
ಮಂಡ್ಯ (ಏ.09): ಲೋಕಸಭಾ ಚುನಾವಣೆಯಲ್ಲಿ ಮಂಡ್ಯದ ಕೈ ಅಭ್ಯರ್ಥಿ ಸ್ಟಾರ್ ಚಂದ್ರು ಅವರ ಪರವಾಗಿ ಪ್ರಚಾರ ಮಾಡಲು ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಆಗಮಿಸಲಿದ್ದಾರೆ. ಜೊತೆಗೆ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರೂ ಕೂಡ ಪ್ರಚಾರಕ್ಕೆ ಬರಲಿದ್ದಾರೆ. ಏ.17 ಅಥವಾ ಏ.20ರಂದು ಮಂಡ್ಯದಲ್ಲಿ ಕಾಂಗ್ರೆಸ್ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಂಡ್ಯ ಶಾಸಕ ರವಿಕುಮಾರ್ ಗಣಿಗ ಹೇಳಿದರು.
ಈ ಕುರಿತು ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಕ್ಕಲಿಗರ ಭದ್ರಕೋಟೆಯಲ್ಲಿ ಪಾರುಪತ್ಯ ಸಾಧಿಸಲು ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರಚಾರಕ್ಕೆ ಆಗಮಿಸಲಿದ್ದಾರೆ ಎಂದು ಕೈ ನಾಯಕರ ಪ್ರವಾಸದ ಬಗ್ಗೆ ಕೈ ಶಾಸಕ ರವಿಕುಮಾರ್ ಮಾಹಿತಿ ನೀಡಿದರು. ಕುಮಾರಸ್ವಾಮಿ ವಿರುದ್ದ ಸಾಲು ಸಾಲು ಪ್ರಚಾರ ಹಮ್ಮಿಕೊಳ್ಳಲಾಗಿದೆ. ಮತ್ತೊಂದು ಕಡೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಕೂಡ ಹೆಚ್‌ಡಿಕೆ ವಿರುದ್ಧ ಪ್ರಚಾರಕ್ಕೆ ಧುಮುಕಲಿದ್ದಾರೆ. ಸ್ವತಃ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರೇ ಕೈ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಮತಶಿಕಾರಿ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಏಪ್ರಿಲ್ 17 ಅಥವಾ 20 ರಂದು ಮಂಡ್ಯದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಈ ಸಮಾವೇಶಕ್ಕೆ ಒಂದು ಲಕ್ಷ ಜನ ಸೇರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಲೋಕಸಭೆ ಚುನಾವಣೆ 2024: 14 ಕ್ಷೇತ್ರದಲ್ಲಿ 247 ಸ್ಪರ್ಧಿಗಳು ಕಣದಲ್ಲಿ..!
ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಪರವಾಗಿ ಸುಮಲತಾ ಪ್ರಚಾರಕ್ಕೆ ಬರುವ ಬಗ್ಗೆ ಮಾತನಾಡಿ, ಕಳೆದ ಚುನಾವಣೆಯಲ್ಲಿ ದಾಯಾದಿಗಳಾಗಿದ್ದ ಅಕ್ಕ-ತಮ್ಮ ಈ ಚುನಾವಣೆಯಲ್ಲಿ ಒಂದಾಗಿದ್ದಾರೆ. ಅವರ ಬಗ್ಗೆ ನಾವು ಯಾಕೆ ಮಾತನಾಡೋದು. ಕಳೆದ ಚುನಾವಣೆಯಲ್ಲಿಯೇ ಅಕ್ಕ-ತಮ್ಮ ಒಂದಾಗಿದ್ರೆ ಚೆನ್ನಾಗಿರೋದು. ಹೋದ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಬೆಂಬಲ ಕೊಟ್ಟಿಲ್ಲ ಅಂತಾ ಸುಮಲತಾ ಹೇಳ್ತಿದ್ದಾರೆ. ನಾನೇ ಗೆದ್ದೆ ಅಂತಿದ್ದಾರೆ, ಅದು ಮುಗಿದ ಅಧ್ಯಾಯ. ಈಗ ತಮ್ಮನ ಪರ ಅಕ್ಕ ಇದ್ದಾರೆ. ಅವರ ಚುನಾವಣೆ ಅವರದು, ನಮ್ಮ ಚುನಾವಣೆ ನಮ್ಮದು ಎಂದರು.
ಇನ್ನು ಅಂಬರೀಶಣ್ಣನ ಅಭಿಮಾನಿಗಳ ರಕ್ತ, ದೇಹ, ಮನಸ್ಸು ಕಾಂಗ್ರೆಸ್ ಆಗಿದೆ. ಅವರ ಅಭಿಮಾನಿಗಳು ಕಾಂಗ್ರೆಸ್ ಪರ ಇದ್ದಾರೆ. ಅಂಬರೀಶ್ ಬದುಕಿರುವವರೆಗೂ ಕಾಂಗ್ರೆಸ್ ಪಕ್ಷದವರಾಗಿಯೇ ಇದ್ದರು. ಅವರನ್ನ ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಮಂತ್ರಿ ಮಾಡಿತ್ತು. ಕಳೆದ ಚುನಾವಣೆಯಲ್ಲಿದ್ದ ಅಕ್ಕ-ತಮ್ಮನ ನಡುವೆ ದಾಯಾದಿ ಕಲಹ ಮರೆತು ಹೋಗಿದ್ದಾರಾ? ತಮ್ಮ, ಅಕ್ಕನಿಗೆ ಕೊಟ್ಟ ಕಾಟವನ್ನ ಅಂಬಿ ಅಭಿಮಾನಿಗಳು ಮರೆಯುತ್ತಾರಾ? ಅಂಬರೀಶ್ ಅಭಿಮಾನಿಗಳು ಕಾಂಗ್ರೆಸ್ ಪರ ಇರ್ತಾರೆ. 2 ಲಕ್ಷ ಮತಗಳಿಂದ ಸ್ಟಾರ್ ಚಂದ್ರು ಗೆಲ್ತಾರೆ ಎಂದು ಶಾಸಕ ಗಣಿಗ ರವಿಕುಮಾರ್ ಹೇಳಿದರು.
ಮೂರು ಪಕ್ಷಗಳಿಗೂ ಒಳ ಏಟಿನ ಭೀತಿ- ಈ ಕ್ಷೇತ್ರಗಳ ಫಲಿತಾಂಶವೇ ಬದಲಾಗುತ್ತಾ?
ಮಂಡ್ಯದಲ್ಲಿ ಸಮಾವೇಶದ ಜೊತೆಗೆ ಮಧ್ಯದಲ್ಲಿ ಒಮ್ಮೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ದಿನ ಮತಬೇಟೆ ಮಾಡಲಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದ ಕೆ.ಆರ್.ನಗರ, ಕೆ.ಆರ್.ಪೇಟೆಯಲ್ಲಿ ಸ್ವತಃ ಸಿದ್ದರಾಮಯ್ಯ ಅವರೇ ಮತಯಾಚನೆ ಮಾಡಲಿದ್ದಾರೆ. ಅತ್ತ ಇನ್ನೊಂದು ದಿನ ಮಂಡ್ಯದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರವಾಸ ಕೈಗೊಳ್ಳಲಿದ್ದಾರೆ. ಮಂಡ್ಯವನ್ನ ಸಾಕಷ್ಟು ಪ್ರತಿಷ್ಠೆಯಾಗಿ ತೆಗೆದುಕೊಂಡಿರೊ ಕಾಂಗ್ರೆಸ್ ನಾಯಕರು ಸಾಲು ಸಾಲಾಗಿ ಬಂದು ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.