ಮಹಿಳಾ ವಿಶ್ವ ಬಾಕ್ಸಿಂಗ್ ಕೂಟದಲ್ಲಿ ಭಾರತದ ಮಹಿಳಾ ಬಾಕ್ಸರ್ ಮೇರಿ ಕೋಮ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈಗಾಗಲೇ 8ನೇ ಪದಕ ಖಚಿತ ಪಡಿಸಿಕೊಂಡಿರುವ ಮೇರಿ ಕೋಮ್, ಚಿನ್ನಕ್ಕೆ ಗುರಿ ಇಟ್ಟಿದ್ದಾರೆ.
ಉಲನ್ ಉಡೆ (ರಷ್ಯಾ)ಅ.11): ಮಹಿಳಾ ವಿಶ್ವ ಬಾಕ್ಸಿಂಗ್‌ನಲ್ಲಿ ಮೇರಿ ಕೋಮ್ ದಾಖಲೆಯ 8ನೇ ಪದಕ ಖಚಿತಪಡಿಸಿದ್ದಾರೆ. ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ ಇತಿಹಾಸದಲ್ಲಿಯೇ 8ನೇ ಪದಕ ಗೆಲ್ಲಲಿರುವ ಮೊದಲ ಬಾಕ್ಸರ್ ಎಂಬ ದಾಖಲೆಗೆ ಮೇರಿ ಪಾತ್ರರಾಗಿದ್ದಾರೆ. ಎಐಬಿಎ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅತಿ ಹೆಚ್ಚು ಪದಕ ಗೆದ್ದ ಸಾಧನೆ ಮೇರಿ ಅವರದ್ದಾಗಿದೆ. ಕ್ಯೂಬಾದ ಪುರುಷ ಬಾಕ್ಸರ್ ಫೆಲಿಕ್ಸ್ ಸೇವನ್ ಅತಿಹೆಚ್ಚು 7 ಪದಕ ಗೆದ್ದಿದ್ದರು. ದಿಗ್ಗಜ ಫೆಲಿಕ್ಸ್ ಹಿಂದಿಕ್ಕಿದ ಮೇರಿ ವಿಶ್ವ ಬಾಕ್ಸಿಂಗ್‌ನಲ್ಲಿ ಅತ್ಯಂತ ಯಶಸ್ವಿ ಬಾಕ್ಸರ್ ಎನಿಸಿಕೊಂಡಿದ್ದಾರೆ. 7 ಪದಕ ಗೆದ್ದಿದ್ದ ಐರಿಷ್ ಮಹಿಳಾ ಬಾಕ್ಸರ್ ಕ್ಯಾಟಿ ಟೇಲರ್ ವೃತ್ತಿಪರ ಬಾಕ್ಸಿಂಗ್ನತ್ತ ವಾಲಿದ್ದಾರೆ. 6 ಬಾರಿ ವಿಶ್ವ ಚಾಂಪಿಯನ್ ಎನಿಸಿರುವ ಮೇರಿ, ವಿಶ್ವ ಬಾಕ್ಸಿಂಗ್‌ನಲ್ಲಿ ಇದುವರೆಗೂ 6 ಚಿನ್ನ, 1 ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಆವೃತ್ತಿಯಲ್ಲಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಪದಕವೊಂದನ್ನು ಖಚಿತಪಡಿಸಿದರು.
ಇದನ್ನೂ ಓದಿ: ಪದ್ಮವಿಭೂಷಣ ಪ್ರಶಸ್ತಿಗೆ ಬಾಕ್ಸರ್ ಮೇರಿ ಕೋಮ್ ಹೆಸರು ಶಿಫಾರಸು
undefined
51 ಕೆ.ಜಿ ವಿಭಾಗದ ಕ್ವಾರ್ಟರ್ ಫೈನಲ್ನಲ್ಲಿ ಕೊಲಂಬಿಯಾದ ವೆಲೆನ್ಸಿಯಾ ವಿಕ್ಟೋರಿಯಾ ಅವರನ್ನು ಮೇರಿ ಮಣಿಸಿದರು. 2012ರ ಒಲಿಂಪಿಕ್ ಪದಕ ವಿಜೇತೆ ಮೇರಿ, ‘ಪ್ರಿ ಕ್ವಾರ್ಟರ್ ಪಂದ್ಯಕ್ಕಿಂತ ಕ್ವಾರ್ಟರ್ ಫೈನಲ್ ಪಂದ್ಯ ಸುಲಭವಿತ್ತು. ಪ್ರಿ ಕ್ವಾರ್ಟರ್ನಲ್ಲಿ ಥಾಯ್ಲೆಂಡ್ ಬಾಕ್ಸರ್ ಜಿಟ್ಪೊಂಗ್ ಹೆಚ್ಚು ಬಲಶಾಲಿ ಆಗಿದ್ದರು’ ಎಂದು ತಿಳಿಸಿದರು. ಶನಿವಾರ ನಡೆಯಲಿರುವ ಸೆಮಿಫೈನಲ್ನಲ್ಲಿ ಮೇರಿ, ಯುರೋಪಿಯನ್ ಚಾಂಪಿಯನ್ ಟರ್ಕಿ ಬಾಕ್ಸರ್ ಬ್ಯೂಸೆನಾಜ್ ಕಾಕಿರೋಗ್ಲು ಅವರನ್ನು ಎದುರಿಸಲಿದ್ದಾರೆ.
