
ಲಂಡನ್(ಮೇ 23): ಮ್ಯಾಂಚೆಸ್ಟರ್ ಅರೇನಾದಲ್ಲಿ ಸಂಭವಿಸಿದ ಭೀಕರ ಬಾಂಬ್ ಸ್ಫೋಟಕ್ಕೆ 19ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಈ ಘಟನೆ ನಡೆಯುವ 4 ಗಂಟೆ ಮೊದಲೇ ವ್ಯಕ್ತಿಯೊಬ್ಬ ಟ್ವಿಟ್ಟರ್'ನಲ್ಲಿ ಎಚ್ಚರಿಕೆಯ ಸಂದೇಶ ನೀಡಿದ್ದು ಬೆಳಕಿಗೆ ಬಂದಿದೆ. @owys663 ಎಂಬ ಟ್ವಿಟ್ಟರ್ ಅಕೌಂಟ್'ನಿಂದ ದಾಳಿಯ ಮುನ್ಸೂಚನೆ ನೀಡುವ ಟ್ವೀಟ್ ಹೊರಬಿದ್ದಿತ್ತು. " ARE YOU FORGET OUR THREAT? THIS IS THE JUST TERROR (sic)" (ನೀವು ನಮ್ಮ ಬೆದರಿಕೆಯನ್ನು ಮರೆತಿದ್ದೀರಾ? ಇದು ಕೇವಲ ಭಯದ ಸ್ಯಾಂಪಲ್) ಎಂದು ಆ ಟ್ವೀಟ್'ನಲ್ಲಿ ತಿಳಿಸಲಾಗಿತ್ತು. ಇಸ್ಲಾಮಿಕ್ ಸ್ಟೇಟ್, ಮ್ಯಾಂಚೆಸ್ಟರ್ ಅರೇನಾ, ಯುಕೆ ಮತ್ತು ಬ್ರಿಟಿಷ್ ಎಂಬ ಹ್ಯಾಷ್'ಟ್ಯಾಗ್'ಗಳನ್ನು ಟ್ವೀಟ್ ವೇಳೆ ಬಳಸಲಾಗಿತ್ತು.
ಇದೀಗ ಈ ಟ್ವಿಟ್ಟರ್ ಅಕೌಂಟು ಡಿಲೀಟ್ ಆಗಿದೆ. ಆದರೆ, ಆನ್'ಲೈನ್ ಸರ್ಚ್'ನಲ್ಲಿ ಆತನ ಕೆಲ ಟ್ವೀಟ್'ಗಳು ಲಭ್ಯವಿವೆ. ಆನ್'ಲೈನ್'ನಲ್ಲಿ ಆತನ ಪತ್ತೆಗೆ ಅವಿರತ ಪ್ರಯತ್ನ ಸಾಗುತ್ತಿವೆ. ಕೆಲವರು ಆತನ ಹೆಸರನ್ನು ಮೊಹಮ್ಮದ್ ಎಂದು ಗುರುತಿಸಿದ್ದಾರೆ. ಈತನ ಟ್ವಿಟ್ಟರ್ ಅಕೌಂಟ್'ಗೆ ಲಿಂಕ್ ಆಗಿರುವ ಇನ್ಸ್'ಟಾಗ್ರಾಂ ಅಕೌಂಟ್ ಸೌದಿ ಅರೇಬಿಯಾ ದೇಶದ ಮೂಲದ್ದೆಂದು ಕೆಲವರು ಮಾಹಿತಿ ನೀಡಿದ್ದಾರೆ.
ಅಕೌಂಟ್ ಡಿಲೀಟ್ ಆಗುವ ಮುನ್ನ ಇದ್ದ ಪ್ರೊಫೈಲ್ ಫೋಟೋ ಅಬು ಹಮ್ಜಾ ಅಲ್-ಅಮ್ರಿಕಿ ಎಂಬಾತನದ್ದಾಗಿದೆ. ಅಮೆರಿಕ ಮೂಲದ ಅಬು ಹಮ್ಜಾ ಐಸಿಸ್ ಉಗ್ರನಾಗಿದ್ದು, ಇಸ್ಲಾಂ ಧರ್ಮದಲ್ಲಿ ನಂಬಿಕೆ ಇಲ್ಲದವರನ್ನು ಹತ್ಯೆ ಮಾಡಲು ಕರೆಕೊಟ್ಟ ವಿಡಿಯೋವೊಂದು ಕೆಲ ದಿನಗಳ ಹಿಂದಷ್ಟೇ ವೈರಲ್ ಆಗಿತ್ತು. ಡೈಲಿಮೇಲ್'ನಲ್ಲಿ ಈತನ ಕುರಿತು ವರದಿಯೊಂದೂ ಪ್ರಕಟವಾಗಿತ್ತು. @OWYS663 ಅಕೌಂಟ್'ನಲ್ಲಿದ್ದ ಪ್ರೊಫೈಲ್ ಫೋಟೋ ನಿಜವಾಗಿಯೂ ಈತನದ್ದೇಯಾ? ಅಥವಾ ಪ್ರಾತಿನಿಧಿಕವಾಗಿ ಫೋಟೋ ಹಾಕಲಾಗಿತ್ತಾ? ಎಂಬುದು ಗೊತ್ತಾಗಬೇಕಷ್ಟೇ.
