* ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಬರೋಬ್ಬರಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದು ಕೊಟ್ಟ ದಿಗ್ಗಜ ಅಥ್ಲೀಟ್
* ಫ್ಲೈಯಿಂಗ್ ಸಿಖ್ ಎಂದೇ ಖ್ಯಾತಿಗಳಿಸಿದ್ದ ಮಿಲ್ಖಾ ಸಿಂಗ್ ನಿಧನ
* ಕೊರೋನಾದಿಂದ ಬಳಲುತ್ತಿದ್ದ ಮಿಲ್ಕಾ ಸಿಂಗ್
* ಮಿಲ್ಖಾ ಸಿಂಗ್ ಪತ್ನಿ ನಿರ್ಮಲ್ ಕೌರ್ ಐದು ದಿನಗಳ ಹಿಂದಷ್ಟೇ ಮೃತಪಟ್ಟಿದ್ದರು.
ನವದೆಹಲಿ(ಜೂ.19): ಚಂಡೀಗಢ: ಕೊರೋನಾ ಸೋಂಕು ತಗುಲಿದ 30 ದಿನಗಳ ಬಳಿಕ, ತಮ್ಮ ಪತ್ನಿ ನಿರ್ಮಲ್ ಕೌರ್ ನಿಧನರಾಗಿ ಕೇವಲ 5 ದಿನಗಳಲ್ಲಿ ಭಾರತದ ದಿಗ್ಗಜ ಅಥ್ಲೀಟ್, ‘ದಿ ಫ್ಲೈಯಿಂಗ್ ಸಿಖ್’ ಎಂದೇ ಖ್ಯಾತರಾದ ಮಿಲ್ಖಾ ಸಿಂಗ್(91) ನಿಧನರಾಗಿದ್ದಾರೆ. ಶುಕ್ರವಾರ ತಡರಾತ್ರಿ ಅವರು ಕೊನೆಯುಸಿರೆಳೆದರು ಎಂದು ಅವರ ಪುತ್ರ, ಅಂತಾರಾಷ್ಟ್ರೀಯ ಗಾಲ್‌್ಫ ಆಟಗಾರ ಜೀವ್ ಮಿಲ್ಖಾ ಸಿಂಗ್ ಮಾಧ್ಯಮಗಳಿಗೆ ಖಚಿತಪಡಿಸಿದರು.
ತಮ್ಮ ನಿವಾಸದ ಬಾಣಸಿಗರೊಬ್ಬರಿಗೆ ಸೋಂಕು ತಗುಲಿದ ಬಳಿಕ ಮೇ 20ರಂದು ಮಿಲ್ಖಾ ಅವರಲ್ಲೂ ಸೋಂಕು ಪತ್ತೆಯಾಗಿತ್ತು. ಅವರನ್ನು ಮೇ 24ರಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇ 30ರಂದು ಮಿಲ್ಖಾ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದರು. ಆದರೆ ಜೂ.3ರಂದು ಆಕ್ಸಿಜನ್ ಪ್ರಮಾಣ ಕಡಿಮೆಯಾದ ಕಾರಣ ಅವರನ್ನು ಮತ್ತೆ ಆಸ್ಪತ್ರೆಗೆ ಸೇರಿಸಲಾಗಿತ್ತು.
ಗುರುವಾರವಷ್ಟೇ ಅವರ ಕೋವಿಡ್ ವರದಿ ನೆಗೆಟಿವ್ ಬಂದಿತ್ತು. ಅವರನ್ನು ಕೋವಿಡ್ ಐಸಿಯುನಿಂದ ಸಾಮಾನ್ಯ ಐಸಿಯುಗೆ ಸ್ಥಳಾಂತರಿಸಲಾಗಿತ್ತು. ಆದರೆ ಶುಕ್ರವಾರ ಮತ್ತೆ ಅವರ ರಕ್ತದಲ್ಲಿ ಆಕ್ಸಿಜನ್ ಪ್ರಮಾಣ ಕಡಿಮೆಯಾದ ಕಾರಣ, ಅವರ ಸ್ಥಿತಿ ಗಂಭೀರವಾಗಿದೆ, ತೀವ್ರ ನಿಗಾ ವಹಿಸುತ್ತಿರುವುದಾಗಿ ಎಂದು ವೈದ್ಯರು ತಿಳಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಮಿಲ್ಖಾ ಸಿಂಗ್ ನಿಧನರಾದರು.
ದಿಗ್ಗಜ ಅಥ್ಲೀಟ್ ಮಿಲ್ಖಾ ಪತ್ನಿ ನಿರ್ಮಲ್ ಕೌರ್ ಕೋವಿಡ್‌ಗೆ ಬಲಿ
1958ರ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್, ನಾಲ್ಕು ಬಾರಿ ಏಷ್ಯನ್ ಗೇಮ್ಸ್ ಚಾಂಪಿಯನ್ ಆಗಿದ್ದ ಮಿಲ್ಖಾ ಸಿಂಗ್, 1960ರ ರೋಮ್ ಒಲಿಂಪಿಕ್ಸ್‌ನಲ್ಲಿ ಕೇವಲ ಭಾರತವನ್ನು ಪ್ರತಿನಿಧಿಸಿದ್ದರು. ಆದರೆ 1/100 ಸೆಕೆಂಡ್‌ಗಳ ಅಂತರದಲ್ಲಿ ಕಂಚಿನ ಪದಕ ಕೈತಪ್ಪಿಹೋಗಿತ್ತು.. ಕೊರೋನಾ ಸೋಂಕಿನಿಂದ ಅಸ್ವಸ್ಥರಾಗಿದ್ದ ಮಿಲ್ಖಾ ಸಿಂಗ್ ಅವರನ್ನು ಮೊಹಾಲಿಯ ಖಾಸಗಿ ಆಸ್ಪತ್ರೆಗೆ ಮೇ 24ರಂದು ದಾಖಲಿಸಲಾಗಿತ್ತು.
