ರೋಜರ್ ಫೆಡರರ್‌ಗೆ ಮತ್ತೆ ಶಸ್ತ್ರಚಿಕಿತ್ಸೆ, ಟೆನಿಸ್‌ ಬದುಕು ಅಂತ್ಯ?

By Suvarna NewsFirst Published Aug 17, 2021, 9:38 AM IST
Highlights

* ಮತ್ತೊಮ್ಮೆ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ರೋಜರ್ ಫೆಡರರ್

* ಟೋಕಿಯೋ ಒಲಿಂಪಿಕ್ಸ್‌ನಿಂದ ಹೊರಗುಳಿದಿದ್ದ ಫೆಡರರ್, ಇದೀಗ ಯುಎಸ್‌ ಓಪನ್‌ನಿಂದಲೂ ಔಟ್‌

* ಕೆಲ ತಿಂಗಳುಗಳ ಕಾಲ ಟೆನಿಸ್‌ನಿಂದ ದೂರ ಉಳಿಯುವುದಾಗಿ ತಿಳಿಸಿದ 40 ವರ್ಷದ ದಿಗ್ಗಜ ಟೆನಿಸಿಗ

ಬಸೆಲ್(ಆ.17)‌: ದಿಗ್ಗಜ ಟೆನಿಸಿಗ ರೋಜರ್‌ ಫೆಡರರ್‌ ಮತ್ತೆ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, ಯುಎಸ್‌ ಓಪನ್‌ನಿಂದ ಹಿಂದೆ ಸರಿದಿದ್ದಾರೆ. ಇದರೊಂದಿಗೆ 20 ಗ್ರ್ಯಾಂಡ್‌ಸ್ಲಾಂ ಒಡೆಯನ ಟೆನಿಸ್‌ ವೃತ್ತಿಜೀವನದ ಮೇಲೆ ಕರಿನೆರಳು ಆವರಿಸಿದ್ದು, ಮತ್ತೆ ಅಂಗಳಕ್ಕೆ ಮರಳುವರೇ ಎಂಬ ಅನುಮಾನ ಕಾಡತೊಡಗಿದೆ.

ಯುಎಸ್ ಓಪನ್ ಟೂರ್ನಿ ಆರಂಭಕ್ಕೆ ಕೇವಲ ಎರಡು ವಾರ ಬಾಕಿ ಇರುವಾಗಲೇ ಈ ವಿಚಾರವನ್ನು ತಿಳಿಸಿರುವ ಫೆಡರರ್, ಕೆಲವು ವಾರಗಳಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದೇನೆ. ವೈದ್ಯರ ಸಲಹೆಯಂತೆ ನಾನು ಮತ್ತೆ ಸರ್ಜರಿಗೆ ಒಳಗಾಗುತ್ತಿದ್ದು, ಕೆಲವು ತಿಂಗಳುಗಳ ಮಟ್ಟಿಗೆ ಟೆನಿಸ್‌ನಿಂದ ದೂರ ಉಳಿಯುತ್ತಿರುವುದಾಗಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಸಂದೇಶ ರವಾನಿಸಿದ್ದಾರೆ.

ಮಂಡಿರಜ್ಜು ಗಾಯದಿಂದ ಬಳಲುತ್ತಿರುವ 40 ವರ್ಷದ ಫೆಡರರ್‌, ಈ ಮೊದಲು 2 ಬಾರಿ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 2 ವರ್ಷದ ವಿಶ್ರಾಂತಿ ಬಳಿಕ 2021ರ ಫ್ರೆಂಚ್‌ ಓಪನ್‌ನಲ್ಲಿ ಕಣಕ್ಕೆ ಇಳಿದಿದ್ದರೂ, ಅರ್ಧದಲ್ಲೇ ನಿರ್ಗಮಿಸಿದ್ದರು. ಇನ್ನು ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಫೆಡರರ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದರು. ಆದರೆ ಸಮೀಸ್‌ಗೇರುವಲ್ಲಿ ಸ್ವಿಸ್ ಟೆನಿಸ್ ದಿಗ್ಗಜ ವಿಫಲರಾಗಿದ್ದರು. ಇನ್ನು ರೋಜರ್ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಿಂದಲೂ ಹಿಂದೆ ಸರಿದಿದ್ದರು.

ವಿಂಬಲ್ಡನ್‌: ಫೆಡರರ್‌ಗೆ ಸೋಲು, ಮುಗಿಯಿತಾ ಟೆನಿಸ್‌ ದಿಗ್ಗಜನ ಕೆರಿಯರ್?

ಸದ್ಯ ರೋಜರ್ ಫೆಡರರ್, ನೊವಾಕ್ ಜೋಕೋವಿಚ್ ಹಾಗೂ ರಾಫೆಲ್ ನಡಾಲ್ ತಲಾ 20 ಗ್ರ್ಯಾನ್‌ಸ್ಲಾಂ ಟ್ರೋಫಿಗಳಿಗೆ ಮುತ್ತಿಕ್ಕಿದ್ದು, ಮುಂಬರುವ ಯುಎಸ್ ಓಪನ್‌ನಲ್ಲಿ ಫೆಡರರ್‌ ದಾಖಲೆಯನ್ನು ಜೋಕೋ ಇಲ್ಲವೇ ನಡಾಲ್ ಹಿಂದಿಕ್ಕುವ ಸಾಧ್ಯತೆ ದಟ್ಟವಾಗಿದೆ.
 

click me!