ರಾಜ್ಯ ಸರ್ಕಾರ ಕೆಲಸ ನಿಲ್ಲಿಸಿದೆ : ಹೈ ಕೋರ್ಟ್ ಮತ್ತೆ ತರಾಟೆ

Published : Feb 09, 2018, 07:55 AM ISTUpdated : Apr 11, 2018, 12:58 PM IST
ರಾಜ್ಯ ಸರ್ಕಾರ ಕೆಲಸ ನಿಲ್ಲಿಸಿದೆ :  ಹೈ ಕೋರ್ಟ್ ಮತ್ತೆ ತರಾಟೆ

ಸಾರಾಂಶ

‘ರಾಜ್ಯ ಸರ್ಕಾರದ ಎಲ್ಲ ಆಡಳಿತ ಯಂತ್ರ ಕೆಲಸ ನಿಲ್ಲಿಸಿವೆ. ಅಧಿಕಾರಿಗಳಂತೂ ದಪ್ಪ ಚರ್ಮದವರಾಗಿದ್ದು, ರಾಜಕಾರಣಿಗಳು ಹಾಗೂ ಸಾರ್ವಜನಿಕರನ್ನು ಹಾದಿ ತಪ್ಪಿಸುತ್ತಿದ್ದಾರೆ. ಕೋರ್ಟ್‌ ಆದೇಶಕ್ಕೆ ‘ಡೋಂಟ್‌ ಕೇರ್‌’ ಎನ್ನುತ್ತಿದ್ದಾರೆ. ಇಂಥ ಅಧಿಕಾರಿಗಳನ್ನು ಹತ್ತು ದಿನ ಜೈಲಿಗೆ ಕಳುಹಿಸಿದರೆ ಬುದ್ಧಿ ಬರಲಿದೆ’ ಎಂದು ಹೈಕೋರ್ಟ್‌ ಗುರುವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಬೆಂಗಳೂರು : ರಾಜ್ಯ ಸರ್ಕಾರದ ಎಲ್ಲ ಆಡಳಿತ ಯಂತ್ರ ಕೆಲಸ ನಿಲ್ಲಿಸಿವೆ. ಅಧಿಕಾರಿಗಳಂತೂ ದಪ್ಪ ಚರ್ಮದವರಾಗಿದ್ದು, ರಾಜಕಾರಣಿಗಳು ಹಾಗೂ ಸಾರ್ವಜನಿಕರನ್ನು ಹಾದಿ ತಪ್ಪಿಸುತ್ತಿದ್ದಾರೆ. ಕೋರ್ಟ್‌ ಆದೇಶಕ್ಕೆ ‘ಡೋಂಟ್‌ ಕೇರ್‌’ ಎನ್ನುತ್ತಿದ್ದಾರೆ. ಇಂಥ ಅಧಿಕಾರಿಗಳನ್ನು ಹತ್ತು ದಿನ ಜೈಲಿಗೆ ಕಳುಹಿಸಿದರೆ ಬುದ್ಧಿ ಬರಲಿದೆ’ ಎಂದು ಹೈಕೋರ್ಟ್‌ ಗುರುವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಸರ್ವೇ ನಂ 200ರಲ್ಲಿ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸೇರಿದ್ದ 100 ಎಕರೆ ಜಮೀನು ಪೈಕಿ ಐದು ಎಕರೆಯನ್ನು ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಮಂಜೂರು ಮಾಡಲು 2016ರಲ್ಲಿ ಚಿಕ್ಕಮಗಳೂರು ಕಂದಾಯ ಉಪ ವಿಭಾಗದ ಉಪ ವಿಭಾಗಾಧಿಕಾರಿಯಾಗಿದ್ದ ನೇಹಲ್‌ ಅವರು ಜಿಲ್ಲಾಧಿಕಾರಿಗೆ ಶಿಫಾರಸು ಮಾಡಿದ್ದರು. ಅದರಂತೆ ಸದರಿ ಐದು ಎಕರೆಯನ್ನು ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಮೀಸಲಿಟ್ಟು ಆದೇಶಿಸಿದ್ದರು. ಈ ಕ್ರಮ ಪ್ರಶ್ನಿಸಿ ವಿಶ್ವವಿದ್ಯಾಲಯ ಹೈಕೋರ್ಟ್‌ ಮೆಟ್ಟಿಲೇರಿದೆ.

ಗುರುವಾರ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಎನ್‌. ಸತ್ಯನಾರಾಯಣ ಅವರಿದ್ದ ಏಕಸದಸ್ಯ ಪೀಠ, ವಿಶ್ವವಿದ್ಯಾಲಯದ ಜಮೀನನ್ನು ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಮಂಜೂರು ಮಾಡಲು ಏಕೆ ಶಿಫಾರಸು ಮಾಡಿದಿರಿ? ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ನಿಮಗೆ ಅಗತ್ಯವೇನಿತ್ತು ಎಂದು ವಿಚಾರಣೆಗೆ ಖುದ್ದು ಹಾಜರಿದ್ದ ಹಾಲಿ ಧಾರವಾಡ ಜಿಲ್ಲಾ ಪಂಚಾಯತ್‌ ಸಿಇಓ ನೇಹಲ್‌ ಅವರನ್ನು ಪ್ರಶ್ನಿಸಿತು.