ಇದನ್ನೂ ಓದಿ: ಬಾಕ್ಸಿಂಗ್‌ಗೆ ಕಾಲಿಡಲು ಮೊಹಮದ್ ಅಲಿ ಸ್ಫೂರ್ತಿ; ಮೇರಿ ಕೋಮ್
ಅತಿಹೆಚ್ಚು ಪದಕ ಗೆದ್ದ ಬಾಕ್ಸರ್‌ಗಳು :
ಭಾರತದ ಮೇರಿ ಕೋಮ್ 8ಪದಕ
ಕ್ಯೂಬಾದ ಫೆಲಿಕ್ಸ್ ಸೇವನ್ 7ಪದಕ
ಐರ್ಲೆಂಡ್‌ನ ಕ್ಯಾಟಿ ಟೇಲರ್ 7 ಪದಕ
ನನ್ನ ಮೇಲೆ ಬಹಳ ನಿರೀಕ್ಷೆಯಿದೆ ಎಂದು ತಿಳಿದಿದೆ. ಸದ್ಯ ಅರ್ಧ ಕೆಲಸವನ್ನಷ್ಟೇ ಮುಗಿಸಿದ್ದೇನೆ. ಚಿನ್ನದ ಪದಕ ಗೆಲ್ಲುವ ವಿಶ್ವಾಸ ನನಲ್ಲಿದೆ. ಈ ಬಾರಿಯೂ ಇಡೀ ದೇಶವೇ ನನ್ನ ಬೆಂಬಲಕ್ಕೆ ನಿಂತಿದೆ. ಇಷ್ಟುದೊಡ್ಡ ಬೆಂಬಲ ಸಿಕ್ಕಿಯೂ ನಾನು ಗೆಲ್ಲದಿದ್ದರೆ ಹೇಗೆ? ಎಂದು ಮೇರಿ ಕೋಮ್ ಹೇಳಿದ್ದಾರೆ.
ಇದನ್ನೂ ಓದಿ: ಬಾಕ್ಸಿಂಗ್: ಭಾರತದ ಮೇರಿ ಕೋಮ್ ನಂ.1
ಭಾರತಕ್ಕೆ 4 ಪದಕ ಖಚಿತ:
ಮೇರಿ ಕೋಮ್ ಸೇರಿದಂತೆ ಉಳಿದ ಮೂವರು ಬಾಕ್ಸರ್‌ಗಳು ಸೆಮೀಸ್ ಪ್ರವೇಶಿಸುವ ಮೂಲಕ ಭಾರತಕ್ಕೆ ಕನಿಷ್ಠ 4 ಕಂಚಿನ ಪದಕ ಖಚಿತವಾದಂತಾಗಿದೆ. ವಿಶ್ವ ಬಾಕ್ಸಿಂಗ್‌ನಲ್ಲಿ ಪಾದಾರ್ಪಣೆ ಮಾಡಿರುವ ಮಂಜು ರಾಣಿ, ಜಮುನಾ ಬೊರೊ ಚೊಚ್ಚಲ ಪದಕದ ನಿರೀಕ್ಷೆ ಮೂಡಿಸಿದರು. 48 ಕೆ.ಜಿ ವಿಭಾಗದಲ್ಲಿ ಮಂಜು, ದ. ಕೊರಿಯಾದ ಕಿಮ್ ಹ್ಯಾಂಗ್ ವಿರುದ್ಧ 4-1ರಿಂದ ಗೆದ್ದರು. ಜಮುನಾ, 54 ಕೆ.ಜಿ. ವಿಭಾಗದಲ್ಲಿ ಜರ್ಮನಿ ಬಾಕ್ಸರ್ ಉರ್ಸುಲಾ ಗೊಟ್ಲೊಬ್ ಎದುರು ಗೆದ್ದರು. ಲೊವ್ಲಿನಾ, 69 ಕೆ.ಜಿ. ವಿಭಾಗದಲ್ಲಿ ಸೆಮೀಸ್‌ಗೇರಿದ್ದು ಸತತ 2ನೇ ಪದಕ ಖಚಿತಪಡಿಸಿದರು.
ಕವಿತಾಗೆ ನಿರಾಸೆ: ಕವಿತಾ ಚಾಹರ್ +81 ಕೆ.ಜಿ. ವಿಭಾಗದಲ್ಲಿ ಬೆಲಾರಸ್‌ನ ಎದುರಾಳಿ ಕಟ್ಸಿಯಾರ್ಯನಾ ಕವಲೇವಾ ವಿರುದ್ಧ 1-4ರಲ್ಲಿ ಪರಾಭವ ಹೊಂದಿದರು.