* ಭಾರತದಲ್ಲಿ ನಡೆಯಬೇಕಿದ್ದ 2 ಬ್ಯಾಡ್ಮಿಂಟನ್ ಟೂರ್ನಿ ಬಲಿ ಪಡೆದ ಕೋವಿಡ್ 19
* ಕೊರೋನಾ ಭೀತಿಗೆ ಇಂಡಿಯನ್ ಓಪನ್, ಹೈದರಾಬಾದ್ ಓಪನ್ ರದ್ದು.
* ಸಯ್ಯದ್ ಮೋದಿ ಇಂಟರ್‌ನ್ಯಾಷನಲ್ ಸೂಪರ್ 300 ಟೂರ್ನಿಯು ನಡೆಸಲು ಆಯೋಜಕರು ಚಿಂತನೆ
ನವದೆಹಲಿ(ಜೂ.29): ಭಾರತದಲ್ಲಿ ನಡೆಯಬೇಕಿದ್ದ ಎರಡು ಪ್ರಮುಖ ಬ್ಯಾಡ್ಮಿಂಟನ್ ಪಂದ್ಯಾವಳಿಗಳು ಕೊರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ರದ್ದಾಗಿವೆ.
ಮೇ 11ರಿಂದ 16ರವರೆಗೆ ದೆಹಲಿಯಲ್ಲಿ ನಡೆಯಬೇಕಿದ್ದ ಇಂಡಿಯನ್ ಓಪನ್ ಹಾಗೂ ಆ.24ರಿಂದ 29ರವರೆಗೆ ನಡೆಯಬೇಕಿದ್ದ ಹೈದರಾಬಾದ್ ಓಪನ್ ಪಂದ್ಯಾವಳಿಗಳನ್ನು ರದ್ದುಗೊಳಿಸಲಾಗಿದೆ. ಚೀನಾದಲ್ಲಿ ನಡೆಯಬೇಕಿದ್ದ ಸುದಿರ್‌ಮನ್ ಕಪ್ ಹಾಗೂ ವಿಶ್ವ ಟೂರ್ ಫೈನಲ್ಸ್ ಕೂಡ ಸ್ಥಳಾಂತರಿಸಲು ವಿಶ್ವ ಬ್ಯಾಡ್ಮಿಂಟನ್ ಸಂಸ್ಥೆ ನಿರ್ಧರಿಸಿದೆ.
4,00,000 ಯುಎಸ್ ಡಾಲರ್ ಬಹುಮಾನ ಮೊತ್ತದ ಇಂಡಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯು ಮೇ.11ರಿಂದ 16ರವರೆಗೆ ನಿಗದಿಯಾಗಿತ್ತು. ಈ ಟೂರ್ನಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಪಡೆಯಲು ಕೊನೆಯ ಅವಕಾಶ ಕೂಡಾ ಆಗಿತ್ತು. ಆದರೆ ಕೋವಿಡ್ ಭೀತಿಯ ಕಾರಣದಿಂದ ಇಂಡಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯನ್ನು ಏಪ್ರಿಲ್‌ನಲ್ಲಿಯೇ ಮುಂದೂಡಲಾಗಿತ್ತು. ಇದೀಗ ಆಯೋಜಕರು ಟೂರ್ನಿಯನ್ನು ರದ್ದುಮಾಡುವ ತೀರ್ಮಾನ ಕೈಗೊಂಡಿದ್ದಾರೆ.
ಟೋಕಿಯೋ ಒಲಿಂಪಿಕ್ಸ್‌ನಿಂದ ಅಧಿಕೃತವಾಗಿ ಹೊರಬಿದ್ದ ಸೈನಾ, ಶ್ರೀಕಾಂತ್
ಇನ್ನು ಆಗಸ್ಟ್ 24ರಿಂದ 29ರವರೆಗೆ ನಡೆಯಬೇಕಿದ್ದ 1,00,000 ಯುಎಸ್ ಡಾಲರ್ ಬಹುಮಾನ ಮೊತ್ತದ ಹೈದರಾಬಾದ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯನ್ನು ಕೋವಿಡ್ ಬಲಿ ಪಡೆದಿದೆ. ಆದರೆ ಅಕ್ಟೋಬರ್ 12ರಿಂದ 17ರವರೆಗೆ ನಡೆಯಬೇಕಿರುವ ಸಯ್ಯದ್ ಮೋದಿ ಇಂಟರ್‌ನ್ಯಾಷನಲ್ ಸೂಪರ್ 300 ಟೂರ್ನಿಯು ನಡೆಸಲು ಆಯೋಜಕರು ಮುಂದಾಗಿದ್ದಾರೆ ಎಂದು ವರದಿಯಾಗಿದೆ.