ಕರ್ನಾಟಕದಲ್ಲಿ ಇದೀಗ 2ನೇ ಕಬಡ್ಡಿ ಲೀಗ್ ಆರಂಭವಾಗುತ್ತಿದೆ. ಕರ್ನಾಟಕ ಪ್ರೋ ಕಬಡ್ಡಿ ಬೆನ್ನಲ್ಲೇ ಇದೀಗ ಕರ್ನಾಟಕ ಪ್ರೀಮಿಯರ್ ಕಬಡ್ಡಿ ಲೀಗ್ ಟೂರ್ನಿ ಆರಂಭವಾಗುತ್ತಿದೆ. 2ನೇ ಕಬಡ್ಡಿ ಲೀಗ್ ಮಾಹಿತಿ ಇಲ್ಲಿದೆ.
ಬೆಂಗಳೂರು(ಡಿ.15): ಕರ್ನಾಟಕ ಅಮೆಚೂರ್ ಕಬಡ್ಡಿ ಸಂಸ್ಥೆ, ರಾಜ್ಯದಲ್ಲಿ ಕಬಡ್ಡಿ ಕ್ರೀಡೆಯನ್ನು ಮತ್ತಷ್ಟುಜನಪ್ರಿಯಗೊಳಿಸಲು ದಿಢೀರನೆ ಎರಡೆರಡು ಟೂರ್ನಿಗಳನ್ನು ಆಯೋಜಿಸಲು ಮುಂದಾಗಿದೆ. ಕರ್ನಾಟಕ ಪ್ರೊ ಕಬಡ್ಡಿ ಹೆಸರಿನ ಟೂರ್ನಿ ಆರಂಭಗೊಳ್ಳುತ್ತಿದೆ ಎನ್ನುವ ಸುದ್ದಿಯನ್ನು ಶನಿವಾರವಷ್ಟೇ ‘ಸುವರ್ಣನ್ಯೂಸ್.ಕಾಂ’ ಪ್ರಕಟಿಸಿತ್ತು. ಹೊಸ ಸುದ್ದಿ ಏನೆಂದರೆ, ಈ ಟೂರ್ನಿಯ ಜತೆ ಕರ್ನಾಟಕ ಪ್ರೀಮಿಯರ್ ಕಬಡ್ಡಿ ಲೀಗ್ (ಕೆಪಿಕೆಎಲ್) ಟೂರ್ನಿ ಸಹ ಆಯೋಜನೆಗೊಳ್ಳುತ್ತಿದೆ.
ಇದನ್ನೂ ಓದಿ: ಆರಂಭವಾಗುತ್ತಿದೆ ಕರ್ನಾಟಕ ಪ್ರೊ ಕಬಡ್ಡಿ ಲೀಗ್; ಆಯ್ಕೆಯಲ್ಲಿ 860 ಆಟಗಾರರು!.
ಪ್ರೊ ಕಬಡ್ಡಿ ಮಾದರಿಯಲ್ಲಿ ಈ ಎರಡೂ ಟೂರ್ನಿಗಳು ನಡೆಯಲಿವೆ. ಕೆಪಿಕೆಎಲ್, 2020ರ ಜ.31ರಿಂದ ಫೆ.16ರ ವರೆಗೂ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಟೂರ್ನಿ ಮುಕ್ತಾಯಗೊಂಡ 10 ದಿನಗಳ ಬಳಿಕ, ಮಂಗಳೂರಿನ ನೆಹರು ಕ್ರೀಡಾಂಗಣದಲ್ಲಿ ಕರ್ನಾಟಕ ಪ್ರೊ ಕಬಡ್ಡಿ ಟೂರ್ನಿ ನಡೆಯಲಿದೆ.
ಇದನ್ನೂ ಓದಿ: ರಾಷ್ಟ್ರೀಯ ಕಬಡ್ಡಿ ಶಿಬಿರ: ರಾಜ್ಯದ ನಾಲ್ವರಿಗೆ ಸ್ಥಾನ
ಹೆಚ್ಚು ಪ್ರತಿಭೆಗಳಿಗೆ ಅವಕಾಶ ಸಿಗಲಿ ಎನ್ನುವ ಉದ್ದೇಶದಿಂದ ಎರಡು ಟೂರ್ನಿಗಳನ್ನು ನಡೆಸುತ್ತಿರುವುದಾಗಿ ಅಮೆಚೂರ್ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ. ಕರ್ನಾಟಕ ಪ್ರೊ ಕಬಡ್ಡಿ ಮಾದರಿಯಲ್ಲೇ ಕೆಪಿಕೆಎಲ್ ಟೂರ್ನಿ ಸಹ ನಡೆಯಲಿದ್ದು, ರಾಜ್ಯದ ತಾರಾ ಆಟಗಾರರು ಎರಡೂ ಲೀಗ್‌ಗಳಲ್ಲಿ ಪಾಲ್ಗೊಳ್ಳಲಿದ್ದಾರೆ.