
ಬೆಂಗಳೂರು: ಅಸ್ಸಾಂನಲ್ಲಿ ಕೆಲ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ರಾಜಕೀಯ ಚಟುವಟಿಕೆ ಗರಿಗೆದರಿದೆ. ಈ ನಡುವೆ ಅಸ್ಸಾಂ ರಾಜ್ಯದಲ್ಲಿನ ಕಾಂಗ್ರೆಸ್ ಶಾಸಕರನ್ನು ಬಿಜೆಪಿ 'ಆಪರೇಷನ್ ಕಮಲ' ಮಾಡುವ ಶಂಕೆ ಹಿನ್ನೆಲೆಯಲ್ಲಿ 12 ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಆಗಮಿಸಿದ್ದಾರೆ.
ಅಸ್ಸಾಂ ವಿಧಾನಸಭಾ ಚುನಾವಣೆ ಉಸ್ತುವಾರಿ ಹೊಂದಿರುವ ಕೆಪಿಸಿಸಿ ಅಧ್ಯಕ್ಷ ಡಿ. ಕೆ.ಶಿವಕುಮಾರ್ ಅವರ ಸಲಹೆ ಮೇರೆಗೆ ಗುರುವಾರ ರಾತ್ರಿ ಅಸಾಂನಿಂದ ಹೊರಟು ಬೆಂಗಳೂರಿಗೆ ಶಾಸಕರು ಬಂದಿದ್ದಾರೆ. 12 ಶಾಸಕರಿಗೆ ಬಿಡದಿ ಬಳಿಯ ವಂಡರ್‌ಲಾ ರೆಸಾರ್ಟ್‌ನಲ್ಲಿ ವಾಸ್ತವ್ಯ ಕಲ್ಪಿಸಲಾಗಿದೆ ಎಂದು ಗೊತ್ತಾಗಿದೆ. 126 ಶಾಸಕರನ್ನು ಹೊಂದಿರುವ ಅಸ್ಸಾಂ ವಿಧಾನಸಭೆ ಚುನಾವಣೆ ಶೀಘ್ರದಲ್ಲಿ ನಡೆಯಲಿದ್ದು, ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣೆ ಸಿದ್ಧತೆ ಮಾಡಿಕೊಳ್ಳುತ್ತಿವೆ.
ರೆಸಾರ್ಟ್‌ಗೆ ಆಗಮಿಸಿದ ಅಸ್ಸಾಂ ಶಾಸಕರನ್ನು ರಾಜ್ಯ ಕಾಂಗ್ರೆಸ್‌ನ ಸ್ಥಳೀಯ ಮುಖಂಡರು ಸ್ವಾಗತ ಮಾಡಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಅವರು ಅಸ್ಸಾಂ ಕಾಂಗ್ರೆಸ್‌ನ ವೀಕ್ಷಕರಾಗಿರುವ ಕಾರಣ ಶಾಸಕರು ಬಿಡದಿಗೆ ಆಗಮಿಸಿದ್ದಾರೆ. ಶಾಸಕರು ತಂಗಿರುವ ರೆಸಾರ್ಟ್ ಸುತ್ತಲೂ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ 7 ಇನ್ನೋವಾ ಕಾರುಗಳಲ್ಲಿ ಆಗಮಿಸಿದ ಶಾಸಕರು ವಂಡರ್ ಲಾ ರೆಸಾರ್ಟ್‌ನಲ್ಲಿ ಈಗ ವಿಶ್ರಾಂತಿ ಪಡೆಯುತ್ತಿದ್ದಾರೆ.
ವಿಧಾನಪರಿಷತ್ತು: ಇತ್ತ ಅಸ್ಸಾಂ ಚುನಾವಣೆ ಹೇಗೆ ಗೆಲ್ಲಬೇಕು ಎಂಬುದಕ್ಕೆ ಕೃತಕ ಬುದ್ದಿಮತ್ತೆಯು (ಎಐ) ಕರ್ನಾಟಕ ಮಾದರಿ ಅನುಸರಿಸಿ ಎಂದು ಹೇಳುತ್ತದೆ ಎಂಬ ಸ್ವಾರಸ್ಯಕರ ವಿಚಾರವನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸದನದಲ್ಲಿ ಬಿಚ್ಚಿಟ್ಟರು. ಪ್ರಶೋತ್ತರ ಕಲಾಪ ವೇಳೆ ಬಿಜೆಪಿಯ ಭಾರತಿ ಶೆಟ್ಟಿ ಅವರು ಆಡಳಿತ ಸುಧಾರಣೆಯಲ್ಲಿ ಕೃತಕ ಬುದ್ದಿಮತ್ತೆ ಬಳಕೆ ಕುರಿತು ಕೇಳಿದ ಪ್ರಶ್ನೆ ವೇಳೆ ನಡೆದ ಚರ್ಚೆಯಲ್ಲಿ ಉತ್ತರಿಸಿದ ಡಿ.ಕೆ.ಶಿವಕುಮಾರ್, ನಾನು ಎಐ ಬಗ್ಗೆ ತಿಳಿದಿರಲಿಲ್ಲ. ಚುನಾವಣೆ ವಿಚಾರವಾಗಿ ಅಸ್ಸಾಂಗೆ ಹೋಗಿದ್ದಾಗ ಎಐ ಬಳಕೆ ಮಾಡಿದೆ. ಹೌ ಟು ವಿನ್ ಅಸ್ಸಾಂ ಎಲೆಕ್ಷನ್ (ಅಸ್ಸಾಂ ಚುನಾವಣೆ ಗೆಲ್ಲುವುದು ಹೇಗೆ?) ಎಂದು ಎಐಗೆ ಪ್ರಶ್ನಿಸಿದೆ. ಅದರದ್ದೇ ಆದ ಒಂದು ಮಾಹಿತಿ ನೀಡಿತು. ಜತೆಗೆ ಇಫ್ ಯು ಗೋ ವಿತ್ ಕರ್ನಾಟಕ ಮಾಡೆಲ್ ಯು ವಿಲ್ ವಿನ್ ಎಲೆಕ್ಷನ್ (ಕರ್ನಾಟಕ ಮಾದರಿಯಂತೆ ಹೋದರೆ ಚುನಾವಣೆ ಗೆಲ್ಲುತ್ತೀರಿ) ಎಂದು ತಿಳಿಸಿತು ಎಂದರು.
