
ಕಜಕಸ್ತಾನ(ನ.30): ಏಷ್ಯಾ/ ಓಷಿಯಾನಿಯಾ ಡೇವಿಸ್ ಕಪ್ ಟೆನಿಸ್ ಪಂದ್ಯಗಳ ಮೊದಲ ದಿನದಾಟದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಸಿಂಗಲ್ಸ್ ವಿಭಾಗದ 2 ಪಂದ್ಯಗಳಲ್ಲಿ ಭಾರತದ ಟೆನಿಸ್ ಆಟಗಾರರು ಪ್ರಾಬಲ್ಯ ಮೆರೆದಿದ್ದು 2-0 ಮುನ್ನಡೆ ಪಡೆದಿದ್ದಾರೆ.
ಡೇವಿಸ್ ಕಪ್: ಇಂದಿನಿಂದ ಭಾರತ-ಪಾಕ್ ಫೈಟ್
ಶುಕ್ರವಾರ ಇಲ್ಲಿನ ರಾಷ್ಟ್ರೀಯ ಟೆನಿಸ್ ಸೆಂಟರ್ನಲ್ಲಿ ನಡೆದ ಹಣಾಹಣಿಯಲ್ಲಿ ನಿರೀಕ್ಷೆಯಂತೆಯೇ ಭಾರತೀಯರು ಅದ್ಭುತ ಆಟವಾಡಿದರು. ಮೊದಲ ಸಿಂಗಲ್ಸ್‌ನಲ್ಲಿ ಭಾರತದ ರಾಮ್‌ಕುಮಾರ್ ರಾಮನಾಥನ್, 17 ವರ್ಷ ವಯಸ್ಸಿನ ಪಾಕಿಸ್ತಾನದ ಮೊಹಮದ್ ಶೋಯೆಬ್ ವಿರುದ್ಧ 6-0, 6-0 ನೇರ ಸೆಟ್ಗಳಲ್ಲಿ ಜಯಿಸಿದರು. ಕೇವಲ 42 ನಿಮಿಷಗಳ ಆಟದಲ್ಲಿ ರಾಮ್‌ಕುಮಾರ್ ಎದುರಾಳಿ ಆಟಗಾರನನ್ನು ಮಣಿಸಿದರು. 2ನೇ ಸೆಟ್ನ 6ನೇ ಗೇಮ್ನಲ್ಲಿ 2 ಬಾರಿ ಅಂಕಗಳು 40-40 ಸಮವಾಗಿದ್ದು ಹೊರತುಪಡಿಸಿದರೆ, ಉಳಿದಂತೆ ರಾಮ್‌ಕುಮಾರ್, ಪಾಕ್ ಆಟಗಾರನ ಎದುರು ಸಂಪೂರ್ಣ ಪ್ರಾಬಲ್ಯ ಸಾಧಿಸಿದರು.
ಡೇವಿಸ್ ಕಪ್: ಪಾಕ್ ಟೀಂನಲ್ಲಿ 17ರ ಟೆನಿಸಿಗರು!
ಮತ್ತೊಂದು ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಭಾರತದ ಸುಮಿತ್ ನಗಾಲ್, ಪಾಕಿಸ್ತಾನದ ಹುಫೈಜ್ ಮೊಹಮದ್ ರಹಮನ್ ವಿರುದ್ಧ 6-0, 6-2 ನೇರ ಸೆಟ್‌ಗಳಿಂದ ಗೆಲುವು ಪಡೆದರು. ಇದರೊಂದಿಗೆ ಸುಮಿತ್ ಡೇವಿಸ್ ಕಪ್‌ನಲ್ಲಿ ಮೊಟ್ಟಮೊದಲ ಗೆಲುವು ದಾಖಲಿಸಿದರು. 64 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸುಮಿತ್ ಅವರ ಅತ್ಯದ್ಭುತ ಹೊಡೆತಗಳಿಗೆ ಪಾಕ್‌ನ ಟೆನಿಸಿಗ ಮೊಹಮದ್ ರಹಮನ್ ಅವರ ಬಳಿ ಉತ್ತರವಿರಲಿಲ್ಲ.
