
ಕಾಠ್ಮಂಡು(ಡಿ.07): ದಕ್ಷಿಣ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳ ಅಬ್ಬರ ಮುಂದುವರಿದಿದೆ. ಕ್ರೀಡಾಕೂಟದ 5ನೇ ದಿನವಾದ ಶುಕ್ರವಾರ ಭಾರತ 28 ಚಿನ್ನಗಳೊಂದಿಗೆ ಬರೋಬ್ಬರಿ 54 ಪದಕಗಳನ್ನು ಗೆದ್ದುಕೊಂಡಿತು. 20 ಬೆಳ್ಳಿ, 6 ಕಂಚಿನ ಪದಕಗಳು ಸಹ ಭಾರತದ ಖಾತೆಗೆ ಸೇರಿಕೊಂಡವು. ಭಾರತ 200 ಪದಕಗಳತ್ತ ದಾಪುಗಾಲಿರಿಸಿದೆ.
ದಕ್ಷಿಣ ಏಷ್ಯನ್ ಗೇಮ್ಸ್: 4ನೇ ದಿನ ಭಾರತ ಪದಕಗಳ ಫಿಫ್ಟಿ!
5ನೇ ದಿನದ ಮುಕ್ತಾಯಕ್ಕೆ 90 ಚಿನ್ನ, 61 ಬೆಳ್ಳಿ ಹಾಗೂ 27 ಕಂಚಿನ ಪದಕಗಳೊಂದಿಗೆ ಒಟ್ಟು 178 ಪದಕಗಳನ್ನು ಜಯಿಸಿರುವ ಭಾರತ, ಪದಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ. 116 ಪದಕಗಳೊಂದಿಗೆ 2ನೇ ಸ್ಥಾನದಲ್ಲಿರುವ ನೇಪಾಳ (41 ಚಿನ್ನ, 27 ಬೆಳ್ಳಿ, 48 ಕಂಚು) ವಿರುದ್ಧ ಭಾರತ ಉತ್ತಮ ಅಂತರ ಕಾಯ್ದುಕೊಂಡಿದೆ. ಶ್ರೀಲಂಕಾ 138 ಪದಕಗಳೊಂದಿಗೆ (23 ಚಿನ್ನ, 45 ಬೆಳ್ಳಿ, 69 ಕಂಚು) 3ನೇ ಸ್ಥಾನದಲ್ಲಿ ಮುಂದುವರಿದಿದೆ.
ಭಾರತೀಯ ಶಟ್ಲರ್‌ಗಳು ಶುಕ್ರವಾರ 4 ಚಿನ್ನ, 2 ಬೆಳ್ಳಿ ಪದಕಗಳನ್ನು ಗೆದ್ದರು. ಮೊದಲ ಮೂರು ದಿನ ಭರ್ಜರಿ ಪದಕ ಬೇಟೆ ನಡೆಸಿದ ಅಥ್ಲೀಟ್‌ಗಳು ಶುಕ್ರವಾರ 12 ಪದಕಗಳನ್ನು ಜಯಿಸಿದರು. ಆದರೆ ಇದರಲ್ಲಿ ಕೇವಲ 2 ಮಾತ್ರ ಚಿನ್ನದ ಪದಕ. ಪುರುಷರ ಶಾಟ್‌ಪುಟ್‌ನಲ್ಲಿ ತೇಜಿಂದರ್ ಪಾಲ್ ಹಾಗೂ ಮಹಿಳೆಯರ ಶಾಟ್‌ಪುಟ್‌ನಲ್ಲಿ ಅಭಾ ಖಟುವಾ ಸ್ವರ್ಣಕ್ಕೆ ಮುತ್ತಿಟ್ಟರು.
ಈಜು ಸ್ಪರ್ಧೆಯಲ್ಲಿ ಭಾರತ ಭರ್ಜರಿ ಪ್ರದರ್ಶನ ಮುಂದುವರಿಸಿತು. ಕರ್ನಾಟಕದ ಲಿಖಿತ್ ಎಸ್.ಪಿ. 2ನೇ ಚಿನ್ನದ ಪದಕ ಗೆದ್ದರು. ರಾಜ್ಯದ ಮತ್ತೊಬ್ಬ ತಾರಾ ಈಜುಪಟು ಶ್ರೀಹರಿ ನಟರಾಜ್ ಪುರುಷರ 200 ಮೀ. ಬ್ಯಾಕ್‌ಸ್ಟೊ್ರೕಕ್‌ನಲ್ಲಿ ಚಿನ್ನ ಜಯಿಸಿದರು. ಶ್ರೀಹರಿ, ಆಶಿಶ್ ವಿರಾಜ್, ಅನಿಲ್ ಕುಮಾರ್ ಹಾಗೂ ವೀರ್‌ಧವಳ್ ಖಾಡೆ ಅವರನ್ನೊಳಗೊಂಡ ತಂಡ 400 ಮೀ. ಫ್ರೀಸ್ಟೈಲ್ ರಿಲೇ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿತು. ಈಜು ಸ್ಪರ್ಧೆಗಳಲ್ಲಿ ಭಾರತ 9 ಚಿನ್ನದೊಂದಿಗೆ ಒಟ್ಟು 21 ಪದಕಗಳನ್ನು ಗೆದ್ದು ಮೊದಲ ಸ್ಥಾನ ಪಡೆಯಿತು.
ಫೆನ್ಸಿಂಗ್‌ನಲ್ಲಿ ಭಾರತ 3 ಚಿನ್ನ ಗೆದ್ದರೆ, ಟೇಬಲ್ ಟೆನಿಸ್‌ನಲ್ಲಿ ತಲಾ ಒಂದು ಚಿನ್ನ ಹಾಗೂ ಬೆಳ್ಳಿ ದೊರೆಯಿತು. ವೇಟ್‌ಲಿಫ್ಟಿಂಗ್‌ನಲ್ಲಿ ಭಾರತ 3 ಚಿನ್ನ ಹಾಗೂ 1 ಬೆಳ್ಳಿ ಪದಕ ಜಯಿಸಿತು. ಶುಕ್ರವಾರ ಸೈಕ್ಲಿಂಗ್ ಸ್ಪರ್ಧೆಗಳು ಪ್ರಾರಂಭಗೊಂಡವು. ಭಾರತ ಚಿನ್ನದ ಪದಕದೊಂದಿಗೆ ಖಾತೆ ತೆರೆಯಿತು. ಒಟ್ಟು 2 ಚಿನ್ನ, 1 ಬೆಳ್ಳಿ ಪದಕವನ್ನು ಭಾರತೀಯರು ಗೆದ್ದುಕೊಂಡರು. ಕ್ರೀಡಾಕೂಟ ಇನ್ನು 4 ದಿನಗಳ ಕಾಲ ನಡೆಯಲಿದ್ದು, ಭಾರತ ಮತ್ತಷ್ಟು ಪದಕಗಳನ್ನು ಗೆಲ್ಲುವ ಗುರಿ ಹೊಂದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.