
ಬೆಂಗಳೂರು: ಬಂಗಲೆಯೊಂದರಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ದಂಧೆ ಮೇಲೆ ದಾಳಿ ನಡೆಸಿರುವ ಮೈಕೋ ಲೇಔಟ್ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ಮೂವರು ಯುವತಿಯರನ್ನು ರಕ್ಷಿಸಿದ್ದಾರೆ.
ಪರ್ವೇಜ್ ಖಾನ್, ನರೇಶ್ ಸಿಂಗ್ ಮತ್ತು ಶರವಣ ಬಂಧಿತರು. ಈ ಪ್ರಕರಣದಲ್ಲಿ ದಂಧೆಕೋರರಿಂದ ಹೆಡ್‌ಕಾನ್ಸ್‌ಟೇಬಲ್‌ವೊಬ್ಬರು ಹಣ ಪಡೆಯುತ್ತಿದ್ದರು ಎಂಬ ಆರೋಪ ಕೂಡ ಕೇಳಿ ಬಂದಿದೆ.
ಆರೋಪಿಗಳು ರೂಪದರ್ಶಿಯರನ್ನು ಮುಂಬೈನಿಂದ ವಿಮಾನದ ಮೂಲಕ ನಗರಕ್ಕೆ ಕರೆಸಿಕೊಳ್ಳುತ್ತಿದ್ದರು. ಬಂಧಿತರಿಂದ ಸ್ವೈಪಿಂಗ್ ಮಷಿನ್ ಜಪ್ತಿ ಮಾಡಲಾಗಿದೆ. ಉಸ್ಮಾನ್ ಮತ್ತು ರಿಶಭ್ ಪರಾರಿಯಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಆರೋಪಿಗಳು ಕುವೆಂಪು ನಗರದಲ್ಲಿರುವ ಬಂಗಲೆಯೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು.
ಮುಂಬೈನಿಂದ ರೂಪದರ್ಶಿಯರನ್ನು ನಗರಕ್ಕೆ ಕರೆಸಿಕೊಂಡು ಹಣವಂತರನ್ನು ವೆಬ್‌ಸೈಟ್ ಮೂಲಕ ಸಂಪರ್ಕಿಸಿ ವ್ಯವಹಾರ ಕುದುರಿಸುತ್ತಿದ್ದರು. ಗ್ರಾಹಕರಿಂದ . 20 ಸಾವಿರದಿಂದ . 30 ಸಾವಿರ ತನಕ ಹಣ ವಸೂಲಿ ಮಾಡುತ್ತಿದ್ದರು. ವಾರಾಂತ್ಯದಲ್ಲಿ ಆರೋಪಿ ಪರ್ವೇಜ್ ಖಾನ್ ಮುಂಬೈನಿಂದ ವಿಮಾನದ ಮೂಲಕ ರೂಪದರ್ಶಿಯೊಬ್ಬರನ್ನು ಕರೆಸಿಕೊಳ್ಳುತ್ತಿದ್ದ. ಪುನಃ ಮರುದಿನ ವಿಮಾನದ ಮೂಲಕವೇ ಯುವತಿಯರನ್ನು ಮುಂಬೈಗೆ ಕಳುಹಿಸಿ ಕೊಡಲಾಗುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳ ದಂಧೆಗೆ ಮೊದಲು ಮಡಿವಾಳ ಪೊಲೀಸ್ ಠಾಣೆಯಲ್ಲಿ ಹೆಡ್‌ಕಾನ್ಸ್‌ಟೇಬಲ್ ಆಗಿದ್ದ ಪ್ರಸ್ತುತ ಪರಪ್ಪನ ಅಗ್ರಹಾರ ಠಾಣೆಯಲ್ಲಿರುವ ಹೆಡ್‌ಕಾನ್ಸ್‌ಟೇಬಲ್‌ವೊಬ್ಬರು ಸಹಕರಿಸುತ್ತಿದ್ದರು. ಇದಕ್ಕೆ ಮಾಸಿಕವಾಗಿ ಹಣ ನೀಡುತ್ತಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಗ್ರಾಹಕರ ಬಳಿ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕವೂ ಆರೋಪಿಗಳು ಹಣ ಪಡೆಯುತ್ತಿದ್ದರು. ಇದಕ್ಕಾಗಿ ನಾಲ್ಕು ಸ್ವೈಪಿಂಗ್ ಮಷಿನ್ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.