ಭಾರತ ಹಾಗೂ ಪಾಕ್ ಪಂದ್ಯವನ್ನು ತಟಸ್ಥ ಸ್ಥಳದಲ್ಲಿ ನಡೆಸುವ ಅಂತಾರಾಷ್ಟ್ರೀಯ ಟೆನಿಸ್ ಸಂಸ್ಥೆ (ಐಟಿಎಫ್) ನಿರ್ಧಾರವನ್ನು ಪಾಕ್ ಹಿರಿಯ ಆಟಗಾರರು ವಿರೋಧಿಸಿದ್ದು, ಪಾಕಿಸ್ಥಾನ ಟೆನಿಸ್ ತಂಡಕ್ಕೆ ದೊಡ್ಡ ನಷ್ಟವಾಗಿ ಪರಿಣಮಿಸಿತು. ಹಿರಿಯ ಆಟಗಾರರು ಅನುಪಸ್ಥಿತಿಯಲ್ಲಿ ಪಾಕಿಸ್ತಾನ ದೊಡ್ಡ ಹೋರಾಟ ಪ್ರದರ್ಶಿಸಿಲ್ಲ. ಶುಕ್ರವಾರ ನಡೆದ ಎರಡೂ ಸಿಂಗಲ್ಸ್‌ನಲ್ಲಿ ಭಾರತ ಜಯಿಸಿದೆ. ಎರಡನೇ ದಿನವಾದ ಶನಿವಾರ ಒಟ್ಟು 3 ಪಂದ್ಯಗಳು ನಡೆಯಲಿವೆ. ಡಬಲ್ಸ್ನಲ್ಲಿ ಹುಫೈಜಾ ಹಾಗೂ ಶೋಯೆಬ್ರನ್ನು ಅನುಭವಿಯಾದ ಲಿಯಾಂಡರ್ ಪೇಸ್- ಜೀವನ್ ನೆಡುಂಚಿಯಾನ್ ಜೋಡಿ ಎದುರಿಸಲಿದೆ. ದಾಖಲೆಯ 44ನೇ ಗೆಲುವಿಗೆ ಪೇಸ್ ಎದುರು ನೋಡುತ್ತಿದ್ದಾರೆ. ಇನ್ನೆರಡು ಸಿಂಗಲ್ಸ್‌ನಲ್ಲಿ ಶೋಯೆಬ್ರನ್ನು ನಗಾಲ್ ಹಾಗೂ ಹುಫೈಜಾರನ್ನು ರಾಮ್‌ಕುಮಾರ್ ಎದುರಿಸಲಿದ್ದಾರೆ.
ಕ್ರೊವೇಶಿಯಾಗೆ ಭಾರತ ತಂಡ?
ಡೇವಿಸ್ ಕಪ್ ಟೆನಿಸ್ ಇತಿಹಾಸದಲ್ಲಿ 6 ಬಾರಿ ಪಾಕಿಸ್ತಾನವನ್ನು ಎದುರಿಸಿದ ಭಾರತ ಇದುವರೆಗೆ ಸೋಲು ಕಂಡಿಲ್ಲ. ಈ ಬಾರಿ ಪಾಕಿಸ್ತಾನವನ್ನು ಸೋಲಿಸುವುದು ಇನ್ನಷ್ಟು ಸುಲಭವಾಗಿದೆ. ಪಾಕಿಸ್ತಾನ ಆಟಗಾರರು ಪದಾರ್ಪಣಾ ಡೇವಿಸ್ ಕಪ್ ಆಡುತ್ತಿದ್ದಾರೆ. ಶನಿವಾರವೂ ಎಲ್ಲಾ 3 ಪಂದ್ಯಗಳನ್ನು ಜಯಿಸುವ ಮೂಲಕ 5-0ರಲ್ಲಿ ಭಾರತ ವಿಶ್ವ ಗುಂಪಿನ ಅರ್ಹತಾ ಸುತ್ತು ಪ್ರವೇಶಿಸುವ ನಿರೀಕ್ಷೆಯಿದೆ. ಮುಂದಿನ ವರ್ಷ ಮಾ.6-7ರಂದು ಕ್ರೊವೇಶಿಯಾದಲ್ಲಿ ವಿಶ್ವ ಗುಂಪಿನ ಅರ್ಹತಾ ಪಂದ್ಯಗಳು ನಡೆಯಲಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.