ಬೊಕ್ಕಸದಲ್ಲಿ ಬಿದ್ದಿದೆ 1000 ಕೋಟಿ ಶಾಸಕರ ನಿಧಿ!

By ಶಿವಕುಮಾರ್ ಮೆಣಸಿನಕಾಯಿFirst Published May 23, 2017, 11:39 AM IST
Highlights

ಚುನಾವಣೆಗೆ ಮುನ್ನ ಖರ್ಚು ಮಾಡಲು ಕಾದಿಟ್ಟುಕೊಂಡ ಶಾಸಕರು | ಗದಗದಲ್ಲಿ ಕನಿಷ್ಠ, ತುಮಕೂರಿನಲ್ಲಿ ಗರಿಷ್ಠ ಬಳಕೆ

ಬೆಂಗಳೂರು (ಮೇ.23): ನಮ್ಮ ಕ್ಷೇತ್ರದ ಶಾಸಕರು ಯಾವ ಕೆಲಸ ಮಾಡುತ್ತಿದ್ದಾರೆ? ಯಾವ ಕಾಮಗಾರಿಗಳಿಗೆ ಎಷ್ಟುಹಣ ಕೊಟ್ಟಿದ್ದಾರೆ? ಕಾಮಗಾರಿಗಳ ಪ್ರಗತಿ ಯಾವ ಹಂತದಲ್ಲಿದೆ? ಹೀಗೆ ಜನರ ಮನಸ್ಸಿನಲ್ಲಿ ಸಹಜವಾಗಿ ಒಂದಿಷ್ಟುಪ್ರಶ್ನೆಗಳಿರುತ್ತವೆ. ಅದಕ್ಕಾಗಿಯೇ ಕರ್ನಾಟಕ ಸರ್ಕಾರ 2013ರಲ್ಲಿ ನಾಗರಿಕರಿಗೆ ಮಾಹಿತಿ ನೀಡಲು ವೆಬ್‌ಸೈಟ್‌ ಕೂಡ ಆರಂಭಿಸಿದೆ. ದುರಂತವೆಂದರೆ, ರಾಜ್ಯದ 225 ವಿಧಾನಸಭೆ ಸದಸ್ಯರು ಮತ್ತು ವಿಧಾನ ಪರಿಷತ್‌ ಸದಸ್ಯರು ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಬಳಸಬೇಕಾದ ಬರೋಬ್ಬರಿ ಒಂದು ಸಾವಿರ ಕೋಟಿ ರು. ಅನುದಾನ ಖರ್ಚಾಗದೇ ಉಳಿದಿದ್ದರೂ ಅದರ ಮಾಹಿತಿಯನ್ನು ಜನರೊಂದಿಗೆ ಹಂಚಿಕೊಳ್ಳುತ್ತಿಲ್ಲ!

ರಾಜ್ಯದ ಎಲ್ಲ ಶಾಸಕರು ತಮ್ಮ ಕ್ಷೇತ್ರದಲ್ಲಿ ಕೈಗೊಂಡಿರುವ ಕಾಮಗಾರಿಗಳ ಕುರಿತಂತೆ ನಾಗರಿಕರಿಗೆ ಮಾಹಿತಿ ನೀಡಬೇಕೆಂಬುದು ಸರ್ಕಾರದ ಆಶಯ. ಅದಕ್ಕಾಗಿ kllads.kar.nic.in ವೆಬ್‌ಸೈಟ್‌ ಮೂಲಕ ನಾಗರಿಕರು ತಮ್ಮ ಕ್ಷೇತ್ರದ ಮಾಹಿತಿ ಪಡೆಯಬಹುದು. ಆದರೆ, 2014ರ ನಂತರ ಈ ವೆಬ್‌ಸೈಟನ್ನು ಸರ್ಕಾರ ಅಪ್‌ಡೇಟ್‌ ಮಾಡುವುದನ್ನೇ ಕೈಬಿಟ್ಟಿದೆ. ಕಾರಣ, ಶಾಸಕರ ‘ನಿಜಬಣ್ಣ' ಬಯಲಾಗಬಾರದು ಎಂಬ ಉದ್ದೇಶವೇ ಎಂಬ ಸಂಶಯ ವ್ಯಕ್ತವಾಗತೊಡಗಿದೆ. ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯಲ್ಲಿ ಶಾಸಕರ ಕ್ಷೇತ್ರವಾರು ಅನುದಾನ ಒದಗಿಸಿದ ಮಾಹಿತಿ ಲಭ್ಯವಿಲ್ಲ. ಏಕೆಂದರೆ ಆಯಾ ಜಿಲ್ಲಾಧಿಕಾರಿಗಳೇ ವೆಬ್‌ಸೈಟ್‌ಗೆ ಪ್ರಗತಿಯ ಮಾಹಿತಿ ಅಪ್‌ಲೋಡ್‌ ಮಾಡಬೇಕೆಂಬುದು ಇಲಾಖೆಯ ನಿಲುವು. ಹೀಗಾಗಿ ನಾಗರಿಕರಿಗೆ ತಮ್ಮ ಶಾಸಕರ ನಿಧಿ ಬಳಕೆ ಮಾಹಿತಿ ಎಲ್ಲಿಯೂ ಸಿಗುತ್ತಿಲ್ಲ.

