
ಆಗ್ರಾ (ಜೂ.16): ಒಡಿಶಾದ 30 ವರ್ಷದ ಯುವಕನೋರ್ವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಉದ್ದೇಶದಿಂದ 1,350 ಕಿಮೀ ಪಾದಯಾತ್ರೆ ಮಾಡಿ ಗಮನ ಸೆಳೆದಿದ್ದಾರೆ. ಒಡಿಶಾದ ರೂರ್ಕೆಲಾದಿಂದ ಏಪ್ರಿಲ್ 16ರಂದು ಹೊರಟ ಮುಕ್ತಿಕಾಂತ್ ಬಿಸ್ವಾಲ್ ಸುದೀರ್ಘ ಪಾದಯಾತ್ರೆ ಮೂಲಕ ಗುರುವಾರ ಉತ್ತರ ಪ್ರದೇಶದ ಆಗ್ರಾ ತಲುಪಿದ್ದಾನೆ.
ಹಿಂದೊಮ್ಮೆ ಪ್ರಧಾನಿ ಮೋದಿ ಒಡಿಶಾಗೆ ಆಗಮಿಸಿದ್ದಾಗ ಬಿಸ್ವಾಲ್ ಹುಟ್ಟೂರಿಗೆ ಭೇಟಿ ಕೊಟ್ಟಿದ್ದರು. ಆಗ ಅವರು ಅಲ್ಲಿನ ಸಾರ್ವಜನಿಕರಿಗೆ ನೀಡಿದ್ದ ಭರವಸೆಯನ್ನು ನೆನಪಿಸುವ ಉದ್ದೇಶದಿಂದ ಯುವಕ ಈ ಪಾದಯಾತ್ರೆ ಕೈಗೊಂಡಿದ್ದಾನೆ. ವಿಗ್ರಹ ತಯಾರಕನಾದ ಬಿಸ್ವಾಲ್ ಊರಿನಲ್ಲಿರುವ ಆಸ್ಪತ್ರೆಯೊಂದನ್ನು ಅಭಿವೃದ್ದಿಪಡಿಸುವುದಾಗಿ ಮೋದಿ ಭರವಸೆ ನೀಡಿದ್ದರು. ಆ ಭರವಸೆಯನ್ನು ಅವರಿಗೆ ನೆನಪಿಸುವ ಸಲುವಾಗಿ ಈ ಯಾತ್ರೆ ನಡೆಸಿದ್ದಾನೆ.
ಸದ್ಯ ಆಗ್ರಾ ತಲುಪಿರುವ ಈ ಯುವಕ ಅಲ್ಲಿನ ಬಿಸಿಯಾದ ಹವೆಯ ಕಾರಣ ಅಸ್ವಸ್ಥನಾಗಿದ್ದು, ಆತನನ್ನು ಗಮನಿಸಿದ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಸ್ವಾಲ್ ಮುಂದಿನ ವಾರ ದೆಹಲಿ ತಲುಪಿ ಈ ಸಾಹಸ ಯಾತ್ರೆಯನ್ನು ಮುಗಿಸುವ ಗುರಿ ಹೊಂದಿದ್ದಾನೆ.
ರೂರ್ಕೆಲಾದ ಬ್ರಹ್ಮಣಿ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸುವುದು, ಪ್ರಧಾನಿಗಳು ತಾವು ಏಪ್ರಿಲ್ 2015ರಲ್ಲಿ ನೀಡಿದ್ದ ಭರವಸೆಯಂತೆ ಇಸ್ಲಾಮಿಕ್ ಜನರಲ್ ಆಸ್ಪತ್ರೆಯನ್ನು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಾಗಿ ಮೇಲ್ದರ್ಜೆಗೆ ಏರಿಸುವುದಕ್ಕೆ ಸಂಬಂಧಿಸಿ ಪ್ರಧಾನಿ ಮೋದಿಯವರಿಗೆ ಮನವಿ ಮಾಡಿಕೊಳ್ಳುವುದಾಗಿ ಆತ ತಿಳಿಸಿದ್ದಾನೆ.
ಒಡಿಶಾದಿಂದ ಹೊರಟು, ಬಿಹಾರ, ಜಾರ್ಖಂಡ್ ಮೂಲಕ ಇದೀಗ ಉತ್ತರ ಪ್ರದೇಶ ತಲುಪಿರುವ ಬಿಸ್ವಾಲ್, ಮುಂದೆ ಹರಿಯಾಣ ಮೂಲಕ ದೆಹಲಿ ತಲುಪಿ ಪ್ರಧಾನಿ ಅವರನ್ನು ಭೇಟಿ ಮಾಡಲಿದ್ದಾನೆ. ಅಲ್ಲದೇ ಒಂದು ವೇಳೆ ಪ್ರಧಾನಿ ಭೇಟಿಗೆ ಅವಕಾಶ ದೊರಕದಿದ್ದಲ್ಲಿ ದೆಹಲಿಯಲ್ಲೇ ಧರಣಿ ಕೂರಲಿರುವುದಾಗಿ ಬಿಸ್ವಾಲ್ ಎಚ್ಚರಿಕೆ ನೀಡಿದ್ದಾನೆ.
ತನ್ನ ಹುಟ್ಟೂರಿನಲ್ಲಿರುವ ಆಸ್ಪತ್ರೆಯ ಅಭಿವೃದ್ದಿ ಮಾಡಿಸುವುದಾಗಿ ಪ್ರಧಾನಿ ಈ ಹಿಂದೆ ನೀಡಿದ್ದ ಭರವಸೆಯನ್ನು ಅವರಿಗೆ ನೆನಪಿಸಲು ಒಡಿಶಾದ ಯುವಕನೋರ್ವ ಬರೋಬ್ಬರಿ 1,350 ಕಿಮೀ ಪಾದಯಾತ್ರೆ ಮಾಡಿದ್ದಾರೆ. ಸದ್ಯ ಉತ್ತರಪ್ರದೇಶದ ಆಗ್ರಾದಲ್ಲಿರುವ ಮುಕ್ತಿಕಾಂತ್ ಬಿಸ್ವಾಲ್ ಕೆಲವೇ ದಿನಗಳಲ್ಲಿ ದೆಹಲಿ ತಲುಪಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.