* ನೀರಜ್ ಚೋಪ್ರಾ ಜಾವೆಲಿನ್ ಕೋಚ್ ಉವೆ ಹಾನ್ ತಲೆಂಡ
* ವ್ಯವಸ್ಥೆ ವಿರುದ್ದ ಧ್ವನಿಯೆತ್ತಿದ್ದಕ್ಕೆ ಉವೆ ಹಾನ್ ಗೇಟ್ ಪಾಸ್?
* ಉವೆ ಹಾನ್ ಮಾರ್ಗದರ್ಶನದಲ್ಲಿ ನೀರಜ್ ಚೋಪ್ರಾ ಒಲಿಂಪಿಕ್ಸ್ ಚಿನ್ನದ ಪದಕ ಜಯಿಸಿದ್ದರು.
ನವದೆಹಲಿ(ಸೆ.16): ಟೋಕಿಯೋ ಒಲಿಂಪಿಕ್ಸ್‌ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲವ ಮೂಲಕ ಇಡೀ ದೇಶವೇ ಸಂಭ್ರಮಿಸುವಂತೆ ಮಾಡಿದ್ದರು. ನೀರಜ್ ಚೋಪ್ರಾ ಯಶಸ್ಸಿನ ಹಿಂದೆ ಜರ್ಮನಿಯ ದಿಗ್ಗಜ ಕೋಚ್ ಉವೆ ಹಾನ್ ಪಾತ್ರವನ್ನು ಮರೆಯುವಂತಿಲ್ಲ. ಇದೀಗ ಉವೆ ಹಾನ್ ತಲೆದಂಡವಾಗಿದೆ. ಆದರೆ ಕಳೆದ ಜೂನ್‌ನಲ್ಲಿ ಸಾಯ್ ಹಾಗೂ ಅಥ್ಲೆಟಿಕ್ಸ್ ಫೆಡರೇಷನ್ ಎದುರು ಧ್ವನಿಯೆತ್ತಿದ್ದೇ ಉವೆ ಹಾನ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತಾ ಎನ್ನುವ ಅನುಮಾನ ಕಾಡಲಾರಂಭಿಸಿದೆ.
59 ವರ್ಷದ ಉವೆ ಹಾನ್ ಅವರನ್ನು 2017ರಲ್ಲಿ ನೀರಜ್ ಚೋಪ್ರಾ ಕೋಚ್ ಆಗಿ ನೇಮಕ ಮಾಡಿಕೊಳ್ಳಲಾಗಿತ್ತು. ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 100 ಮೀಟರ್‌ಗೂ ಅಧಿಕ ದೂರ ಎಸೆದ ಏಕೈಕ ಅಥ್ಲೀಟ್ ಎನಿಸಿರುವ ಉವೆ ಹಾನ್ 2018ರ ಏಷ್ಯನ್ ಗೇಮ್ಸ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇದಾದ ಬಳಿಕ ಟೋಕಿಯೋ ಒಲಿಂಪಿಕ್ಸ್‌ನಲ್ಲೂ ಭಾರತ ಜಾವೆಲಿನ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಉವೆ ಹಾನ್ ಮಾರ್ಗದರ್ಶನದಲ್ಲಿ ಶಿವಪಾಲ್ ಸಿಂಗ್ ಹಾಗೂ ಅನ್ನು ರಾಣಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾಗಿದ್ದರು.
ಕಳೆದ ಸೋಮವಾರ ನಡೆದ ಅಥ್ಲೀಟ್ಸ್ ಹಾಗೂ ಕೋಚ್‌ಗಳ ಫರ್ಫಾಮೆನ್ಸ್ ಪುನರಾವಲೋಕನ ಸಭೆ ಬಳಿಕ ಉವೆ ಹಾನ್ ಅವರನ್ನು ಮನೆಗೆ ಕಳಿಸಲಾಗಿದೆ ಎಂದು ಅಥ್ಲೆಟಿಕ್ಸ್ ಫೆಡರೇಷನ್ ಅಧ್ಯಕ್ಷ ಅದಿಲ್ಲೆ ಸುಮರಿವಾಲ್ಲಾ ತಿಳಿಸಿದ್ದಾರೆ. ಇದರ ಹೊರತಾಗಿಯೂ ನೀರಜ್ ಚಿನ್ನ ಗೆಲ್ಲುವಲ್ಲಿ ಮಹತ್ತರ ಪಾತ್ರ ನಿಭಾಯಿಸಿದ ಕ್ಲಾಸ್ ಬಾರ್ಟೊನಿಟ್ಜ್ ಅವರನ್ನು ಕೋಚ್ ಆಗಿ ಮುಂದುವರೆಸಿರುವುದಾಗಿ ತಿಳಿಸಿದ್ದಾರೆ. ನಾವು ಉವೆ ಹಾನ್ ಅವರನ್ನು ಬದಲಾಯಿಸಿದ್ದೇವೆ. ಅವರ ಪ್ರದರ್ಶನ ಅಷ್ಟೇನು ಉತ್ತಮವಾಗಿರಲಿಲ್ಲ. ನಾವು ಮತ್ತಿಬ್ಬರು ಹೊಸ ಕೋಚ್‌ಗಳನ್ನು ಕರೆ ತರಲಿದ್ದೇವೆ ಎಂದು ಸುಮರಿವಾಲ್ಲಾ ತಿಳಿಸಿದ್ದಾರೆ.