In the passing away of Shri Milkha Singh Ji, we have lost a colossal sportsperson, who captured the nation’s imagination and had a special place in the hearts of countless Indians. His inspiring personality endeared himself to millions. Anguished by his passing away. pic.twitter.com/h99RNbXI28
— Narendra Modi (@narendramodi)ಅಗಲಿದ ದಿಗ್ಗಜ ಅಥ್ಲೀಟ್ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಾಜಿ ಅಥ್ಲೀಟ್ ಒಬ್ಬ ಪುತ್ರ, ಜೀವ್ ಮಿಲ್ಖಾ ಸಿಂಗ್(ಜನಪ್ರಿಯ ಗಾಲ್ಫರ್) ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಈಗಿನ ಪಾಕಿಸ್ತಾನದ ಗೋಬಿಂದ್‌ಪುರದಲ್ಲಿ ಜನನ
ಮಿಲ್ಖಾ ಸಿಂಗ್ ನ.20, 1928ರಲ್ಲಿ ಈಗಿನ ಪಾಕಿಸ್ತಾನದ ಗೋಬಿಂದ್‌ಪುರದಲ್ಲಿ ಜನಿಸಿದ್ದರು. ದೇಶ ಇಬ್ಭಾಗವಾದ ಸಮಯದಲ್ಲಿ ಮಿಲ್ಖಾ, ಭಾರತಕ್ಕೆ ಬಂದು ನೆಲೆಯೂರಿದ್ದರು. ಕಾಮನ್‌ವೆಲ್ತ್ ಗೇಮ್ಸ್‌ನ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎನ್ನುವ ದಾಖಲೆಯನ್ನು 1958ರ ಕಾರ್ಡಿಫ್ ಗೇಮ್ಸ್‌ನಲ್ಲಿ ಮಿಲ್ಖಾ ಬರೆದಿದ್ದರು. ಅವರ ದಾಖಲೆ 50 ವರ್ಷಗಳಿಗೂ ಹೆಚ್ಚು ಕಾಲ ಉಳಿದಿತ್ತು.
ಮಿಲ್ಖಾ, ಭಾರತ ವಾಲಿಬಾಲ್ ತಂಡದ ಮಾಜಿ ನಾಯಕಿ ನಿರ್ಮಲ್ ಕೌರ್‌ರನ್ನು ವಿವಾಹವಾಗಿದ್ದರು. ದಂಪತಿಗೆ ಮೂರು ಹೆಣ್ಣು ಸೇರಿ ನಾಲ್ಕು ಜನ ಮಕ್ಕಳಿದ್ದಾರೆ. ಮಿಲ್ಖಾ ಹಾಗೂ ನಿರ್ಮಲ್‌ರ ಪುತ್ರ ಜೀವ್, 14 ಅಂತಾರಾಷ್ಟ್ರೀಯ ಗಾಲ್‌್ಫ ಟೂರ್ನಿಗಳಲ್ಲಿ ಗೆಲುವು ಸಾಧಿಸಿದ್ದಾರೆ. ಜೊತೆಗೆ ಪದ್ಮಶ್ರೀ ಪ್ರಶಸ್ತಿ ವಿಜೇತ ಕೂಡ. ಮಿಲ್ಖಾ ಸಿಂಗ್ ಜೀವನದ ಕುರಿತು ಬಾಲಿವುಡ್‌ನಲ್ಲಿ ‘ಭಾಘ್ ಮಿಲ್ಖಾ ಭಾಘ್’ ಸಿನಿಮಾ ತೆರೆ ಕಂಡು ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು.
ಏಷ್ಯನ್ ಗೇಮ್ಸ್‌ನಲ್ಲಿ ಮಿಲ್ಕಾ ಸಿಂಗ್ ಚಿನ್ನದ ಸಾಧನೆ ಹೀಗಿತ್ತು
ಹತ್ತಾರು ದಾಖಲೆಗಳ ವೀರ ಮಿಲ್ಖಾ ಸಿಂಗ್
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಿಲ್ಖಾ ಸಿಂಗ್ ಅಥ್ಲೆಟಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನೂ ಪಡೆದರು. ಏಷ್ಯನ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ನ 400 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಏಕೈಕ ಅಥ್ಲೀಟ್ ಎನ್ನುವ ಹಿರಿಮೆ ಮಿಲ್ಖಾರದ್ದು. 1958, 1962 ಏಷ್ಯನ್ ಗೇಮ್ಸ್‌ಗಳಲ್ಲೂ ಮಿಲ್ಖಾ ಚಿನ್ನದ ಪದಕಗಳನ್ನು ಗೆದ್ದಿದ್ದರು.
1956, 1960, 1964ರ ಒಲಿಂಪಿಕ್ಸ್‌ನಲ್ಲಿ ಮಿಲ್ಖಾ ಭಾರತವನ್ನು ಪ್ರತಿನಿಧಿಸಿದ್ದರು. 1960ರ ಒಲಿಂಪಿಕ್ಸ್‌ನ 400 ಮೀ. ಓಟದಲ್ಲಿ ಮಿಲ್ಖಾ ಕೂದಲೆಳೆಯ ಅಂತರದಲ್ಲಿ ಪದಕದಿಂದ ವಂಚಿತರಾಗಿ 4ನೇ ಸ್ಥಾನ ಪಡೆದಿದ್ದರು. ಭಾರತ ಸರ್ಕಾರ ಅವರಿಗೆ 1959ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.