ಸಂವಿಧಾನದ ವಿರುದ್ಧ ವರ್ತಿಸಿದರೆ ಕ್ರಮ ಸಹಜ: ಯು.ಟಿ.ಖಾದರ್‌

By Kannadaprabha News  |  First Published Aug 9, 2023, 11:39 AM IST

ಚುನಾಯಿತ ಪ್ರತಿನಿಧಿಗಳು ಸಂವಿಧಾನಕ್ಕೆ ವಿರುದ್ಧವಾಗಿ ವರ್ತಿಸಿದಾಗ ಸ್ಪೀಕರ್‌ ಆಗಿ ನಾನು ಕೆಲವು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಇದು ಪಕ್ಷಪಾತಿ ಕ್ರಮವಲ್ಲ ಎಂದು ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ್‌ ಹೇಳಿದರು. 


ಬೆಂಗಳೂರು (ಆ.09): ಚುನಾಯಿತ ಪ್ರತಿನಿಧಿಗಳು ಸಂವಿಧಾನಕ್ಕೆ ವಿರುದ್ಧವಾಗಿ ವರ್ತಿಸಿದಾಗ ಸ್ಪೀಕರ್‌ ಆಗಿ ನಾನು ಕೆಲವು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಇದು ಪಕ್ಷಪಾತಿ ಕ್ರಮವಲ್ಲ ಎಂದು ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ್‌ ಹೇಳಿದರು. ಮಂಗಳವಾರ ಬೆಂಗಳೂರು ಪ್ರೆಸ್‌ಕ್ಲಬ್‌ ಏರ್ಪಡಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಒಂದು ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ವಿಧಾನಸಭಾ ಸ್ಪೀಕರ್‌ ಮೇಲೆ ವಿರೋಧ ಪಕ್ಷಗಳಿಂದ ಅನುಮಾನ ಬರುವುದು ಸಹಜವಾಗಿರುತ್ತದೆ. ಅದೇ ರೀತಿ ವಿಧಾನಸಭಾ ಕಲಾಪದ ವೇಳೆ ಅನುಮಾನಗಳು ಬರುವುದು ಸಹಜ. 

ಹೀಗಿದ್ದರೂ ಸದನ ನಡೆಸಿಕೊಂಡು ಹೋಗುವುದು ಸ್ಪೀಕರ್‌ ಜವಾಬ್ದಾರಿ. ಅದನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ ಎಂದರು. ಶಾಸಕರ (ಬಿಜೆಪಿ ಶಾಸಕರ) ಅಮಾನತು ವಿಚಾರ ಈಗಾಗಲೇ ಮುಗಿದು ಹೋಗಿರುವ ವಿಷಯವಾಗಿದೆ. ಶಾಸಕರನ್ನು ಅಮಾನತು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಸೂಚನೆ ಅಥವಾ ಸನ್ನೆಯನ್ನು ನೀಡಿಲ್ಲ. ಇದನ್ನು ನಾನೇ ತಿರ್ಮಾನ ಮಾಡಿದ್ದು. ಎಲ್ಲ ಸಂದರ್ಭದಲ್ಲಿಯೂ ನನಗೆ ಸಂವಿಧಾನವೇ ಮುಖ್ಯವಾಗುತ್ತದೆ. ನಮ್ಮ ಮತ್ತು ಶಾಸಕರ ಜಗಳ ಅಧಿವೇಶನ ಮುಗಿಯುವ ತನಕ ಮಾತ್ರ ಆಗಿರುತ್ತದೆ. 

Tap to resize

Latest Videos

ವಕೀಲರ ಸಮಾವೇಶದಿಂದ ದೂರ ಸರಿದ ಡಿ.ಕೆ.ಶಿವಕುಮಾರ್: ಯಾಕೆ ಗೊತ್ತಾ?

