
ಪಣಜಿ : ಮಾನವೀಯ ನೆಲೆಗಟ್ಟಿನಲ್ಲಿ ಮಹದಾಯಿ ನೀರು ಹಂಚಿಕೆ ಬಗ್ಗೆ ಕರ್ನಾಟಕದ ಜೊತೆ ಮಾತನಾಡಲು ಸಿದ್ಧ ಎಂದು ಎರಡು ತಿಂಗಳ ಹಿಂದಷ್ಟೇ ಹೇಳಿ ನಂತರ ಉಲ್ಟಾಹೊಡೆದಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಈಗ ‘ನ್ಯಾಯಾಧಿಕರಣ ಮಾತ್ರ ಮಹದಾಯಿ ಬಗ್ಗೆ ನಿರ್ಧಾರ ಕೈಗೊಳ್ಳಲು ಸಾಧ್ಯ’ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ಕೇಂದ್ರ ಸರ್ಕಾರದಿಂದ ನೇಮಕಗೊಂಡ ಅಂತಾರಾಜ್ಯ ನದಿ ನೀರಿನ ವ್ಯಾಜ್ಯಗಳ ನ್ಯಾಯಾಧಿಕರಣ ಮಾತ್ರ ಮಹದಾಯಿ ನೀರಿನ ಹಂಚಿಕೆ ವಿಷಯದಲ್ಲಿ ನಿರ್ಧಾರ ಕೈಗೊಳ್ಳಲು ಸಾಧ್ಯ. ಈ ವಿಷಯದಲ್ಲಿ ನ್ಯಾಯಾಧಿಕರಣದ ಹೊರಗೆ ನಡೆಯುವ ಚರ್ಚೆಗಳೆಲ್ಲ ಕೇವಲ ಶೈಕ್ಷಣಿಕ ಹಿತಾಸಕ್ತಿಯವು ಎಂದು ಅಭಿಪ್ರಾಯಪಟ್ಟಿದ್ದಾರೆ.
‘ನಾವು ನ್ಯಾಯಾಧಿಕರಣದಲ್ಲಿ ಈ ಪ್ರಕರಣವನ್ನು ಚೆನ್ನಾಗಿ ಮುನ್ನಡೆಸುತ್ತಿದ್ದೇವೆ. ಎಲ್ಲಾ ವಿಷಯದಲ್ಲೂ ನಿಮಗೆ ಉತ್ತರ ಏಕೆ ಬೇಕು? ಟ್ರಿಬ್ಯುನಲ್ ಈ ವಿಷಯವನ್ನು ನಿರ್ಧರಿಸುತ್ತದೆಯಾದರೆ ನಿರ್ಧರಿಸಲಿ ಬಿಡಿ’ ಎಂದು ಪರ್ರಿಕರ್ ಬುಧವಾರ ಸುದ್ದಿಗಾರರಿಗೆ ಹೇಳಿದರು. ಮಹದಾಯಿ ನ್ಯಾಯಾಧಿಕರಣದಲ್ಲಿ ಮಂಗಳವಾರದಿಂದ ಈ ವಿಚಾರದಲ್ಲಿ ಅಂತಿಮ ವಿಚಾರಣೆ ಆರಂಭಗೊಂಡ ಹಿನ್ನೆಲೆಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪರ್ರಿಕರ್ ಹೀಗೆ ಅಸಹನೆಯಿಂದ ಉತ್ತರಿಸಿದರು.
ಎರಡು ತಿಂಗಳ ಹಿಂದೆ ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದ ಪರ್ರಿಕರ್, ಮಾನವೀಯ ನೆಲೆಗಟ್ಟಿನಲ್ಲಿ ಮಹದಾಯಿ ನೀರಿನ ಹಂಚಿಕೆ ವಿಷಯದಲ್ಲಿ ಮಾತುಕತೆಗೆ ಗೋವಾ ಸಿದ್ಧವಿದೆ ಎಂದು ಹೇಳಿದ್ದರು. ನಂತರ ಕೆಲವೇ ದಿನಗಳಲ್ಲಿ ಮಾತುಕತೆ ಸಾಧ್ಯವಿಲ್ಲ ಎಂದು ಉಲ್ಟಾಹೊಡೆದಿದ್ದರು. ಕರ್ನಾಟಕದಿಂದ ಗೋವಾಕ್ಕೆ ಹರಿಯುವ ಮಹದಾಯಿ ನೀರನ್ನು ಉತ್ತರ ಕರ್ನಾಟಕಕ್ಕೆ ಕುಡಿಯುವ ನೀರು ಒದಗಿಸಲು ಕಳಸಾ, ಬಂಡೂರಿ ನಾಲೆಗಳನ್ನು ತಿರುಗಿಸುವ ಮೂಲಕ ಬಳಕೆ ಮಾಡಿಕೊಳ್ಳುವ ಬಗ್ಗೆ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ ನಡುವೆ ವ್ಯಾಜ್ಯ ನಡೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.