ಇದೇ ವೇಳೆ, ಇಸ್ಲಾಮಿಕ್ ಸ್ಟೇಟ್ ಸಂಘಟನೆಯನ್ನು ಬೆಂಬಲಿಸುವ ಟ್ವಿಟ್ಟರ್ ಅಕೌಂಟ್'ಗಳಲ್ಲಿ ಬಾಂಬ್ ಸ್ಫೋಟಕ್ಕೆ ಖುಷಿ ವ್ಯಕ್ತಪಡಿಸುವ ಸಂದೇಶಗಳು ಟ್ವೀಟ್ ಆಗುತ್ತಿವೆ. ಬೇರೆ ಕಡೆಯೂ ಇಂಥ ದಾಳಿಗಳು ನಡೆಯಬೇಕೆಂದು ಈ ಟ್ವಿಟ್ಟರ್ ಅಕೌಂಟ್'ಗಳಿಂದ ಕರೆ ಹೋಗುತ್ತಿವೆ.
ಭಾರತೀಯ ಕಾಲಮಾನದಂತೆ ಮಂಗಳವಾರ ಬೆಳಗ್ಗೆ 3ಗಂಟೆ ಸುಮಾರಿನಲ್ಲಿ ಆತ್ಮಹತ್ಯಾ ದಾಳಿಕೋರನೊಬ್ಬ ಮ್ಯಾಂಚೆಸ್ಟರ್ ಅರೇನಾದಲ್ಲಿ ಬಾಂಬ್ ದಾಳಿ ನಡೆಸಿದ್ದಾನೆ. 19ಕ್ಕೂ ಹೆಚ್ಚು ಜನರು ಬಲಿಯಾಗಿ, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬ್ರಿಟನ್ ಪ್ರಧಾನಿ ಥೆರೇಸಾ ಮೇ ಈ ಘಟನೆಯನ್ನು ಭಯೋತ್ಪಾದಕ ಕೃತ್ಯ ಎಂದು ಘೋಷಿಸಿದ್ದಾರೆ.
ಗುರುದ್ವಾರಗಳಿಂದ ಶ್ಲಾಘನೀಯ ಸೇವೆ:
ಬಾಂಬ್ ಸ್ಫೋಟದಿಂದ ಸಂತ್ರಸ್ತಗೊಂಡ ಜನರಿಗೆ ಮ್ಯಾಂಚೆಸ್ಟರ್ ನಗರದಲ್ಲಿರುವ ಗುರುದ್ವಾರಗಳು ಆಶ್ರಯ ನೀಡಿ ಶುಶ್ರೂಷೆ ಒದಗಿಸುತ್ತಿವೆ. ಸಿಖ್ ಧರ್ಮದ ಮಂದಿರಗಳಾದ ಗುರುದ್ವಾರಗಳ ಈ ಸೇವೆಗೆ ಬ್ರಿಟನ್'ನಾದ್ಯಂತ ಪ್ರಶಂಸೆಗಳು ವ್ಯಕ್ತವಾಗುತ್ತಿವೆ.
ಗಾಯಕಿ ದಿಗ್ಭ್ರಮೆ:
ಬಾಂಬ್ ದಾಳಿ ನಡೆದದ್ದು ಅಮೆರಿಕ ಪಾಪ್ ಗಾಯಕಿ ಏರಿಯಾನಾ ಗ್ರಾಂಡ್ ಅವರ ಸಂಗೀತ ಕಾರ್ಯಕ್ರಮದ ವೇಳೆಯೇ. ತನ್ನ ಕಣ್ಣೆದುರೇ, ತನ್ನ ಗಾಯನದ ಮಧ್ಯೆಯೇ ಈ ಘಟನೆ ನಡೆದದ್ದು ಈ ಗಾಯಕಿಗೆ ಶಾಕ್ ಕೊಟ್ಟಿದೆ. "ನನಗೆ ಪದಗಳೇ ಬರುತ್ತಿಲ್ಲ" ಎಂದು ಈ ಯುವ ಗಾಯಕಿ ಟ್ವೀಟ್ ಮಾಡಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.