ಅರ್ಧ ಮಳೆಗಾಲ ಕಳೆದರೂ ರಾಜ್ಯದಲ್ಲಿ ನೀರಿಗೆ ಬರ!

By Shrilakshmi ShriFirst Published Jul 18, 2019, 8:44 AM IST
Highlights

ಮಳೆಗಾಲ ಅರ್ಧ ಕಳೆದರೂ ರಾಜ್ಯದಲ್ಲಿ ನೀರಿನ ಬರ | ಶೇ.70ರಷ್ಟುಕೆರೆಗಳಲ್ಲಿ ನೀರಿಲ್ಲ, 1323 ಗ್ರಾಮಗಳಿಗೆ ನಿತ್ಯ ಟ್ಯಾಂಕರ್‌ ನೀರು |  25 ಜಿಲ್ಲೆಗಳಲ್ಲಿ ಪರಿಸ್ಥಿತಿ ಗಂಭೀರ

ಬೆಂಗಳೂರು (ಜು. 18): ಮುಂಗಾರು ಆರಂಭವಾಗಿ ಒಂದೂವರೆ ತಿಂಗಳು ಕಳೆದರೂ ರಾಜ್ಯದ ಶೇ.70ರಷ್ಟುಕೆರೆಗಳಿಗೆ ಹನಿ ನೀರು ಬಂದಿಲ್ಲ. ಇನ್ನು ರಾಜ್ಯದ 25 ಜಿಲ್ಲೆಗಳ 1,323 ಗ್ರಾಮಗಳಿಗೆ ನಿತ್ಯ 2,237 ಟ್ಯಾಂಕರ್‌ಗಳಿಂದ ನೀರು ಪೂರೈಕೆ. ಇದು ರಾಜ್ಯಅನುಭವಿಸುತ್ತಿರುವ ಜಲಕ್ಷಾಮ ಚಿತ್ರಣ...!

ಮುಂಗಾರು ಮಳೆ ಚುರುಕು : ಭಾರೀ ಪ್ರಮಾಣದಲ್ಲಿ ಮಳೆ

ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದು ಸಾಮಾನ್ಯ. ಆದರೆ, ಮುಂಗಾರು ಶುರುವಾಗಿ 45ದಿನ ಪೂರ್ಣಗೊಂಡರೂ ರಾಜ್ಯದ ಒಟ್ಟು 36 ಸಾವಿರ ಕೆರೆಗಳ ಪೈಕಿ ಶೇ.70 ರಷ್ಟುಕೆರೆಗಳು ಅಂದರೆ ಸುಮಾರು 26 ಸಾವಿರ ಕೆರೆಗಳಿಗೆ ಹನಿ ನೀರು ಬಂದಿಲ್ಲ. ಇದರಿಂದ ಮಳೆಗಾಲದಲ್ಲೂ ಕುಡಿಯುವ ನೀರಿಗೆ ಹಾಹಾಕಾರ ಹೆಚ್ಚಾಗಿದೆ.

ಕರಾವಳಿ ಭಾಗದ ಜಿಲ್ಲೆಗಳಾದ ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ, ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೊಡಗು ಮತ್ತು ಚಾಮರಾಜನಗರ ಪರಿಸ್ಥಿತಿ ಸ್ವಲ್ಪ ಸಮಾಧಾನಕರವಾಗಿದೆ. ಉಳಿದಂತೆ ರಾಜ್ಯದ ಎಲ್ಲ 25 ಜಿಲ್ಲೆಗಳ 1,323 ಗ್ರಾಮಗಳಿಗೆ ದಿನ ಬೆಳಗಾದರೆ 2,237 ವಾಟರ್‌ ಟ್ಯಾಂಕರ್‌ಗಳ ಮೂಲಕ 5,748 ಟ್ಯಾಂಕ್‌ ನೀರು ಪೂರೈಸಬೇಕಾದ ಪರಿಸ್ಥಿತಿ ಇದೆ. ಇನ್ನು 1,792 ಗ್ರಾಮಗಳಿಗೆ ನೀರು ಸರಬರಾಜು ಮಾಡಲು ಆಯಾ ಜಿಲ್ಲಾಡಳಿತವು 2,302 ಖಾಸಗಿ ಕೊಳವೆ ಬಾವಿಗಳ ಮೊರೆ ಹೋಗಿದೆ.

ಅಂತರ್ಜಲ ವೃದ್ಧಿಯಿಲ್ಲ:

ಪ್ರಸಕ್ತ ಮುಂಗಾರು ಪೂರ್ವ ಅವಧಿಯಲ್ಲಿ ಶೇ.43 ರಷ್ಟು, ಮುಂಗಾರು ಅವಧಿಯಲ್ಲಿ ಈವರೆಗೆ ಶೇ.20ರಷ್ಟುರಾಜ್ಯದಲ್ಲಿ ಮಳೆ ಕೊರತೆ ಉಂಟಾಗಿರುವುದರಿಂದ ಅಂತರ್ಜಲ ವೃದ್ಧಿ ಆಗಿಲ್ಲ. ಅಂತರ್ಜಲ ವೃದ್ಧಿಯಾಗಬೇಕಾದರೆ ಸುಮಾರು ಎರಡರಿಂದ ಮೂರು ತಿಂಗಳು ಸತತ ಮಳೆಯಾಗಬೇಕು. ಈವರೆಗೂ ಅಂತಹ ಮಳೆ ರಾಜ್ಯದಲ್ಲಿ ಆಗಿಲ್ಲ. ಹಾಗಾಗಿ, ಟ್ಯಾಂಕರ್‌ ಹಾಗೂ ಖಾಸಗಿ ಕೊಳವೆ ಬಾವಿಗಳಿಗೆ ನೀರು ಒದಗಿಸಬೇಕಾಗಿದೆ ಎಂದು ಕರ್ನಾಟಕ ರಾಜ್ಯನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ್‌ ರೆಡ್ಡಿ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಭೀಕರ ಜಲಕ್ಷಾಮ ಕಾದಿದೆ:

