ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿಲ್ಲ. ಖಜಾನೆಯೂ ಖಾಲಿಯಾಗಿಲ್ಲ. ಬಿಜೆಪಿಗರು ಸುಳ್ಳಿನ ಪಿತಾಮಹರು. ಅವರ ತಲೆಯಲ್ಲಿ ಮಿದುಳು ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಕೂಡ್ಲಿಗಿ (ಜು.12): ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿಲ್ಲ. ಖಜಾನೆಯೂ ಖಾಲಿಯಾಗಿಲ್ಲ. ಬಿಜೆಪಿಗರು ಸುಳ್ಳಿನ ಪಿತಾಮಹರು. ಅವರ ತಲೆಯಲ್ಲಿ ಮಿದುಳು ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಪಟ್ಟಣದಲ್ಲಿರುವ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರ ಜನಸಂಪರ್ಕ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣಕಾಸಿನ ವ್ಯವಹಾರದ ತನಿಖೆ ನಡೆಯುತ್ತಿದೆ.
ತನಿಖೆ ನಂತರವೇ ಸತ್ಯ ತಿಳಿಯಲಿದೆ. ರಾಜ್ಯದಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ಮುಡಾದಿಂದ ನಿವೇಶನ ಹಂಚಿಕೆಯಾಗಿದೆ. 40 ಪರ್ಸೆಂಟ್ ಕಮೀಷನ್ ದಂಧೆಯೂ ಬಿಜೆಪಿ ಅಧಿಕಾರಾವಧಿಯಲ್ಲೇ ನಡೆದಿದೆ. ರಾಜ್ಯ ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ ಎಂದು ಬಸವರಾಜ ರಾಯರಡ್ಡಿ ಎಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಮೋಟಾರು ವಾಹನ ನಿರೀಕ್ಷಕ ಹುದ್ದೆ ಶೀಘ್ರ ಭರ್ತಿ: ಸಚಿವ ರಾಮಲಿಂಗಾರೆಡ್ಡಿ
ದೇಗುಲಕ್ಕೆ ಅನುದಾನ ಕೊಡಿ: ಈ ಸಂದರ್ಭದಲ್ಲಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಕ್ಷೇತ್ರದಲ್ಲಿರುವ ದೇವಾಲಯಗಳ ಜೀರ್ಣೋದ್ಧಾರಕ್ಕೆ ಹೆಚ್ಚಿನ ಅನುದಾನ ನೀಡಬೇಕೆಂದು ಮುಜರಾಯಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ದನಗೌಡ, ಮುಖಂಡರಾದ ಕೆ.ಎಂ. ಶಶಿಧರ, ಕಾವಲಿ ಶಿವಪ್ಪನಾಯಕ ಇದ್ದರು. ಮೊದಲ ಬಾರಿಗೆ ಕೂಡ್ಲಿಗಿ ಕ್ಷೇತ್ರಕ್ಕೆ ಆಗಮಿಸಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಶಾಸಕ ಡಾ.ಶ್ರೀನಿವಾಸ್ ಸನ್ಮಾನಿಸಿದರು.
ಹೈಟೆಕ್ ಬಸ್ ನಿಲ್ದಾಣ: ಪಟ್ಟಣದಲ್ಲಿ ನಾಲ್ಕು ಎಕರೆ ಪ್ರದೇಶದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಆದ್ಯತೆ ನೀಡುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ತೀರಾ ಹಳೆಯದಾದ ಬಸ್ ನಿಲ್ದಾಣದ ಸ್ಥಿತಿಗತಿಯನ್ನು ಶಾಸಕರು ತಮ್ಮ ಗಮನಕ್ಕೆ ತಂದಿದ್ದಾರೆ. ಈಗಿರುವ ಹಳೆಯ ಬಸ್‌ಗಳ ಬದಲಾಗಿ ಮತ್ತಷ್ಟು ಹೊಸ ಬಸ್‌ಗಳನ್ನು ನೀಡುವಂತೆ ಬೇಡಿಕೆ ಸಲ್ಲಿಸಲಾಗಿದೆ. ಪಟ್ಟಣದ ಹೊರವಲಯದಲ್ಲಿ ಸರ್ಕಾರದ ಜಾಗ ಗುರುತಿಸಿದ್ದು, ಆ ಸ್ಥಳದಲ್ಲಿ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಪೋ ನಿರ್ಮಾಣಕ್ಕೂ ಮನವಿ ಸಲ್ಲಿಸಿರುವುದರಿಂದ ಆ ಬಗ್ಗೆಯೂ ಗಮನಹರಿಸಲಾಗುವುದು ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮಾತನಾಡಿ, ಕೂಡ್ಲಿಗಿ ಸಾರಿಗೆ ಸಂಸ್ಥೆ ಘಟಕಕ್ಕೆ ನೂತನ ಬಸ್‌ಗಳನ್ನು ನೀಡುವಂತೆ ಸಲ್ಲಿಸಿದ ಮನವಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಒಂದು ವರ್ಷದಲ್ಲಿ 19 ಬಸ್‌ಗಳನ್ನು ನೀಡಿದ್ದಾರೆ. ಇನ್ನಷ್ಟು ಹೊಸ ಬಸ್‌ಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ತಾಲೂಕು ಕೇಂದ್ರದಲ್ಲಿರುವ ಸಾರಿಗೆ ಬಸ್ ನಿಲ್ದಾಣವು ತೀರಾ ಹಳೆಯದಾಗಿದ್ದು, ಹೈಟೆಕ್ ಬಸ್ ನಿಲ್ದಾಣಕ್ಕೂ ಅನುದಾನ ನೀಡುವ ಮೂಲಕ ಹಿಂದುಳಿದ ತಾಲೂಕಿನ ಅಭಿವೃದ್ಧಿಗೆ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ವೆಹಿಕಲ್ ಟ್ರ್ಯಾಕಿಂಗ್ ವ್ಯವಸ್ಥೆ ಇಲ್ಲದ ವಾಹನಗಳ ವಿರುದ್ಧ ಕ್ರಮ: ಸಚಿವ ರಾಮಲಿಂಗಾರೆಡ್ಡಿ
ಈ ಸಂದರ್ಭದಲ್ಲಿ ಸಾರಿಗೆ ಸಂಸ್ಥೆ ವಿಭಾಗೀಯ ಸಂಚಾರ ಅಧಿಕಾರಿ ವಾಜಂತ್ರಿ, ಆಡಳಿತಾಧಿಕಾರಿ ದೇವರಾಜ, ಘಟಕ ವ್ಯವಸ್ಥಾಪಕ ಮರಿಲಿಂಗಪ್ಪ, ಪಪಂ ಸದಸ್ಯ ಕಾವಲಿ ಶಿವಪ್ಪ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ಧನಗೌಡ, ಜಿಪಂ ಮಾಜಿ ಸದಸ್ಯ ಕೆ.ಎಂ.ಶಶಿಧರ, ಮುಖಂಡರಾದ ಕೋಗಳಿ ಮಂಜುನಾಥ, ಮಾದಿಹಳ್ಳಿ ನಜೀರ್, ದಿನ್ನೆ ಮಲ್ಲಿಕಾರ್ಜುನ, ಜಯರಾಮ್ ನಾಯಕ, ಟಿ.ಜಿ. ಮಲ್ಲಿಕಾರ್ಜುನಗೌಡ, ಬಣವಿಕಲ್ಲು ಯರಿಸ್ವಾಮಿ ಇದ್ದರು.