ ಯಾವುದೇ ರೀತಿಯ ಹೊಂದಾಣಿಕೆ ರಾಜಕೀಯ ಬೇಡ. ಈ ಭಾಗದಲ್ಲಿ ಜೆಡಿಎಸ್‌ ಮೊದಲ ಶತ್ರುವಾಗಿದ್ದು, ಕಾಂಗ್ರೆಸ್‌ ಎರಡನೇ ಶತ್ರು ಆಗಿದೆ. ಹೀಗಾಗಿ ಚುನಾವಣೆಯಲ್ಲಿ ಒಳಹೊಂದಾಣಿಕೆ ಮಾಡಿಕೊಳ್ಳದೆ ನೇರವಾಗಿ ಚುನಾವಣೆ ಎದುರಿಸಬೇಕು’ ಎಂದೂ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಸಭೆಯಲ್ಲಿ ಚಾಮರಾಜನಗರ, ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ಹಾಸನ, ರಾಮನಗರ, ಕೋಲಾರ ಜಿಲ್ಲೆಯ ಮುಖಂಡರು ಇದ್ದರು. ಜಿಲ್ಲಾ ಘಟಕಗಳ ಅಧ್ಯಕ್ಷರಿಂದ ಆಯಾಯ ಜಿಲ್ಲೆಯ ಪರಿಸ್ಥಿತಿ ಕುರಿತು ಶಾಗೆ ವರದಿ ಸಲ್ಲಿಕೆ ಮಾಡಲಾಯಿತು. ಕ್ಷೇತ್ರವಾರು ರಾಜಕೀಯ ಚಿತ್ರಣ ಪಡೆದುಕೊಂಡ ಶಾ, ಸಭೆಯ ಕೊನೆಯ 10 ನಿಮಿಷಗಳ ಕಾಲ ಭಾಷಣ ಮಾಡಿ ಸಂಘಟನೆಗೆ ಒತ್ತು ನೀಡುವಂತೆ ಸೂಚನೆ ನೀಡಿದರು. ಇದರ ಜತೆಗೆ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನವನ್ನು ಬಿಜೆಪಿ ಗಳಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಿ ಕಾರ್ಯೋನ್ಮುಖವಾಗುವಂತೆ ನಿರ್ದೇಶಿಸಿದರು.

ಪ್ರವಾಸ ಮಾಡಿ, ಸರ್ಕಾರದ ಸಾಧನೆ ತಿಳಿಸಿ: ಚುನಾವಣಾ ಸಿದ್ಧತೆ, ಕೇಂದ್ರ ನಾಯಕರ ರಾಜ್ಯ ಪ್ರವಾಸದ ವೇಳೆ ಸಮಾರಂಭಗಳ ಆಯೋಜನೆ, ಕಾರ್ಯಕರ್ತರ ಜೋಡಣೆ, ಸರ್ಕಾರದ ಯೋಜನೆಗಳ ಮಾಹಿತಿಯನ್ನು ಪರಿಣಾಮಕಾರಿಯಾಗಿ ಜನರಿಗೆ ತಿಳಿಸಬೇಕು ಎಂದು ಶಾ ಅವರು ಸೂಚನೆ ನೀಡಿದರು. ಬೂತ್‌ ಮಟ್ಟದಿಂದ ಕಾರ್ಯಕ್ರಮಗಳ ಆಯೋಜನೆ, ಸೇರಿದಂತೆ ಮುಂದಿನ 3 ತಿಂಗಳ ಸಂಘಟನಾತ್ಮಕ ಚಟುವಟಿಕೆಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು ಎಂದೂ ಮೂಲಗಳು ಹೇಳಿವೆ.