ಕಳೆದ ವರ್ಷದ ಮುಂಗಾರಿಗೆ ಹೋಲಿಕೆ ಮಾಡಿದರೆ, ಪ್ರಸಕ್ತ ವರ್ಷ ಈ ಅವಧಿಗೆ ಶೇ.37ರಷ್ಟುಮಳೆ ಕೊರತೆ ಉಂಟಾಗಿದೆ. ಜಲಾಶಯಗಳಿಗೆ ಹರಿದು ಬರುವ ನೀರಿನ ಪ್ರಮಾಣ ತೀರಾ ಕಡಿಮೆ ಆಗಿದೆ. ಕಳೆದ ಒಂದು ತಿಂಗಳಿಗೆ ಸುಮಾರು 18 ರಿಂದ 20 ಟಿಎಂಸಿ ನೀರು ಮಾತ್ರ ರಾಜ್ಯದ ಜಲಾಶಯಗಳಿಗೆ ಬಂದಿದೆ.

2018 ರ ಜುಲೈ ಮಧ್ಯಂತರ ಅವಧಿಗೆ ಸುಮಾರು 150 ಟಿಎಂಸಿ ನೀರು ಜಲಾಶಯಗಳಿಗೆ ಹರಿದು ಬಂದಿತ್ತು. ಇದೇ ರೀತಿ ರಾಜ್ಯದಲ್ಲಿ ಮಳೆ ಕೊರತೆ ಮುಂದುವರೆದರೆ, ಕುಡಿಯುವ ನೀರಿನ ಸಮಸ್ಯೆಎದುರಿಸುತ್ತಿರುವ ಗ್ರಾಮಗಳ ಸಂಖ್ಯೆ ಇನ್ನಷ್ಟುಹೆಚ್ಚಾಗಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ತೆರೆದ ಕುಡಿಯುವ ನೀರಿನ ಮೂಲಗಳು ಸ್ವಲ್ಪ ಪ್ರಮಾಣದಲ್ಲಿ ನೀರಿನ ಲಭ್ಯತೆ ಕಾಣುತ್ತಿದೆ. ಆದರೆ, ಅತಿ ಹೆಚ್ಚು ಅಂತರ್ಜಲದ ಮೇಲೆ ನಾನು ಅವಲಂಬಿತರಾಗಿದ್ದೇವೆ. ಮಳೆ ಕೊರತೆ ಹಿನ್ನೆಲೆಯಲ್ಲಿ ಅಂತರ್ಜಲ ಕುಸಿಯುತ್ತಿದೆ. ವೃದ್ಧಿ ಆಗುವ ಲಕ್ಷಣ ಕಾಣುತ್ತಿಲ್ಲ.

- ಶ್ರೀನಿವಾಸ್‌ ರೆಡ್ಡಿ, ನಿರ್ದೇಶಕ, ಕೆಎಸ್‌ಎನ್‌ಡಿಎಂಸಿ

ನೀರಿನ ಸಮಸ್ಯೆ ಇರುವ ಪ್ರಮುಖ ಜಿಲ್ಲೆ ವಿವರ

ಜಿಲ್ಲೆ ಗ್ರಾಮಸಂಖ್ಯೆ ಟ್ಯಾಂಕರ್‌ ಸಂಖ್ಯೆ ಬಾಡಿಗೆ ಕೊಳವೆ ಸಂಖ್ಯೆ

ಬೀದರ್‌ 133 134 312

ಚಿಕ್ಕಬಳ್ಳಾಪುರ 120 329 217

ಚಿತ್ರದುರ್ಗ 106 163 80

ಕಲಬುರಗಿ 117 197 121

ತುಮಕೂರು 106 261 191

* 1,323 ಗ್ರಾಮಗಳಿಗೆ ಟ್ಯಾಂಕರ್‌ ನೀರು

* 2,237 ಟ್ಯಾಂಕರ್‌ ಮೂಲಕ ನೀರು

* ನಿತ್ಯ 5,748 ಟ್ಯಾಂಕ್‌ ನೀರು ಪೂರೈಕೆ

* 2,302 ಖಾಸಗಿ ಕೊಳವೆ ಬಾವಿ ಸರ್ಕಾರದ ವಶಕ್ಕೆ

* ಐದು ಜಿಲ್ಲೆ ಹೊರತು ಪಡಿಸಿ 25 ಜಿಲ್ಲೆಯಲ್ಲಿ ಜಲಕ್ಷಾಮ

ಮುಂಗಾರು ಮಳೆ ಕೊರತೆ ವಿವರ

ಪ್ರದೇಶ 2018ರ ಜು.16 2019ರ ಜು.16

ದಕ್ಷಿಣ ಒಳನಾಡು 19 -16

ಉತ್ತರ ಒಳನಾಡು -9 -19

ಕರಾವಳಿ 16 -20

ಮಲೆನಾಡು 39 -32

ಒಟ್ಟು 17 -20 

- ವಿಶ್ವನಾಥ ಮಲೇಬೆನ್ನೂರು 

click me!