ಮಹದಾಯಿ ವಿಚಾರದ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡ ರಾಜ್ಯ ಸರ್ಕಾರ

Published : Feb 09, 2018, 07:43 AM ISTUpdated : Apr 11, 2018, 12:51 PM IST
ಮಹದಾಯಿ ವಿಚಾರದ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡ ರಾಜ್ಯ ಸರ್ಕಾರ

ಸಾರಾಂಶ

ಮಹದಾಯಿ ನದಿ ನೀರಿನ ಹಂಚಿಕೆ ವಿವಾದ ಸಂಬಂಧ ರಚನೆಯಾಗಿರುವ ಮಹದಾಯಿ ನ್ಯಾಯಾಧಿಕರಣದ ಅವಧಿಯ ವಿಸ್ತರಣೆಗೆ ಒಪ್ಪಿಗೆ ನೀಡದಿರಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

ಬೆಂಗಳೂರು : ಮಹದಾಯಿ ನದಿ ನೀರಿನ ಹಂಚಿಕೆ ವಿವಾದ ಸಂಬಂಧ ರಚನೆಯಾಗಿರುವ ಮಹದಾಯಿ ನ್ಯಾಯಾಧಿಕರಣದ ಅವಧಿಯ ವಿಸ್ತರಣೆಗೆ ಒಪ್ಪಿಗೆ ನೀಡದಿರಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ವಿಧಾನಮಂಡಲದ ಉಭಯ ಸದನಗಳ ಸಭಾ ನಾಯಕರ ಸಭೆಯ ಬಳಿಕ ಈ ವಿಷಯ ಬಹಿರಂಗಪಡಿಸಿದ ಅವರು, ಅಂತಾರಾಜ್ಯ ನೀರಾವರಿ ವಿವಾದಗಳಲ್ಲಿ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೇವೆ. ಯಾವುದೇ ಕಾರಣಕ್ಕೂ ನ್ಯಾಯಾಧಿಕರಣದ ಅವಧಿ ವಿಸ್ತರಣೆ ಬೇಡ ಎಂದು ಪ್ರತಿಪಕ್ಷಗಳ ಪ್ರಮುಖರೂ ಸಲಹೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯನ್ನು ಬೇಗ ಮಾಡಬೇಕೆಂಬ ದೃಷ್ಟಿಯಿಂದ ನ್ಯಾಯಾಧಿಕರಣದ ಅವಧಿ ವಿಸ್ತರಿಸಬೇಕೆಂಬ ಗೋವಾದವರ ವಾದವನ್ನು ಒಪ್ಪದಿರುವ ನಿರ್ಧಾರ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ನ್ಯಾಯ ಮಂಡಳಿ ರಚನೆಯಾಗಿದ್ದು 2010ರ ನವೆಂಬರ್‌ 16ರಂದು. ಅಂತಾರಾಜ್ಯ ಜಲ ವಿವಾದ ಕಾಯ್ದೆ ಪ್ರಕಾರ ನ್ಯಾಯಮಂಡಳಿ ರಚನೆಯಾದ ಬಳಿಕ ಮೂರು ವರ್ಷದಲ್ಲಿ ವರದಿ ಕೊಡಬೇಕು. ಜೊತೆಗೆ ನ್ಯಾಯಮಂಡಳಿಯ ಅವಧಿಯನ್ನು ಎರಡು ಬಾರಿ ವಿಸ್ತರಿಸಲು ಕಾಯಿದೆಯಲ್ಲಿ ಅವಕಾಶವಿದೆ. ಆದರೆ, ಈಗಾಗಲೇ ಎರಡು ಬಾರಿ ಅವಧಿ ವಿಸ್ತರಣೆ ಮಾಡಲಾಗಿದೆ. ಮತ್ತೊಮ್ಮೆ ವಿಸ್ತರಿಸಬೇಕು ಎಂದಾದರೆ ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ. ಇದು ಮತ್ತಷ್ಟುವಿಳಂಬಕ್ಕೆ ದಾರಿಯಾಗುತ್ತದೆ. ಜೊತೆಗೆ ಕುಡಿಯುವ ನೀರಿಗೂ ತೊಂದರೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ನ್ಯಾಯಮಂಡಳಿ ಆಗಸ್ಟ್‌ 20ಕ್ಕೆ ವರದಿ ಕೊಡಬೇಕು. ಇದೀಗ ಮೂರೂ ರಾಜ್ಯಗಳು ತಮ್ಮ ತಮ್ಮ ಸಾಕ್ಷ್ಯ ಒದಗಿಸಿವೆæ. ಲಿಖಿತ ರೂಪದಲ್ಲಿ ತಮ್ಮ ವಾದ ಮಂಡನೆ ಮಾಡಿವೆæ. ನ್ಯಾಯಮಂಡಳಿ ಈ ತಿಂಗಳ 22ರವರೆಗೆ ವಾದ ಆಲಿಸಬೇಕು. ಆದರೆ, ಫೆ.6ರಂದು ನ್ಯಾಯಮಂಡಳಿಯಲ್ಲಿ ಗೋವಾ ಸರ್ಕಾರ ಅವಧಿ ವಿಸ್ತರಣೆಗೆ ಮನವಿ ಸಲ್ಲಿಸಿದೆ. ನಮ್ಮ ವಕೀಲರು ಸರ್ಕಾರದ ಜೊತೆ ಮಾತನಾಡಿ ಅಭಿಪ್ರಾಯ ತಿಳಿಸುತ್ತೇವೆ ಎಂದಿದ್ದಾರೆ. ನಾವು ಯಾವುದೇ ಕಾರಣಕ್ಕೂ ಅವಧಿ ವಿಸ್ತರಣೆಗೆ ಒಪ್ಪಲು ಸಾಧ್ಯವಿಲ್ಲ. ಈ ವಿಷಯವನ್ನು ವಕೀಲರಿಗೂ ತಿಳಿಸಿದ್ದೇವೆ ಎಂದರು.