ಚಿನ್ನ ಗೆದ್ದ ಚೋಪ್ರಾಗೆ ಕಾಶೀನಾಥ್ ಕೋಚ್ ಅಲ್ಲ: ಅಥ್ಲೆಟಿಕ್ಸ್ ಸಂಸ್ಥೆ
ಕಳೆದ ಜೂನ್‌ನಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್) ಹಾಗೂ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ಅವ್ಯವಸ್ಥೆಯ ಬಗ್ಗೆ ಉವೆ ಹಾನ್ ತಮ್ಮ ಅಸಮಾಧಾನ ಹೊರಹಾಕಿದ್ದರು. ಒಲಿಂಪಿಕ್ಸ್ ಸಿದ್ದತೆಗಳ ಬಗ್ಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಇಂತಹ ಜನರ ನಡುವೆ ಕೆಲಸ ಮಾಡುವುದು ಕಷ್ಟಕರವಾದದ್ದು ಎಂದಿದ್ದರು.
ಜಾವೆಲಿನ್ ಕೋಚ್ ಆಗಿ ಭಾರತದ ಜತೆಗಿನ ಒಡನಾಟದ ಕುರಿತಂತೆ ಆಂಗ್ಲ ಸುದ್ದಿ ಮಾಧ್ಯಮ 'ದ ಇಂಡಿಯನ್ ಎಕ್ಸ್‌ಪ್ರೆಸ್'ಗೆ ನೀಡಿದ ಸಂದರ್ಶನದಲ್ಲಿ, ನಾನಿಲ್ಲಿಗೆ ಬಂದಾಗ, ನಾನೇನಾದರೂ ಬದಲಾವಣೆ ಮಾಡಬಹುದು ಎಂದು ಎಂದು ಭಾವಿಸಿದ್ದೆ. ಆದರೆ ಸಾಯ್ ಹಾಗೂ ಅಥ್ಲೆಟಿಕ್ಸ್ ಫೆಡರೇಷನ್‌ನಲ್ಲಿರುವ ಕೆಲವರ ಜತೆ ಕೆಲಸ ಮಾಡುವುದು ಸುಲಭವಲ್ಲ. ಇಲ್ಲಿರುವವರಿಗೆ ಮಾಹಿತಿಯ ಕೊರತೆಯೋ ಅಥವಾ ಅಸಡ್ಡೆಯೋ ನನಗಂತೂ ಅರ್ಥವಾಗುತ್ತಿಲ್ಲ. ಕ್ಯಾಂಪ್‌ನಲ್ಲಿ ಅಥವಾ ಸ್ಪರ್ಧೆಯಲ್ಲಿ ನಾವು ಅಥ್ಲೀಟ್ಸ್‌ಗಳಿಗಾಗಿ ಪೌಷ್ಠಿಕಾಂಶಯುತ ಆಹಾರವನ್ನು ಕೇಳಿದರೆ, ನಮಗೆ ಸಿಗುತ್ತಿರಲಿಲ್ಲ. ಅದಿರಲಿ ಟಾಪ್(ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಂ)ನ ಅಥ್ಲೀಟ್‌ಗಳಿಗೂ ಸರಿಯಾಗಿ ಸೌಕರ್ಯ ಸಿಗುತ್ತಿರಲಿಲ್ಲ ಎಂದು ಉವೆ ಹಾನ್ ತಮ್ಮ ಬೇಸರವನ್ನು ಹೊರಹಾಕಿದ್ದರು.
ಕಳೆದ ಏಪ್ರಿಲ್‌ನಲ್ಲಿ ಒಪ್ಪಂದ ಪರಿಷ್ಕರಿಸುವಾಗ ನನಗೆ ಸಂಪೂರ್ಣ ಒಪ್ಪಿಗೆ ಇರಲಿಲ್ಲ. ನಾವು ಸಹಿ ಹಾಕದಿದ್ದರೆ ಇನ್ನು ಮುಂದೆ ಸಂಬಳ ನೀಡಲಾಗುವುದಿಲ್ಲ ಎಂದು ಹೆದರಿಸಿ ಸಹಿ ಹಾಕಿಸಿಕೊಂಡಿದ್ದರು. ಸಂಬಳ ಹೆಚ್ಚು ಮಾಡುತ್ತೇವೆ ಎನ್ನುವುದು ಕೇವಲ ಹುಸಿ ಭರವಸೆಯಾಗಿಯೇ ಉಳಿಯಿತು ಎಂದು ಉವೆ ಹಾನ್ ತಮ್ಮ ಅಸಮಾಧಾನ ಹೊರಹಾಕಿದ್ದರು. ಇದೀಗ ಉವೆ ಹಾನ್ ತಲೆದಂಡ ಸಾಕಷ್ಟು ಊಹಾಪೋಹಗಳನ್ನು ಹುಟ್ಟುಹಾಕಿದೆ.