ಇದಕ್ಕೆ ವಿವರಣೆ ನೀಡಲು ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಶಿವಣ್ಣ ಮುಂದಾದರು. ಅವರನ್ನು ತಡೆದ ನ್ಯಾಯಮೂರ್ತಿಗಳು, ನೋಡಿ ಶಿವಣ್ಣ ಸದ್ಯ ಸರ್ಕಾರದ ಆಡಳಿತ ಹದಗೆಟ್ಟು ಹೋಗಿದೆ. ಎಲ್ಲ ಆಡಳಿತ ಯಂತ್ರ ಕೆಲಸ ನಿಲ್ಲಿಸಿವೆ. ಅಧಿಕಾರಿಗಳು ದಪ್ಪ ಚರ್ಮದವರಾಗಿದ್ದಾರೆ. ರಾಜಕಾರಣಿಗಳು ಹಾಗೂ ಜನರನ್ನು ಯಾಮಾರಿಸಿ, ತಮಗಿಷ್ಟಬಂದ ಆದೇಶ ಹೊರಡಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಕರಣವೊಂದರಲ್ಲಿ ಮಿಥಿಕ್‌ ಸೊಸೈಟಿಗೆ ಜಮೀನು ಮಂಜೂರು ಮಾಡಿ ಹತ್ತು ವರ್ಷಗಳಾದರೂ ಸರ್ಕಾರದ ಅಧೀನ ಕಾರ್ಯದರ್ಶಿ ಪೋಡಿ ಮಾಡಿಸಿಕೊಟ್ಟಿಲ್ಲ. ಆದರೆ, ಸೊಸೈಟಿಯಿಂದ 1.80 ಕೋಟಿ ರು. ಹಣ ಮಾತ್ರ ಪಡೆದಿದ್ದಾರೆ. ಅಷ್ಟುಹಣವು ಅಧಿಕಾರಿಯ ಅಪ್ಪನ ಮನೆಯ ಆಸ್ತಿಯೇ? ಅಧಿಕಾರಿಗಳು ತಾವೇ ಸುಪ್ರೀಂ ಎಂದು ತಿಳಿದುಕೊಂಡಿದ್ದಾರೆ. ಅವರನ್ನು ಹತ್ತು ದಿನ ಜೈಲಿಗೆ ಕಳುಹಿಸಿದರೆ ಬುದ್ಧಿ ಬರುತ್ತದೆ ಎಂದು ಟೀಕಿಸಿದರು.

ಪ್ರಾಸಿಕ್ಯೂಷನ್‌ ಎಚ್ಚರಿಕೆ: ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಜಮೀನು ಗುರುತಿಸಿ, ಮಂಜೂರು ಮಾಡಲು ಜಿಲ್ಲಾಧಿಕಾರಿಗೆ ಶಿಫಾರಸು ಮಾಡಿರುವುದಕ್ಕೆ ಸೂಕ್ತ ವಿವರಣೆಯೊಂದಿಗೆ ಮುಂದಿನ ವಿಚಾರಣೆ ವೇಳೆ ಖುದ್ದು ಹಾಜರಾಗಿ ಪ್ರಮಾಣಪತ್ರ ಸಲ್ಲಿಸಬೇಕು. ಒಂದೊಮ್ಮೆ ಆ ಪ್ರಮಾಣಪತ್ರ ಕೋರ್ಟ್‌ಗೆ ತೃಪ್ತಿ ತರದಿದ್ದರೆ ನೇಹಲ್‌ ವಿರುದ್ಧ ಪ್ರಾಸಿಕ್ಯೂಷನ್‌ಗೆ ಆದೇಶಿಸಲಾಗುವುದು ಎಂದು ನ್ಯಾಯಮೂರ್ತಿ ಎಚ್ಚರಿಸಿ ವಿಚಾರಣೆ ಮುಂದೂಡಿದರು.

ಬಾಯಿ ಮುಚ್ಚಿಕೊಳ್ಳಿ! : ಯಾವತ್ತು ಪ್ರಮಾಣಪತ್ರ ಸಲ್ಲಿಸಲಾಗುತ್ತದೆ ಎಂದು ಎಎಜಿ ಶಿವಣ್ಣ ಅವರನ್ನು ನ್ಯಾಯಮೂರ್ತಿ ಪ್ರಶ್ನಿಸಿದರು. ಇದ್ದಕ್ಕೆ ನೇಹಲ್‌ ಅವರು ಉತ್ತರಿಸಲು ಮುಂದಾದಾಗ ಕೋಪಗೊಂಡ ನ್ಯಾಯಮೂರ್ತಿಗಳು, ‘ನೀವು ನನಗೆ ನೇರವಾಗಿ ಉತ್ತರ ಹೇಳಲು ಬರಬೇಡಿ, ನಾನು ಹೇಳಿದಾಗಷ್ಟೇ ನಿಮ್ಮ ಬಾಯಿ ಬಿಡಿ, ಏನೇ ಇದ್ದರೂ ನಿಮ್ಮ ವಕೀಲರಿಂದ ಹೇಳಿಸಿ’ ಎಂದು ತಾಕೀತು ಮಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಈ ಪಾಕಿಸ್ತಾನಿ ನಾಯಕನ ಹೆಸರಿನಲ್ಲಿ ಮುಂಬೈನಲ್ಲಿ ಇನ್ನೂ ಇದೆ 2.5 ಎಕರೆಯ ಬೃಹತ್ ಬಂಗ್ಲೆ
ಸ್ಯಾಂಡಲ್‌ವುಡ್ ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್‌ ಹಾಕಿದ್ದ ಅಕ್ರಮ ಕಾಂಪೌಂಡ್ ತೆರವು