ಇದನ್ನೂ ಓದಿ: ಮೊನಾಲಿಸಾ ಜೊತೆ ಮದುವೆಗೆ ಫರ್ಮಾನ್ ಖಾನ್ ಪೋಷಕರಿಂದಲೂ ತೀವ್ರ ವಿರೋಧ: ಅವರು ಹೇಳಿದ್ದೇನು?
ಅದಕ್ಕೆ ಬಿಜೆಪಿಯ ರವಿಕುಮಾರ್ ಆಕ್ಷೇಪ ವ್ಯಕ್ತಪಡಿಸಿ, ಎಐ ಹೇಳಿದಂತೆ ಚುನಾವಣೆ ಮಾಡಲಾಗದು ಎಂದು ಕಾಲೆಳೆದರು. ಆಗ ಡಿ.ಕೆ.ಶಿವಕುಮಾರ್, ಈಗಲೇ ನಿಮ್ಮ ಮೊಬೈಲ್‌ನಲ್ಲಿ ಎಐಗೆ ಪ್ರಶ್ನೆ ಕೇಳಿ. ನಾನು ಹೇಳಿದಂತೆಯೇ ಉತ್ತರ ನೀಡುತ್ತದೆ. ಬೇಕಿದ್ದರೆ ಹೊರಗೆ ಬನ್ನಿ ಅದನ್ನು ನಾನು ತೋರಿಸುತ್ತೇನೆ ಎಂದು ನಗುತ್ತಲೇ ತಿರುಗೇಟು ನೀಡಿದರು.
ಅದಕ್ಕೂ ಮುನ್ನ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ಈಗ ಎಲ್ಲೆಡೆ ಕೃತಕ ಬುದ್ದಿಮತ್ತೆ ಬಳಕೆಯಾಗುತ್ತಿದೆ. ನ್ಯಾಯಾಲಯಗಳಲ್ಲೂ ಅದರ ಬಗ್ಗೆ ಚರ್ಚೆ ಮಾಡಲಾಗಿದೆ. ಎಐ ವಿಚಾರವಾಗಿ ಕೇಂದ್ರ ಸರ್ಕಾರ ಸಮ್ಮೇಳನ ನಡೆಸಿದೆ. ಸಿಬಿಎಸ್ಸಿಯಲ್ಲಿ 3ರಿಂದ 8ನೇ ತರಗತಿವರೆಗೆ ಈ ವಿಚಾರವನ್ನು ಪಠ್ಯದಲ್ಲಿ ಸೇರಿಸಲು ತಿಳಿಸಲಾಗಿದೆ. ಇನ್ನು, ಆಡಳಿತದಲ್ಲಿ ಎಐ ಬಳಕೆ ಕುರಿತಂತೆ ತೀರ್ಮಾನ ಮಾಡುವುದಕ್ಕೂ ಮುನ್ನ ದೊಡ್ಡ ಸಂಶೋಧನೆಯಾಗಬೇಕು. ಅದಾಗದೇ ತೀರ್ಮಾನಿಸಲಾಗದು ಎಂದು ಹೇಳಿದರು.
ಇದನ್ನೂ ಓದಿ: ಇರಾನ್‌ನಲ್ಲಿ 2.6 ರೂ.ಗೆ ಪೆಟ್ರೋಲ್: ತೈಲ ಸಂಪದ್ಭರಿತ ವೆನೆಜುವೆಲಾದಲ್ಲಿಯೂ ಪೆಟ್ರೋಲ್‌ಗೆ 5 ರೂ.ಗಿಂತ ಕಡಿಮೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.