
ಹೊಳಲ್ಕೆರೆ (ಏ.19): ದೇಶದ ರೇಲ್ವೆ ಇಲಾಖೆಯ ಮೂಲಭೂತ ಸೌಕರ್ಯ, ಉದ್ಯೋಗ, ಹೊಸ ಮಾರ್ಗಗಳ ಉನ್ನತೀಕರಣಕ್ಕಾಗಿ ಮುಂದಿನ 5 ವರ್ಷಗಳಲ್ಲಿ 58 ಲಕ್ಷ ಕೋಟಿ ರು. ಬಂಡವಾಳ ಹೂಡಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯೋಜನೆಗಳನ್ನು ಅನುಮೋದಿಸಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು. ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಬೆಂಗಳೂರು-ಹೊಸಪೇಟೆಗೆ ಸಂಚರಿಸಲಿರುವ ಪ್ಯಾಸೆಂಜರ್ ರೈಲಿಗೆ ಹೊಳಲ್ಕೆರೆ ಮತ್ತು ಅಮೃತಾಪುರ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಗೆ ಶುಕ್ರವಾರ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.
ಹೊಸಪೇಟೆಗೆ ಸಂಚರಿಸುವ ರೈಲನ್ನು ಹೊಳಲ್ಕೆರೆ ಮತ್ತು ಅಮೃತಾಪುರದಲ್ಲಿ ನಿಲ್ಲಿಸುವ ಬೇಡಿಕೆ ಬಹಳ ವರ್ಷಗಳಿಂದ ಇತ್ತು. ಅದು ಇಂದು ನೆರವೇರಿದೆ. ಇದರಿಂದ ಈ ಭಾಗದ ಜನರಿಗಷ್ಟೇ ಅಲ್ಲದೆ ಶಿವಮೊಗ್ಗ ನಗರದ ಕಡೆಗೆ ಸಂಚರಿಸುವ ಜನರಿಗೂ ಅನುಕೂಲವಾಗಲಿದೆ ಎಂದರು. ಕಳೆದ 10 ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ರೇಲ್ವೆ ಇಲಾಖೆಯನ್ನು ಉನ್ನತೀಕರಣಗೊಳಿಸಲು ಶ್ರಮಿಸಿದ್ದಾರೆ. ದೇಶದ ಪ್ರತಿಶತ 97ರಷ್ಟು ಮಾರ್ಗಗಳು ವಿದ್ಯುದೀಕರಣ ಆಗಿವೆ. ನಿಲ್ದಾಣಗಳಲ್ಲಿ ಸ್ವಚ್ಛತೆ, ಪ್ರಯಾಣಿಕರಿಗೆ ಅಗತ್ಯವಾದ ಮೂಲಭೂತ ಸೌಕರ್ಯ, ಉದ್ಯೋಗ ಸೃಷ್ಠಿ, ವ್ಯಾಪಾರೋದ್ಯಮದ ಬೆಳವಣಿಗೆ ಆಗಿದೆ ಎಂದರು.
ನನ್ನ ಗೆಲುವಿನಲ್ಲಿ ಯಡಿಯೂರಪ್ಪ ಶ್ರಮವಿದೆ: ಸಂಸದ ಗೋವಿಂದ ಕಾರಜೋಳ
ರೇಲ್ವೆ ಇಲಾಖೆ ಜಾಲ ಬಹು ದೊಡ್ಡದು. ದೇಶದ ತುಂಬೆಲ್ಲಾ ಇದರ ಜಾಲ ಹರಡಿದೆ. ಇದನ್ನು ಅಭಿವೃದ್ಧಿಪಡಿಸಿದರೆ ಉದ್ಯಮ ಮತ್ತು ಉದ್ಯೋಗಗಳ ಸೃಷ್ಟಿ ಆಗುತ್ತದೆ. ಈಗಾಗಲೇ ಸುಮಾರು 12 ಲಕ್ಷ ನೌಕರರು ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು. ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ರಸ್ತೆ ಮತ್ತು ರೇಲ್ವೆ ಇಲಾಖೆಗಳಿಗೆ ಪ್ರಾಶಸ್ತ್ಯ ನೀಡಿದ್ದರಿಂದ ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ ಚತುಷ್ಪಥ ಹೆದ್ದಾರಿಗಳಾದವು. ಮೋದಿ ಅವರ ಕಾಲದಲ್ಲಿ ರೇಲ್ವೆ ಇಲಾಖೆಯೂ ಕೂಡ ಸಾಕಷ್ಟು ಅಭಿವೃದ್ಧಿ ಮಾಡಿದೆ ಎಂದರು.
ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ನಿತಿನ್ ಗಡ್ಕರಿರವರು ಒಂದು ದಿನಕ್ಕೆ 63 ಕಿ.ಮೀ. ಹೆದ್ದಾರಿಯಾಗಬೇಕೆಂಬ ಸೂಚನೆ ನೀಡಿರುವುದರಿಂದ ದೇಶದೆಲ್ಲೆಡೆ ಅತ್ಯುತ್ತಮ ರಸ್ತೆಗಳಾಗುತ್ತಿವೆ. ಇನ್ನು ನಾಲ್ಕು ವರ್ಷದೊಳಗೆ ಅಮೇರಿಕಾವನ್ನು ಮೀರಿಸುವ ರೀತಿಯಲ್ಲಿ ಭಾರತದಲ್ಲಿ ಹೆದ್ದಾರಿಗಳನ್ನು ನಿರ್ಮಿಸುವುದಾಗಿ ಹೇಳಿರುವುದನ್ನು ಶಾಸಕ ಡಾ.ಎಂ.ಚಂದ್ರಪ್ಪ ಶ್ಲಾಘಿಸಿದರು. ಮಳೆಗಾಲದಲ್ಲಿ ರೈಲ್ವೆ ಅಂಡರ್ ಪಾಸ್‍ನಲ್ಲಿ ನೀರು ನಿಲ್ಲುವುದರಿಂದ ದ್ವಿಚಕ್ರ ವಾಹನ ಹಾಗೂ ಜನಸಾಮಾನ್ಯರು ಸಂಚರಿಸುವುದು ಕಷ್ಟವಾಗಿದೆ. ಅವೈಜ್ಞಾನಿಕವಾಗಿ ರೈಲ್ವೆ ಅಂಡರ್ ಬ್ರಿಡ್ಜ್‍ಗಳನ್ನು ನಿರ್ಮಿಸಿರುವ ಕಡೆ ಫ್ಲೈ ಓವರ್‍ಗಳಾಗಬೇಕು. ತುಮಕೂರು, ಚಿತ್ರದುರ್ಗ, ದಾವಣಗೆರೆ ನೇರ ರೈಲು ಮಾರ್ಗ ಯೋಜನೆಗೆ ತುರ್ತಾಗಿ ಆಗಬೇಕು.
ಸಿಎಂ ಆಗಲು 2 ವರ್ಷದಿಂದ ಡಿಕೆಶಿ ಕಾಯ್ತಿದ್ದಾರೆ: ಸಂಸದ ಗೋವಿಂದ ಕಾರಜೋಳ
ಕೇಂದ್ರ ರೈಲ್ವೆ ಸಚಿವ ಸೋಮಣ್ಣನವರ ಜೊತೆ ಚರ್ಚಿಸಿ ಚಿತ್ರದುರ್ಗ ಜಿಲ್ಲೆ ಹಾಗೂ ರಾಜ್ಯದ ಜನರಿಗೆ ಅನುಕೂಲವಾಗುವತ್ತ ಗಮನ ಹರಿಸುವಂತೆ ಸಂಸದ ಗೋವಿಂದ ಕಾರಜೋಳರವರಲ್ಲಿ ಶಾಸಕ ಡಾ.ಎಂ.ಚಂದ್ರಪ್ಪ ಮನವಿ ಮಾಡಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ವಿಜಯಸಿಂಹ ಖಾಟ್ರೋತ್, ಉಪಾಧ್ಯಕ್ಷೆ ಎಚ್.ಆರ್.ನಾಗರತ್ನ ವೇದಮೂರ್ತಿ, ಬಿಜೆಪಿ ಪಕ್ಷದ ಜಿಲ್ಲಾ ಅಧ್ಯಕ್ಷ ಮುರುಳಿ, ಪುರಸಭೆ ಸದಸ್ಯರಾದ ಅರ್.ಎ.ಆಶೋಕ, ಮುರುಗೇಶ್, ಮಾಜಿ ಉಪಾಧ್ಯಕ್ಷ ಜಯಸಿಂಹ ಖಾಟ್ರೋತ್, ಜಿ.ಪಂ.ಮಾಜಿ ಅಧ್ಯಕ್ಷ ಶಿವಕುಮಾರ್ ಶಿವಪುರ, ತಾಪಂ ಮಾಜಿ ಅಧ್ಯಕ್ಷ ಶರತಕುಮಾರ್, ತಾಪಂ ಮಾಜಿ ಸದಸ್ಯರಾದ ಅಜಯ್, ಸುರೇಗೌಡ, ಬಿಜೆಪಿ ಮಾಜಿ ಅಧ್ಯಕ್ಷ ರಾಜಶೇಖರ, ಸುರೇಶ್, ಗ್ರಾಪಂ ಮಾಜಿ ಅಧ್ಯಕ್ಷ ವೆಂಕಟೇಶ, ಗುತ್ತಿಗೆದಾರ ಮಾರುತೇಶ್, ಜಗದೀಶ್ ನಾಡಿಗ್, ಗ್ರಾಮ ಪಂಚಾಯತಿ ಸದಸ್ಯರು, ಸಾರ್ವಜನಿಕ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.