ಡೆನ್ಮಾರ್ಕ್ ಓಪನ್ ಟೂರ್ನಿಯಲ್ಲಿ ಪಿ.ವಿ ಸಿಂಧು ಆಘಾತಕಾರಿ ಸೋಲು ಕಾಣುವುದರೊಂದಿಗೆ ಭಾರತದ ಅಭಿಯಾನವೂ ಅಂತ್ಯವಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಒಡೆನ್ಸೆ[ಅ.18]: ವಿಶ್ವ ಚಾಂಪಿಯನ್ ಶಟ್ಲರ್ ಭಾರತದ ಪಿ.ವಿ. ಸಿಂಧು, ಬಿ.ಎಸ್. ಪ್ರಣೀತ್ ಹಾಗೂ ಸಮೀರ್ ವರ್ಮಾ ಇಲ್ಲಿ ನಡೆಯುತ್ತಿರುವ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೋಲುಂಡು ಹೊರಬಿದ್ದಿದ್ದಾರೆ. ಇದರೊಂದಿಗೆ ಭಾರತದ ಸವಾಲು ಅಂತ್ಯವಾಗಿದೆ.
ಗುರುವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ 2ನೇ ಸುತ್ತಿನ ಪಂದ್ಯದಲ್ಲಿ ಸಿಂಧು, ದ.ಕೊರಿಯಾದ ಅನ್ ಸೆ ಯಂಗ್ ಎದುರು 14-21, 17-21 ಗೇಮ್‌ಗಳಲ್ಲಿ ಸೋಲು ಕಂಡರು. 40 ನಿಮಿಷಗಳ ಆಟದಲ್ಲಿ ಕೊರಿಯಾ ಶಟ್ಲರ್ ಎದುರು ಸಿಂಧು ತಲೆ ಬಾಗಿದರು.
ಡೆನ್ಮಾರ್ಕ್ ಓಪನ್: ಮೊದಲ ಸುತ್ತಲ್ಲೇ ಸೈನಾಗೆ ಆಘಾತ!
ವಿಶ್ವ ಚಾಂಪಿಯನ್‌ಶಿಪ್‌ನಿಂದ ಇಲ್ಲಿಯವರೆಗೆ ಸಿಂಧು 3 ಟೂರ್ನಿಗಳಲ್ಲಿ ಮೊದಲ 2 ಸುತ್ತುಗಳಲ್ಲಿ ನಿರ್ಗಮಿಸಿದ್ದಾರೆ. ಈ ಹಿಂದೆ ಚೀನಾ ಓಪನ್ ಹಾಗೂ ಕೊರಿಯಾ ಓಪನ್‌ನಲ್ಲಿ ಸಿಂಧು ಕ್ರಮವಾಗಿ 2ನೇ ಮತ್ತು ಮೊದಲ ಸುತ್ತಲ್ಲಿ ಹೊರಬಿದ್ದಿದ್ದರು.
ಪುರುಷರ ಸಿಂಗಲ್ಸ್‌ನ 2ನೇ ಸುತ್ತಿನಲ್ಲಿ ಬಿ. ಸಾಯಿ ಪ್ರಣೀತ್, ಜಪಾನ್‌ನ ಕೆಂಟೊ ಮೊಮೊಟ ವಿರುದ್ಧ 6-21, 14-21 ಗೇಮ್‌ಗಳಲ್ಲಿ ಪರಾಭವ ಹೊಂದಿದರು. ಮತ್ತೊಂದು ಸಿಂಗಲ್ಸ್ ಪ್ರಿ ಕ್ವಾರ್ಟರ್‌ನಲ್ಲಿ ಸಮೀರ್ ವರ್ಮಾ, ಒಲಿಂಪಿಕ್ ಚಾಂಪಿಯನ್ ಚೀನಾದ ಚೆನ್ ಲಾಂಗ್ ಎದುರು 12-21, 10-21 ಗೇಮ್‌ಗಳಲ್ಲಿ ಸೋಲು ಕಂಡರು. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್, ಚಿರಾಗ್ ಜೋಡಿ ಸೋಲು ಕಂಡು ಹೊರಬಿತ್ತು.
ಈ ಮೊದಲು ಸೈನಾ ನೆಹ್ವಾಲ್ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದ್ದರು.