
ನವದೆಹಲಿ(ಜೂ.30): ಏಷ್ಯನ್ ಗೇಮ್ಸ್ ಕಂಚು ವಿಜೇತ ಟೆನಿಸಿಗರಾದ ಅಂಕಿತಾ ರೈನಾ ಹಾಗೂ ಪ್ರಜ್ನೇಶ್ ಗುಣೇಶ್ವರನ್ ಹೆಸರನ್ನು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಶಿಫಾರಸು ಮಾಡಿದೆ.
ಅಂಕಿತಾ ಹಾಗೂ ಪ್ರಜ್ನೇಶ್ ಇಬ್ಬರೂ 2018ರ ಜಕಾರ್ತ ಏಷ್ಯನ್ ಗೇಮ್ಸ್‌ನ ಸಿಂಗಲ್ಸ್ ವಿಭಾಗದಲ್ಲಿ ಕಂಚು ಗೆದ್ದಿದ್ದರು. ಭಾರತ ನಂ.1 ಆಟಗಾರ್ತಿ ಅಂಕಿತಾ, ಮುಂದಿನ ತಿಂಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು ವಿಶ್ವ ರ‍್ಯಾಂಕಿಂಗ್‌ನಲ್ಲಿ 148ನೇ ಸ್ಥಾನದಲ್ಲಿರುವ ಪ್ರಜ್ನೇಶ್ 5 ಬಾರಿ ಡೇವಿಸ್ ಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 28 ವರ್ಷದ ಅಂಕಿತಾ ರೈನಾ ಹೆಸರನ್ನು ಕಳೆದ ವರ್ಷವೂ ಎಐಟಿಎ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿತ್ತು. ಆದರೆ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ದಿವಿಜ್ ಶರಣ್ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು.
ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ಆನ್‌ಲೈನ್‌ನಿಂದಲೇ ಅರ್ಜಿ ಆಹ್ವಾನ
ಟೆನಿಸ್ ಕ್ಷೇತ್ರದಲ್ಲಿ ಜೀವಮಾನ ಸಾಧನೆ ಮಾಡಿದವರ ವಿಭಾಗದಲ್ಲಿ ಧ್ಯಾನ್ ಚಂದ್ ಪ್ರಶಸ್ತಿಗಾಗಿ ಬಲರಾಮ್ ಸಿಂಗ್ ಹಾಗೂ ಎನ್‌ರಿಕೊ ಪಿಪೆರ್ನೊ ಹೆಸರನ್ನು ನಾಮನಿರ್ದೇಶನ ಮಾಡಲಾಗಿದೆ. ಬಲರಾಮ್ ಭಾರತೀಯ ಟೆನಿಸ್ ಸಂಸ್ಥೆಯೊಂದಿಗೆ 50 ವರ್ಷಗಳ ಕಾಲ ಒಡನಾಟ ಹೊಂದಿದ್ದಾರೆ. 1989 ಹಾಗೂ 1990ರ ಡೇವಿಸ್ ಕಪ್ ಟೂರ್ನಿಯಲ್ಲಿ ಭಾರತ ತಂಡ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಇದಷ್ಟೇ ಅಲ್ಲದೇ 1966ರ ಜೂನಿಯರ್ ವಿಂಬಲ್ಡನ್ ಹಾಗೂ ಜೂನಿಯರ್ ಯುಎಸ್ ಓಪನ್ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ಸಾಧನೆ ಮಾಡಿದ್ದರು. 73 ವರ್ಷದ ಬಲರಾಮ್ ಸಿಂಗ್ ಅವರು ವಿವಾದರಹಿತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.
ಇನ್ನು ಎನ್‌ರಿಕೊ ಪಿಪೆರ್ನೊ 1991ರಿಂದ 2001ರವರೆಗೆ ಭಾರತ ಡೇವಿಸ್ ಕಪ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿ ಗಮನ ಸೆಳೆದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.