ಮುಡಾ ಒಂದು ಸಾರ್ವಜನಿಕ ಸಂಸ್ಥೆ ಇದು ಯಾವುದೇ ಜಾಗಗಳನ್ನು ಡಿನೋಟಿಫೈ ಮಾಡುವಾಗ ಯಾರಿಗೂ ಗೊತ್ತಿಲ್ಲದಂತೆ ಮಾಡುತ್ತದೆಯೇ. ಯಾರದ್ದೋ ಆಸ್ತಿಯನ್ನು ಗೊತ್ತಿಲ್ಲದಂತೆ ಒತ್ತುವರಿ ಮಾಡುವುದು ಸಾಧ್ಯವೇ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಜು.12): ಮುಡಾ ಒಂದು ಸಾರ್ವಜನಿಕ ಸಂಸ್ಥೆ ಇದು ಯಾವುದೇ ಜಾಗಗಳನ್ನು ಡಿನೋಟಿಫೈ ಮಾಡುವಾಗ ಯಾರಿಗೂ ಗೊತ್ತಿಲ್ಲದಂತೆ ಮಾಡುತ್ತದೆಯೇ. ಯಾರದ್ದೋ ಆಸ್ತಿಯನ್ನು ಗೊತ್ತಿಲ್ಲದಂತೆ ಒತ್ತುವರಿ ಮಾಡುವುದು ಸಾಧ್ಯವೇ. ಒಬ್ಬ ಸಿಎಂ ಆಗಿರುವವರು ಹೀಗೆ ಹೇಳಿದರೆ ಹೇಗೆ. ಇದರಲ್ಲೇ ಗೊತ್ತಾಗುತ್ತದೆ ಅವರ ಪತ್ನಿ ಪಡೆದಿರುವ 14 ನಿವೇಶನಗಳು ಅಕ್ರಮವಾಗಿವೆ ಎಂದು ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿವೇಶನ ಹಂಚಿಕೆಯಲ್ಲಿ 50-50 ನಿಯಮ ಮಾಡಿದ್ದೇ ಕಾಂಗ್ರೆಸ್ ಹೊರತ್ತು ಬಿಜೆಪಿ ಅಲ್ಲ. ಆದರೆ ಬಿಜೆಪಿ ಈ ನಿಯಮ ಮಾಡಿದೆ ಎಂದು ಕಾಂಗ್ರೆಸ್ನವರು ಹೇಳುತ್ತಿದ್ದಾರೆ.
ಸಿದ್ದರಾಮಯ್ಯ ಅವರ ಪತ್ನಿ ಯಾವುದೇ ಸೇವಾ ಗೆಟಗೆರಿ ಅಡಿಯಲ್ಲಿ ಬರುವುದಿಲ್ಲ. ಹೀಗಿದ್ದರೂ ನಿವೇಶನ ಪಡೆದುಕೊಂಡಿದ್ದು ಹೇಗೆ, ಅವರಿಗೆ ನಿವೇಶನ ಹಂಚಿಕೆ ಆಗಿದ್ದು ಏಕೆ. ಇದು ಅಕ್ರಮ ಅಲ್ಲವೇ ಎಂದು ಸಿದ್ದರಾಮಯ್ಯನವರನ್ನು ಮಾಜಿ ಸ್ಪೀಕರ್ ಕೆ ಜಿ ಬೋಪಯ್ಯ ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯನವರ ಭಾಮಮೈದುನ ಅವರು ಆ ಭೂಮಿಯನ್ನು ಖರೀದಿಸಿ ದಾನವಾಗಿ ನೀಡಿದ್ದರು ಎನ್ನುತ್ತಿದ್ದಾರೆ. ಆದರೆ ದಾನ ಮಾಡಿದ ಬಳಿಕ ಇವರ ಜಾಗ ಎಲ್ಲಿದೆ ಎಂದು ತಿರುಗಿ ನೋಡದೆ ಇದ್ದಿದ್ದು ಏಕೆ. ಹೀಗಾಗಿ ಮುಡಾದಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಇಡೀ ಪ್ರಕರಣದ ತನಿಖೆಯನ್ನು ಸಿಬಿಐಗೆ ಕೊಡಲಿ. ಸಿಬಿಐಗೆ ಕೊಡದೆ ಇವರ ಕೆಳಗಿನ ಐಎಎಸ್ ಅಧಿಕಾರಿಗಳಿಂದ ತನಿಖೆ ಮಾಡಿಸಿದರೆ ಅವರು ಸರಿಯಾದ ವರದಿಕೊಡಲು ಹೇಗೆ ಸಾಧ್ಯ.
ಕೇಂದ್ರ ಪುರಸ್ಕೃತ ಯೋಜನೆ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ಸಂಸದ ಯದುವೀರ್ ಒಡೆಯರ್ ಅಧಿಕಾರಿಗಳಿಗೆ ಸೂಚನೆ!
