
ನವದೆಹಲಿ(ಮೇ.11): ನೀವು ಭಿನ್ನ ವಿಭಿನ್ನವಾಗಿ ನಡೆದ ಮದುವೆಗಳನ್ನು ನೋಡಿರಬಹುದು, ಇಲ್ಲವೇ ಆ ಕುರಿತಾಗಿ ಕೇಳಿರಬಹುದು. ಆದರೆ ರಾಜಸ್ತಾನದಲ್ಲಿ ನಡೆದ ಮದುವೆ ಇವೆಲ್ಲಕ್ಕಿಂತಲೂ ತೀರಾ ಭಿನ್ನವಾಗಿದೆ. ರಾಜಸ್ತಾನದ ಸೆಂಟ್ರಲ್ ಜೈಲಿನಲ್ಲಿದ್ದ ಮಹಿಳಾ ಕೈದಿಯೊಬ್ಬಳು ಜೈಲಿನಲ್ಲಿದ್ದುಕೊಂಡೇ ಮದುವೆಯಾಗಿದ್ದಾರೆ. ಈ ಕೈದಿಯ ಮದುವೆಗಾಗಿ ಜೈಲಿನಲ್ಲಿ ಸಕಲ ರೀತಿಯ ತಯಾರಿ ನಡೆಸಿದ್ದು, ಜೈಲಿಗೆ ದಿಬ್ಬಣದೊಂದಿಗೆ ಆಮಿಸಿದ ವರ, ವಧುವಿನ ಕತ್ತಿಗೆ ತಾಳಿ ಕಟ್ಟಿದ್ದಾನೆ.
ಪ್ರಸಾರವಾದ ವರದಿಗಳನ್ವಯ ಜೈಲಿನಲ್ಲಿದ್ದ ಮಹಿಳಾ ಕೈದಿ, 22 ವರ್ಷದ ದೇವಕಿಯ ವಿವಾಹ 22 ವರ್ಷದ ಯುವಕನೊಂದಿಗೆ ನಿಶ್ಚಯವಾಗಿತ್ತು. ಆದರೆ ಈಕೆ ವರದಕ್ಷಿಣೆಗಾಗಿ ತನ್ನ ಅತ್ತಿಗೆಯನ್ನು ಕೊಲೆಗೈದ ಆರೋಪದಡಿಯಲ್ಲಿ ವಿಚಾರಣಾಧೀನ ಕೈದಿಯಾಗಿ ಜೈಲು ಸೇರಿದ್ದರು. ಮದುವೆ ಇದ್ದುದ್ದರಿಂದ ಜಾಮೀನಿಗಾಗಿ ಈಕೆ ಕೋರ್ಟ್'ನಲ್ಲಿ ಅರ್ಜಿಯನ್ನೂ ಸಲ್ಲಿಸಿದ್ದರು. ಅರ್ಜಿ ಪರಿಶೀಲಿಸಿದ ಕೋರ್ಟ್ ಈಕೆಗೆ ಜೈಲಿನಿಂದ ಹೊರ ಹೋಗಲು ಅನುಮತಿ ನೀಡಿರಲಿಲ್ಲ ಆದರೆ ಜೈಲಿನಲ್ಲೇ ಮದುವೆಯಾಗಲು ಪರವಾನಿಗೆ ನೀಡಿತ್ತು.
ಕೋರ್ಟ್'ನಿಂದ ಪರವಾನಿಗೆ ಸಿಗುತ್ತಿದ್ದಂತೆಯೇ ವರ ಮಹೇಶ್ ಬಾರನ್ 10 ಮಂದಿಯ ದಿಬ್ಬಣದೊಂದಿಗೆ ಸೆಂಟ್ರಲ್ ಜೈಲಿಗೆ ಆಗಮಿಸಿ ದೇವಕಿಯನ್ನು ಮದುವೆಯಾಗಿದ್ದಾನೆ. ಇವರಿಬ್ಬರ ಮದುವೆಯ ವಿಚಾರವಾಗಿ ಮಾತನಾಡಿದ ಜೈಲರ್ ಯೋಗೇಶ್ ಕುಮಾರ್ 'ಪಾರಂಪರಿಕ ವಿಧಾನದಂತೆ ವರ ಮಹೇಶ್ ದಿಬ್ಬಣದೊಂದಿಗೆ ಜೈಲಿನ ಪ್ರಮುಖ ದ್ವಾರದಬಳಿ ಬಂದಿದ್ದ. ಜೈಲಿನ ಸಿಬ್ಬಂದಿ ಇವರನ್ನು ಸ್ವಾಗತಿಸಿ ಜೈಲಿನ ಒಳಗೆ ಕರೆದೊಯ್ದರು' ಎಂದಿದ್ದಾರೆ.
ಜೈಲಿನ ಿತರ ಮಹಿಳಾ ಕೈದಿಗಳು ಮದುಮಗಳು ದೇವಕಿಗೆ ಸಿಂಗಾರ ಮಾಡಿದ್ದಲ್ಲದೆ, ದೇವಕಿಯ ಪರವಾಗಿ ಇತರ ಸಂಪ್ರದಾಯಗಳನ್ನೂ ನೆರವೇರಿಸಿದ್ದಾರೆ. ಮದುವೆ ಬಳಿಕ ದೇವಕಿಯನ್ನು ಜೈಲಿನ ಕೋಣೆಗೆ ಕಳುಹಿಸಲಾಗಿದ್ದು, ವರ ಮನೆಗೆ ಮರಳಿದ್ದಾನೆ. ಇನ್ನು ದೇವಕಿಯ ಜಾಮೀನಿಗಾಗಿ ತಾನು ಸಂಪೂರ್ಣ ಪ್ರಯತ್ನ ಮಾಡುತ್ತೇನೆ ಎಂದು ವರ ಮಹೇಶ್ ತಿಳಿಸಿದ್ದಾನೆ.
ಕೃಪೆ: NDTv
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.