
ಅರಿಂಜ್(ಜು.31): ಏನ್ರೀ ಮನೆ ಕೆಳಗೊಂದ್ ಬೇಸಮೆಂಟ್ ಇದ್ರೆ ಚೆಂದಾ ಅಲ್ವಾ..? ಇದಿಷ್ಟೇ ಈಕೆ ತನ್ನ ಪತಿಗೆ ಕೇಳಿದ್ದು. ಪತ್ನಿಯವಾಣಿಯನ್ನೇ ದೈವವಾಣಿ ಎಂದು ಬಗೆದು ಈ ಭೂಪ ಆಕೆಗಾಗಿ ಮನೆ ಕೆಳಗೊಂದು ಸ್ವರ್ಗದ ದಾರಿಯನ್ನೇ ಕಟ್ಟಿಸಿಕೊಟ್ಟಿದ್ದಾನೆ..
ಹೌದು, ಇದು ದೂರದ ಅರ್ಮೆನಿಯಾ ದೇಶದ ಪಾಗಲ್ ಪ್ರೇಮಿಯೋರ್ವನ ಕತೆ. ಮನೆ ಕೆಳಗೆ ಆಲೂಗಡ್ಡೆ ಸಂಗ್ರಹಿಸಲು ಬೇಸಮೆಂಟ್ ಕಟ್ಟಲು ಮನವಿ ಮಾಡಿದ ಪತ್ನಿಗಾಗಿ, ಪತಿಯೋರ್ವ ಶೃಂಗಾರಭರಿತ ಗುಹೆಯೊಂದನ್ನೇ ಕಟ್ಟಿದ ಅಪರೂಪದ ಪ್ರೇಮ ಕಹಾನಿ.
ಲಿವೊನ್ ಅರಾಕ್ಲಿಯನ್ ಅರ್ಮೆನಿಯಾದ ಶಾಹಜಹಾನ್ ಇದ್ದಂತೆ. ಈತನ ಪತ್ನಿ ತೋಶ್ಯ ಘರಿಬಿಯಾನ್ ಮೆನೆ ಕೆಳಗೆ ಆಲೂಗಡ್ಡೆ ಮತ್ತಿತರ ತರಕಾರಿಗಳನ್ನು ಸಂಗ್ರಹಿಸಲು ಬೇಸಮೆಂಟ್ ಕಟ್ಟಿಸಲು ಸಲಹೆ ನೀಡಿದ್ದಳು. ಪತ್ನಿಯ ಬಯಕೆಯಂತೆ ತಾನೇ ಖುದ್ದಾಗಿ ಬೇಸಮೆಂಟ್ ನಿರ್ಮಿಸಲು ಮುಂದಾದ ಲಿವೊನ್ , ಸತತ 23 ವರ್ಷಗಳ ನಿರಂತರ ಶ್ರಮದ ಫಲವಾಗಿ ಮನೆ ಕೆಳಗೆ ಸುಂದರ ಗುಹಾ ಜಗತ್ತನ್ನೇ ನಿರ್ಮಿಸಿದ್ದಾನೆ.
1985 ರಲ್ಲಿ ಬೇಸಮೆಂಟ್ ಕಾಮಗಾರಿ ಪ್ರಾರಂಭಿಸಿದ ಲಿವೊನ್, ಸತತ 23 ವರ್ಷಗಳ ಬಳಿಕ ಪತ್ನಿ ಮೇಲಿನ ಪ್ರೀತಿಯ ಧ್ಯೋತಕವಾಗಿ ಭವ್ಯ ಗುಹೆಯನ್ನೇ ಕಟ್ಟಿದ್ದಾನೆ. ಸತತ ಎರಡು ದಶಕಗಳ ಬಳಿಕ 280 ಚದರ ಮೀಟರ್ ವಿಸ್ತೀರ್ಣದ 21 ಮೀಟರ್ ಆಳದ ಈ ಗುಹೆಯನ್ನು ಲಿವೊನ್ ಕೇವಲ ಕೈಯಿಂದ ತಯಾರಿಸಿದ ಉಪಕರಣಗಳಿಂದಲೇ ನಿರ್ಮಿಸಿದ್ದಾನೆ.
ದಿನದ 18 ಗಂಟೆ ಸತತವಾಗಿ ಕೆಲಸ ಮಾಡುತ್ತಿದ್ದ ಲಿವೊನ್, ಈ ಗುಹೆ ನಿರ್ಮಿಸುವುದನ್ನೇ ಕಾಯಕ ಮಾಡಿಕೊಂಡಿದ್ದ. ಲಿವೋನ್ ಗೆ ಗುಹೆಯ ಮೋಹ ಅದೆಷ್ಟಿತ್ತೆಂದರೆ ಕೊನೆಯ ಗುಹೆಯ ಪ್ರವೇಶ ದ್ವಾರ ನಿರ್ಮಿಸಿದ ಬಳಿಕವೇ ಆತ ತೀರಿಕೊಂಡಿದ್ದು.
2008 ರಲ್ಲಿ ಲಿವೋನ್ ಹೃದಯಾಘಾತದಿಂದ ನಿಧನ ಹೊಂದಿದ್ದ. ಅಂದಿನಿಂದ ಲಿವೋನ್ ಮನೆ ಕೆಳಗಿನ ಈ ಸುಂದರ ಗುಹೆ ಅರ್ಮೆನಿಯಾ ದೇಶದ ಪ್ರಸಿದ್ಧ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ದೇಶ ವಿದೇಶಗಳಿಂದ ಇಲ್ಲಿಗೆ ಸಾವಿರಾರು ಪ್ರವಾಸಿಗರು ಪ್ರತಿ ವರ್ಷವೂ ಭೇಟಿ ನೀಡುತ್ತಾರೆ. ಇದೇ ಗುಹೆಯಲ್ಲಿ ಲಿವೋನ್ ಸಮಾಧಿ ಕೂಡ ಇದೆ.
ಪತ್ನಿ ಮೇಲಿನ ಪ್ರೀತಿಗಾಗಿ ಇಡೀ ವಿಶ್ವವೇ ತಲೆದೂಗುವಂತ ಸುಂದರ ಕಲಾಕೃತಿಯೊಂದನ್ನು ರಚಿಸಿದ ಲಿವೋನ್, ಪತ್ನಿಗಾಗಿ ಇಡೀ ಬೆಟ್ಟವನ್ನೇ ಕಡಿದು ರಸ್ತೆ ಮಾರ್ಗನಿರ್ಮಿಸಿದ ಭಾರತದ ಮಾಂಝಿ ಮುಂತಾದವರು, ಜಗತ್ತಿಗೆ ಪ್ರೀತಿಯ ಸಂದೇಶ ಮತ್ತು ಅದರ ತಾಕತ್ತನ್ನು ಸಾರಿ ಹೋದ ಮಹನೀಯರೇ ಸರಿ.
ಫೋಟೋ ಕೃಪೆ-AFP
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.