ಮಹದಾಯಿ ಒಂದೇ ಅಲ್ಲ, ಕೃಷ್ಣಾ, ಕಾವೇರಿ ವಿಚಾರದಲ್ಲೂ ಸರ್ಕಾರ ಪ್ರತಿಪಕ್ಷದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮುಂದಿನ ಹೆಜ್ಜೆ ಇಡುತ್ತದೆ. ಇಂದಿನ ಸಭೆಯಲ್ಲೂ ವಿಧಾನ ಮಂಡಲದ ಉಭಯ ಸದನ ನಾಯಕರ ಅಭಿಪ್ರಾಯ ಆಲಿಸಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಕಾನೂನು ಸಹ ಅದನ್ನೇ ಹೇಳುತ್ತದೆ ಎಂದು ತಿಳಿಸಿದರು. ಮಹದಾಯಿ ವಿಚಾರದಲ್ಲಿ ಸರ್ವಪಕ್ಷ ನಿಯೋಗ ಭೇಟಿಯಾಗಲು ಸಮಯ ನೀಡುವಂತೆ ಪ್ರಧಾನಿಯವರಿಗೆ ಪತ್ರ ಬರೆದಿದ್ದೇವೆ. ಇನ್ನೂ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದರು.

ಹಿರಿಯ ವಕೀಲ ನಾರಿಮನ್‌ ಅವರು ಅನಾರೋಗ್ಯಕ್ಕೆ ಒಳಗಾಗಿರುವುದರಿಂದ ಅಶೋಕ್‌ ದೇಸಾಯಿ ಮತ್ತು ಶ್ಯಾಮ್‌ ದಿವಾನ್‌ ಅವರು ಮಹದಾಯಿ ನ್ಯಾಯ ಮಂಡಳಿಯಲ್ಲಿ ರಾಜ್ಯದ ಪರ ವಕಾಲತ್ತು ವಹಿಸಲಿದ್ದಾರೆ ಎಂದು ಸಿಎಂ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು. ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ವಿಧಾನಮಂಡಲದ ಉಭಯ ಸದನಗಳ ನಾಯಕರ ಸಭೆಯಲ್ಲಿ ವಿಪಕ್ಷ ನಾಯಕರಾದ ಜಗದೀಶ್‌ ಶೆಟ್ಟರ್‌, ಕೆ.ಎಸ್‌.ಈಶ್ವರಪ್ಪ, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌, ಜೆಡಿಎಸ್‌ ಶಾಸಕ ಎನ್‌.ಎಚ್‌.ಕೋನರೆಡ್ಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಮತ್ತಿತರರು ಪಾಲ್ಗೊಂಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಈ ಪಾಕಿಸ್ತಾನಿ ನಾಯಕನ ಹೆಸರಿನಲ್ಲಿ ಮುಂಬೈನಲ್ಲಿ ಇನ್ನೂ ಇದೆ 2.5 ಎಕರೆಯ ಬೃಹತ್ ಬಂಗ್ಲೆ
ಸ್ಯಾಂಡಲ್‌ವುಡ್ ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್‌ ಹಾಕಿದ್ದ ಅಕ್ರಮ ಕಾಂಪೌಂಡ್ ತೆರವು