ಈಗ ಪರಿಸ್ಥಿತಿ ತಿಳಿಯಾಗಿದೆಯೋ ಇಲ್ಲವೋ ಮುಂದಿನ ಅಧಿವೇಶನ ಸಂದರ್ಭದಲ್ಲಿ ಗೊತ್ತಾಗಲಿದೆ’ ಎಂದು ಹೇಳಿದರು. ಈ ಹಿಂದೆ ವಿಧಾನಸಭಾ ಸ್ಪೀಕರ್‌ ಅವರಿಗೆ ಶಾಸಕರಿಂದ ಕಾಗದ ಪತ್ರ ಸಲ್ಲಿಕೆ ಆಗುತ್ತಿತ್ತು. ಈಗ ಪೆನ್‌ಡ್ರೈವ್‌, ಸಿ.ಡಿ.ಗಳು ಸಾಕ್ಷಾಧಾರವಾಗಿ ಸಲ್ಲಿಕೆಯಾಗುತ್ತಿವೆ. ಆದರೆ, ನಾವು ಯಾವುದೇ ಆರೋಪ ಕುರಿತು ತಕ್ಷಣವೇ ರೂಲಿಂಗ್‌ ಕೊಡಲಲ್ಲ. ಎಲ್ಲವನ್ನೂ ವಿವಿಧ ಆಯಾಮಗಳಿಂದ ಪರಿಶೀಲನೆ ಮಾಡುತ್ತೇವೆ. ಆ ನಂತರ ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದರು.

ಲಜ್ಜೆಗೇಡಿ ಮುಖ್ಯಮಂತ್ರಿ ಈ ರಾಜ್ಯಕ್ಕೆ ವಕ್ಕರಿಸಿದ್ದಾರೆ: ಎಚ್‌.ಡಿ.ಕುಮಾರಸ್ವಾಮಿ

ಟ್ರೋಲ್‌ನಿಂದ ನನ್ನ ಕನ್ನಡ ಪರಿಪಕ್ವ: ಕನ್ನಡ ಭಾಷೆಯ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಮಾಡಿದ್ದ ಕುರಿತು ಪ್ರತಿಕ್ರಿಯಿಸಿದ ಅವರು, ದೊಡ್ಡ ಸ್ಥಾನಕ್ಕೆ ನಾವು ಹೋಗಬೇಕಾದರೆ ಟ್ರೋಲ್‌ ಮಾಡುವವರ ಪಾತ್ರ ಇರುತ್ತದೆ, ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳವುದಿಲ್ಲ. ನಾವು ಶಾಲೆಯಲ್ಲಿ ಕನ್ನಡ, ಮನೆಯಲ್ಲಿ ಬ್ಯಾರಿ ಭಾಷೆ, ಸ್ನೇಹಿತರೊಂದಿಗೆ ತುಳು, ಕ್ರಿಶ್ಚಿಯನ್ನರೊಂದಿಗೆ ಕೊಂಕಣಿ ಮಾತನಾಡುತ್ತೇವೆ. ನಮ್ಮದು ಪುಸ್ತಕದಲ್ಲಿರುವ ಕನ್ನಡ. ಉಚ್ಚರಣೆಯಲ್ಲಿ ಕೆಲವು ಸಮಸ್ಯೆಗಳು ಇರಬಹುದು. ಟ್ರೋಲ್‌ಗಳಿಂದ ನನ್ನ ಕನ್ನಡ ಇನ್ನಷ್ಟು ಪರಿಪಕ್ವವಾಗುತ್ತದೆ’ ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರೆಸ್‌ ಕ್ಲಬ್‌ ಆಫ್‌ ಬೆಂಗಳೂರು ಅಧ್ಯಕ್ಷ ಶ್ರೀಧರ್‌, ಉಪಾಧ್ಯಕ್ಷ ಆನಂದ್‌ ಬೈದನಮನೆ, ಪ್ರಧಾನ ಕಾರ್ಯದರ್ಶಿ ಬಿ.ಪಿ.ಮಲ್ಲಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

click me!