ಭಾರತದ ಯುವ ಶೂಟರ್ ಮನು ಭಾಕರ್ ಮತ್ತೊಂದು ಚಿನ್ನಕ್ಕೆ ಕೊರಳೊಡ್ಡಿದ್ದಾರೆ. 14ನೇ ಏಷ್ಯನ್ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನಕ್ಕೆ ಮನು ಮುತ್ತಿಕ್ಕಿದ್ದಾರೆ. ಇನ್ನು ಪುರುಷರ 10 ಮೀ. ಏರ್ ರೈಫಲ್‌ನಲ್ಲಿ ದೀಪಕ್ 3ನೇ ಸ್ಥಾನ ಪಡೆಯುವುದರೊಂದಿಗೆ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಂಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ದೋಹಾ(ನ.06): 14ನೇ ಏಷ್ಯನ್ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತದ ಯುವ ಶೂಟರ್ ಮನು ಭಾಕರ್ ಚಿನ್ನದ ಪದಕ ಗೆದ್ದಿದ್ದಾರೆ. 17 ವರ್ಷದ ಹರ್ಯಾಣ ಶೂಟರ್ ಮನು ವನಿತೆಯರ 10 ಮೀ. ಏರ್ ಪಿಸ್ತೂಲ್ ಫೈನಲ್‌ನಲ್ಲಿ 244.3 ಅಂಕಗಳನ್ನು ಸಂಪಾದಿಸಿ ಮೊದಲ ಸ್ಥಾನ ಪಡೆದರು.
ಶೂಟಿಂಗ್ ವಿಶ್ವಕಪ್: ಭಾರತಕ್ಕೆ ಅಗ್ರಸ್ಥಾನ!
ಚೀನಾದ ಕ್ಸಿಯಾನ್ ವಾಂಗ್ ಹಾಗೂ ರಾನ್‌ಕ್ಸಿನ್ ಜಿಯಾಂಗ್‌ರನ್ನು ಹಿಂದಿಕ್ಕಿ ಮನು ಅಗ್ರಸ್ಥಾನಿಯಾದರು. ಮಂಗಳವಾರ ಭಾರತೀಯ ಶೂಟರ್‌ಗಳು ಉತ್ತಮ ಪ್ರದರ್ಶನ ನೀಡಿ, ಒಟ್ಟು 5 ಪದಕಗಳನ್ನು ಗೆದ್ದರು. ಮಿಶ್ರ ತಂಡ ಟ್ರ್ಯಾಪ್‌ನಲ್ಲಿ ಚೀನಾ ಜೋಡಿಯನ್ನು 34-29ರಲ್ಲಿ ಸೋಲಿಸಿದ ಭಾರತದ ವಿಹಾನ್ ಕಪೂರ್ ಹಾಗೂ ಮನೀಶಾ ಕೀರ್ ಚಿನ್ನದ ಪದಕಕ್ಕೆ ಮುತ್ತಿಟ್ಟರು.
ಶೂಟಿಂಗ್ ವಿಶ್ವಕಪ್: ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ ಮನು
ವನಿತೆಯರ 10 ಮೀ. ಏರ್ ರೈಫಲ್ ತಂಡ ಸ್ಪರ್ಧೆಯಲ್ಲಿ ಇಳವೆನ್ನಿಲ ವಳರಿವನ್, ಅಂಜುಮ್ ಮೌದ್ಗಿಲ್ ಹಾಗೂ ಅಪೂರ್ವಿ ಚಂಡಿಲಾ 1883.2 ಅಂಕ ಗಳಿಸಿ, ಬೆಳ್ಳಿ ಪದಕ ಜಯಿಸಿದರು. ಮಹಿಳೆಯರ 10 ಮೀ. ಏರ್ ಪಿಸ್ತೂಲ್ ತಂಡ ವಿಭಾಗದಲ್ಲಿ ಮನು, ಯಶಸ್ವಿನಿ ದೇಸ್ವಾಲ್ ಹಾಗೂ ಅನ್ನು ರಾಜ್ ಸಿಂಗ್ 1731 ಅಂಕಗಳನ್ನು ಕಲೆಹಾಕಿ, ಕಂಚಿಗೆ ಕೊರಳೊಡ್ಡಿದರು.
2020ರ ಟೋಕಿಯೋ ಒಲಿಂಪಿಕ್ಸ್‌ಗೆ ದೀಪಕ್!
ಜನ್ಮದಿನದಂದೇ ಕಂಚಿನ ಪದಕ ಗೆದ್ದ ದೀಪಕ್ ಕುಮಾರ್ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಸಂಪಾದಿಸಿದರು. ಒಲಿಂಪಿಕ್ಸ್‌ಗೆ ಪ್ರವೇಶ ಪಡೆದ ಭಾರತದ 10ನೇ ಶೂಟರ್ ಎನಿಸಿಕೊಂಡರು. ಪುರುಷರ 10 ಮೀ. ಏರ್ ರೈಫಲ್‌ನಲ್ಲಿ ದೀಪಕ್ 3ನೇ ಸ್ಥಾನ ಗಳಿಸಿದರು.