ಹೀಗಾಗಿ ಸಿಎಂ ತಕ್ಷಣ ರಾಜೀನಾಮೆ ಕೊಡಬೇಕು. ವರದಿ ಬಂದು ಕ್ಲೀನ್ಚಿಟ್ ದೊರೆತರೆ ಒಳ್ಳೆಯದಲ್ಲವೆ ಬೇಡವೆಂದವರು ಯಾರು ಎಂದು ಮಡಿಕೇರಿಯಲ್ಲಿ ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ ಆಗ್ರಹಿಸಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಅಕ್ರಮ ವರ್ಗಾವಣೆಗೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರು ಭಾಗಿಯಾಗಿರುವ ಸಾಧ್ಯತೆ ಇದೆ. ನಿಗಮದ 187 ಕೋಟಿ ವರ್ಗಾವಣೆ ಆಗುವಾಗ ಆರ್ಥಿಕ ಇಲಾಖೆಯ ಸಹಮತ ಬೇಕೇಬೇಕು ಅಲ್ಲವೆ. ಅದು ಕೂಡ ಒಂದು ಬ್ಯಾಂಕಿನಿಂದ ಮತ್ತೊಂದು ಬ್ಯಾಂಕಿಗೆ ಎನ್ನೆಲ್ಲೆಲ್ಲೋ ಹಣ ವರ್ಗಾವಣೆ ಮಾಡಲಾಗಿದೆ. ಸಿಎಂ ಅವರೇ ಆರ್ಥಿಕ ಇಲಾಖೆ ಜವಾಬ್ದಾರಿ ಇರುವುದರಿಂದ ಅವರೂ ಇದರಲ್ಲಿ ಭಾಗಿಯಾಗಿರುವ ಸಂಶಯವಿದೆ ಎಂದು ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಅನುಮಾನ ವ್ಯಕ್ತಪಡಿಸಿದರು.
ಸರ್ಕಾರ ಇದರ ತನಿಖೆಯನ್ನು ಎಸ್ಐಟಿಗೆ ವಹಿಸಿ ಕೈತೊಳೆದುಕೊಳ್ಳಲು ಯೋಚಿಸಿತ್ತು. ಆದರೆ ಅಕ್ರಮ ಹಣ ವರ್ಗಾವಣೆ ಹಿನ್ನಲೆಯಲ್ಲಿ ಇಡಿ ಎಂಟ್ರಿಯಾಗಿದೆ. ಹೀಗಾಗಿ ಈಗ ಸರಿಯಾದ ತನಿಖೆ ಶುರುವಾಗಿದೆ. ಈ ಎಲ್ಲಾ ಕಾರಣಗಳಿಂದ ಸಿಎಂ ಸಿದ್ದರಾಮಯ್ಯನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಕೆ.ಜಿ ಬೋಪಯ್ಯ ಆಗ್ರಹಿಸಿದ್ದಾರೆ. ಈ ಎಲ್ಲಾ ವಿಷಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ನಡೆಸುತ್ತಿದ್ದ ಪ್ರತಿಭಟನೆ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ಬಿಜೆಪಿ ಮುಖಂಡರನ್ನು ಬಂಧಿಸಿರುವುದನ್ನು ವಿರೋಧಿಸಿ ಮಡಿಕೇರಿಯಲ್ಲಿ ಕೊಡಗು ಜಿಲ್ಲಾ ಬಿಜೆಪಿವತಿಯಿಂದ ಧಿಡೀರ್ ಪ್ರತಿಭಟನೆ ನಡೆಯಿತು.
ಡೆಂಗ್ಯೂ ಜ್ವರದಿಂದ ತತ್ತರಿಸಿರುವ ಚಿಕ್ಕಮಗಳೂರಿನಲ್ಲಿ ವೈರಲ್ ಫೀವರ್: ಇದು ಹೇಗೆ ಸಾಧ್ಯ ಅನ್ನೋದು ಯಕ್ಷಪ್ರಶ್ನೆ
ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಮಳೆಯ ನಡುವೆಯೂ ಪ್ರತಿಭಟನೆ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ ನೇತೃತ್ವದಲ್ಲಿ ಅರ್ಧ ಗಂಟೆಗೂ ಹೆಚ್ಚು ಸಮಯ ಪ್ರತಿಭಟಿಸಿದರು. ಈ ಸಂದರ್ಭ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ರವಿ. ಕಾಳಪ್ಪ ಕಾಂಗ್ರೆಸ್ ಬಿಜೆಪಿಯ ಪ್ರತಿಭಟನೆಯ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಆಕ್ರೋಶ ಹೊರಹಾಕಿದರು. ಇವುಗಳನ್ನು ಪ್ರಶ್ನಿಸಿ ಪ್ರತಿಭಟಿಸಲು ಮುಂದಾದ ಬಿಜೆಪಿಯನ್ನು ನಿಯಂತ್ರಿಸಲು ಪ್ರಯತ್ನಿಸಲಾಗುತ್ತಿದೆ. ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.