ಆಡಳಿತದಲ್ಲಿ ಪಾರದರ್ಶಕತೆ ತರಬೇಕೆಂಬ ಮುಖ್ಯಮಂತ್ರಿಗಳು ಮತ್ತು ಸರ್ಕಾರದ ಒಟ್ಟಾರೆ ಆಶಯಕ್ಕೆ ವ್ಯತಿರಿಕ್ತವಾಗಿ ರಾಜ್ಯದ ಬರೋಬ್ಬರಿ 300 ಶಾಸಕರು (ವಿಧಾನಸಭೆ ಮತ್ತು ಪರಿಷತ್‌ ಸೇರಿ) ತಮ್ಮ ಕ್ಷೇತ್ರದಲ್ಲಿ ಕೈಗೊಳ್ಳಬೇಕಾದ ವಾರ್ಷಿಕ ತಲಾ 2 ಕೋಟಿ ರು.ಗಳ ಅನುದಾನವನ್ನು ಕಳೆದ ನಾಲ್ಕು ವರ್ಷಗಳಲ್ಲಿ ಸಮರ್ಪಕವಾಗಿ ಬಳಸಿಯೇ ಇಲ್ಲ. ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ನೀಡಿದ ದಾಖಲೆಗಳ ಪ್ರಕಾರ, ಬರೋಬ್ಬರಿ 1009.19 ಕೋಟಿ ರು. ಬಳಕೆಯಾಗದೇ ಉಳಿದಿದೆ.
ಕಳೆದ 2013ರ ಏಪ್ರಿಲ್‌ನಿಂದ 2017ರ ಮಾಚ್‌ರ್‍ ಅಂತ್ಯದವರೆಗೆ ರಾಜ್ಯ ಸರ್ಕಾರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಗೆ ಒಟ್ಟು 2,750 ಕೋಟಿ ರು.ಗಳ ಅನುದಾನ ಒದಗಿಸಿದೆ. ಈ ಪೈಕಿ 1,830 ಕೋಟಿ ರು.ಗಳನ್ನು ಬಿಡುಗಡೆ ಮಾಡಿ, ಆ ಪೈಕಿ 1,567 ಕೋಟಿ ರು.ಗಳನ್ನು ಅಂದರೆ ಶೇ.57ರಷ್ಟುಹಣವನ್ನು ಖರ್ಚು ಮಾಡಿದೆ. ಗಮನಾರ್ಹವೆಂದರೆ, ರಾಜ್ಯದ 30 ಜಿಲ್ಲೆಗಳ ಪೈಕಿ 28 ಜಿಲ್ಲೆಗಳಲ್ಲಿ ಶೇ.50ಕ್ಕಿಂತ ಕಡಿಮೆ ಅನುದಾನ ಬಳಕೆ ಮಾಡಲಾಗಿದೆ.

ಚುನಾವಣೆ ಬಂದಾಗಲೇ ಬಳಕೆ: ಕಳೆದ ನಾಲ್ಕು ವರ್ಷಗಳಲ್ಲಿ ಶಾಸಕರ ಕ್ಷೇತ್ರಾಭಿವೃದ್ಧಿಗೆ ನೀಡಿದ 2 ಕೋಟಿ ರು. ನಿಧಿಯನ್ನು ಖರ್ಚು ಮಾಡುವಲ್ಲಿ ಎಲ್ಲ ಪಕ್ಷಗಳ, ಎಲ್ಲ ಜಿಲ್ಲೆಗಳ ಶಾಸಕರೂ ಹಿಂದೆ ಬಿದ್ದಿದ್ದಾರೆ. ಯೋಜನಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಎಲ್ಲ ಶಾಸಕರು ಚುನಾವಣೆ ಹತ್ತಿರ ಬಂದಾಗಲೇ ಯುದ್ಧೋಪಾದಿಯಲ್ಲಿ ಈ ನಿಧಿಯನ್ನು ಖರ್ಚು ಮಾಡುತ್ತಾರೆ.

ನೀರಾದ್ರೂ ಕೊಡಿ!

ರಾಜ್ಯದ 175 ತಾಲೂಕುಗಳ ಪೈಕಿ 160 ತಾಲೂಕುಗಳಲ್ಲಿ ಬರಗಾಲ ಆವರಿಸಿದೆ. ಇದರಿಂದ ಜನ-ಜಾನುವಾರುಗಳು ನೀರು, ಆಹಾರ, ಮೇವು, ಉದ್ಯೋಗ ಇಲ್ಲದೇ ಪರದಾಡುತ್ತಿವೆ. ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿ 1000 ಕೋಟಿ ಬಳಕೆಯಾಗದೇ ಉಳಿದ ಕಾರಣದಿಂದ ರಾಜ್ಯ ಸರ್ಕಾರ ಈ ನಿಧಿಯನ್ನು ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಜೂನ್‌ ಅಂತ್ಯದವರೆಗೆ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆಗೆ ಬಳಕೆ ಮಾಡಿ ಎಂದು ಮೇ 3ರಂದು ಆದೇಶ ಹೊರಡಿಸಿದೆ. ಬೊಕ್ಕಸದಲ್ಲಿ ಬಳಕೆಯಾಗದ ಹಣದಲ್ಲಿ ಜನರಿಗೆ ಕುಡಿಯೋಕೆ ನೀರನ್ನಾದರೂ ಕೊಡಿ ಎಂಬಂರ್ಥದಲ್ಲಿ ಸುತ್ತೋಲೆ ಹೊರಡಿಸಿದೆ. ಶಾಸಕರು ಇನ್ನಾದರೂ ತಮ್ಮ ಕ್ಷೇತ್ರದ ಜನರ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಲು ಹಣ ಖರ್ಚು ಮಾಡುತ್ತಾರಾ ಎಂದು ಕಾದು ನೋಡಬೇಕಿದೆ.

click me!