ಒಳಮೈತ್ರಿಗೆ ಕಡಿವಾಣ ಹಾಕಿಸಿ- ಯೋಗೇಶ್ವರ್‌, ಪ್ರೀತಂ: ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ರಾಜಕೀಯ ಕಡು ವಿರೋಧಿ ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಮತ್ತು ಹಾಸನ ಜಿಲ್ಲೆಯಲ್ಲಿ ಮಾಜಿ ಸಚಿವ ಎಚ್‌.ಡಿ.ರೇವಣ್ಣಗೆ ಎದುರಾಳಿಯಾಗಿರುವ ಶಾಸಕ ಪ್ರೀತಂಗೌಡ ಸೇರಿದಂತೆ ಇತರೆ ಕೆಲವು ನಾಯಕರು, ‘ಹಳೆ ಮೈಸೂರು ಭಾಗದಲ್ಲಿ ಒಳಮೈತ್ರಿಗೆ ಕಡಿವಾಣ ಹಾಕಿಸಬೇಕು’ ಎಂದು ಅಮಿತ್‌ ಶಾಗೆ ಸಭೆಯಲ್ಲಿ ಕೋರಿದ್ದಾರೆ ಎಂದು ಮೂಲಗಳು ಹೇಳಿವೆ. ‘ಬಿಜೆಪಿಯಲ್ಲಿಯೇ ಕೆಲವರು ಜೆಡಿಎಸ್‌ ಜತೆ ಒಳಮೈತ್ರಿ ಮಾಡಿಕೊಳ್ಳುವುದರಿಂದ ಪಕ್ಷಕ್ಕೆ ಹೆಚ್ಚಿನ ಸ್ಥಾನ ಗಳಿಕೆ ಮಾಡಲು ಕಷ್ಟಕರವಾಗುತ್ತಿದೆ. 

ಹೀಗಾಗಿ ಒಳಮೈತ್ರಿಗೆ ಕಡಿವಾಣ ಹಾಕಬೇಕಿದೆ’ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ಸಭೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಸೇರಿದಂತೆ 41 ಮುಖಂಡರಿಗೆ ಸಭೆಗೆ ಆಹ್ವಾನ ನೀಡಲಾಗಿತ್ತು. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಮತ್ತು ರಾಜ್ಯ ಸಹ ಉಸ್ತುವಾರಿ ಡಿ.ಕೆ.ಅರುಣಾ ಅವರಿಗೂ ಆಹ್ವಾನಿಸಲಾಗಿತ್ತು. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಸಭೆಗೆ ಆಹ್ವಾನಿಸಲಾಗಿತ್ತಾದರೂ ವಿದೇಶ ಪ್ರವಾಸದಲ್ಲಿರುವ ಕಾರಣ ಸಭೆಗೆ ಗೈರಾಗಿದ್ದರು.

ರಾಜ್ಯದ ಸಾಲ 5.4ಲಕ್ಷ ಕೋಟಿಗೆ ಹೆಚ್ಚಳ: ಕೃಷ್ಣ ಬೈರೇಗೌಡ ಆತಂಕ

ಶ್ರೀನಿವಾಸಪ್ರಸಾದ್‌, ವಿಶ್ವನಾಥ್‌, ವಿಜಯೇಂದ್ರಗೆ ಆಹ್ವಾನವಿಲ್ಲ: ಅಮಿತ್‌ ಶಾ ಸಭೆಗೆ ಹಳೆ ಮೈಸೂರು ಭಾಗದ ಪ್ರಭಾವಿ ನಾಯಕ ಮತ್ತು ಸಂಸದ ಶ್ರೀನಿವಾಸ ಪ್ರಸಾದ್‌, ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಅವರನ್ನು ಸಭೆಗೆ ಆಹ್ವಾನಿಸದಿರುವುದು ಕುತೂಹಲ ಮೂಡಿಸಿದೆ. ಅಲ್ಲದೇ, ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೂ ಸಭೆಗೆ ಆಹ್ವಾನ ನೀಡದಿರುವುದು ಪಕ್ಷದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮೈಸೂರು ಸಂಸದ ಪ್ರತಾಪ್‌ಸಿಂಹ್‌ಗೆ ಮಾತ್ರ ಆಹ್ವಾನ ನೀಡಲಾಗಿತ್ತು.

ಶಾ ಗುರಿಗಳು
1.ಹಳೆ ಮೈಸೂರಲ್ಲಿ ಸಂಘಟನೆ ವೃದ್ಧಿಗೆ ತಿಂಗಳ ಗಡುವು
2.ಒಳ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಕಡಿವಾಣ
3.ಹೆಚ್ಚು ಸ್ಥಾನ ಗೆಲ್ಲಲು ಕಾರ‍್ಯತಂತ್ರ ರೂಪಿಸಲು ಸೂಚನೆ

click me!