ಆ. 7 ಕ್ಕೆ ಬಸ್, ಆಟೋ, ಕ್ಯಾಬ್‌ಗಳು ಬಂದ್?

By Web DeskFirst Published Jul 31, 2018, 11:54 AM IST
Highlights

-ಕೇಂದ್ರ ಸರ್ಕಾರದ ವಿರುದ್ಧ ರಾಷ್ಟ್ರವ್ಯಾಪಿ ಮುಷ್ಕರ

-ಮೋಟಾರು ವಾಹನ ತಿದ್ದುಪಡಿ ಮಸೂದೆಯನ್ನು ಹಿಂಪಡೆಯಬೇಕು. ಮಸೂದೆ ಜಾರಿಯಿಂದ ಅಸಂಘಟಿತ ಸಾರಿಗೆ ಕಾರ್ಮಿಕರು ಬೀದಿಗೆ ಬರಲಿದ್ದಾರೆ.

ಬೆಂಗಳೂರು (ಜು. 31): ಮೋಟಾರು ವಾಹನ ತಿದ್ದುಪಡಿ ಮಸೂದೆ -2017 ನ್ನು ಕೇಂದ್ರ ಸರ್ಕಾರ ಕೈಬಿಡಬೇಕೆಂದು ಒತ್ತಾಯಿಸಿ ಆ.7 ರಂದು ಕರೆ ನೀಡಿರುವ ರಾಷ್ಟ್ರವ್ಯಾಪಿ ಸಾರಿಗೆ ಮುಷ್ಕರಕ್ಕೆ ರಾಜ್ಯರಸ್ತೆ ಸಾರಿಗೆ ನಿಗಮಗಳು ಸೇರಿದಂತೆ ಆಟೋ, ಕ್ಯಾಬ್ ಹಾಗೂ ಖಾಸಗಿ ವಾಹನ ಮಾಲೀಕರು ಬೆಂಬಲಿಸಿದ್ದಾರೆ ಎಂದು ಸಿಐಟಿಯು ರಾಜ್ಯ  ಉಪಾಧ್ಯಕ್ಷ ಕೆ.ಪ್ರಕಾಶ್ ತಿಳಿಸಿದರು.

ಈಗಾಗಲೇ ಲೋಕಸಭೆಯಲ್ಲಿ ಅನುಮೋದಿಸಿರುವ ಮೋಟಾರು ವಾಹನ ತಿದ್ದುಪಡಿ ಮಸೂದೆಯನ್ನು ಹಿಂಪಡೆಯಬೇಕು. ಮಸೂದೆ ಜಾರಿಯಿಂದ ಅಸಂಘಟಿತ ಸಾರಿಗೆ ಕಾರ್ಮಿಕರು ಬೀದಿಗೆ ಬರಲಿದ್ದಾರೆ. ಹಾಗಾಗಿ, ರಾಷ್ಟ್ರವ್ಯಾಪ್ತಿಗೆ ಸಾರಿಗೆ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ತಿಳಿಸಿದರು. ದೊಡ್ಡ ಕಂಪನಿಗಳಿಗೆ ಅನುಕೂಲ ಮಾಡುವುದಕ್ಕೆ  ಕೇಂದ್ರ ಸರ್ಕಾರ ಮುಂದಾಗಿದೆ.

ಮಸೂದೆ ಜಾರಿಯಿಂದ ಇಡೀ ಸಾರಿಗೆ ವ್ಯವಸ್ಥೆ ಖಾಸಗಿ ಕಂಪನಿಗಳ ಕಪಿಮುಷ್ಟಿಗೆ ಹೋಗಲಿದೆ. ರಾಜ್ಯ ಮತ್ತು ರಾಷ್ಟ್ರದ ಸಮವರ್ತಿ ಪಟ್ಟಿಯಲ್ಲಿರುವ ಸಾರಿಗೆ ವ್ಯವಸ್ಥೆ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಹೋಗಲಿದ್ದು, ಸಾರಿಗೆ ವ್ಯವಸ್ಥೆ ಮೇಲಿನ ರಾಜ್ಯಸರ್ಕಾರದ ಅಧಿಕಾರ ಮೊಟಕುಗೊಳ್ಳಲಿದೆ. ರಾಜ್ಯದ ಆರ್‌ಟಿಓ ಕಚೇರಿಗಳಿಗೆ ಬೀಗ ಹಾಕಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಖಾಸಗಿ ಸಂಸ್ಥೆಗಳ  ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ಮತ್ತೆ  ಮಸೂದೆ ಅಂಗೀಕರಿಸುವುದಕ್ಕೆ ಮುಂದಾಗಿದೆ. ಯಾವುದೇ ಕಾರಣಕ್ಕೂ ಮಸೂದೆ ಅಂಗೀಕರಣಕ್ಕೆ ಅವಕಾಶ ನೀಡಬಾರದು ಎಂದರು. 

click me!