ಕಾಶ್ಮೀರದಲ್ಲಿ ಉಗ್ರರಿಗೆ ನೆರೆ ರಾಜ್ಯದ ಜನರೇ ಟಾರ್ಗೆಟ್‌!

By Web DeskFirst Published Oct 17, 2019, 9:15 AM IST
Highlights

ಕಾಶ್ಮೀರದಲ್ಲಿ ಉಗ್ರರಿಗೆ ನೆರೆ ರಾಜ್ಯದ ಜನರೇ ಟಾರ್ಗೆಟ್‌| 3 ದಿನದಲ್ಲಿ ಮೂವರು ಪ್ರಜೆಗಳ ಕೊಂದ ಉಗ್ರರು

ಶ್ರೀನಗರ[ಅ.17]: ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಇತರ ರಾಜ್ಯದವರಿಗೂ ಕಣಿವೆ ರಾಜ್ಯದಲ್ಲಿ ಭೂಮಿ ಸಂಪಾದಿಸುವ ಮತ್ತು ಉದ್ಯಮ ಆರಂಭಿಸಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದ ಬೆನ್ನಲ್ಲೇ, ಜೀವನೋಪಾಯಕ್ಕಾಗಿ ಜಮ್ಮು-ಕಾಶ್ಮೀರದಲ್ಲಿ ನೆಲೆಗೊಂಡಿರುವ ಇತರ ರಾಜ್ಯದ ಪ್ರಜೆಗಳನ್ನು ಉಗ್ರರು ಹುಡುಕಿ ಭೀಕರವಾಗಿ ಹತ್ಯೆ ಮಾಡುತ್ತಿರುವ ಆತಂಕಕಾರಿ ಬೆಳವಣಿಗೆ ಕಂಡುಬಂದಿದೆ.

ಸೋಮವಾರವಷ್ಟೇ ರಾಜಸ್ಥಾನ ಮೂಲದ ಟ್ರಕ್‌ ಚಾಲಕರೊಬ್ಬರನ್ನು ಕಾಶ್ಮೀರ ಶೋಪಿಯಾನ್‌ ಜಿಲ್ಲೆಯಲ್ಲಿ ಉಗ್ರರು ಗುಂಡಿಟ್ಟು ಹತ್ಯೆ ಮಾಡಿದ್ದರು. ಬುಧವಾರ ಮತ್ತೆ ಶೋಪಿಯಾನ್‌ನಲ್ಲೇ ಪ್ರತ್ಯೇಕ ಘಟನೆಗಳಲ್ಲಿ ಪಂಜಾಬ್‌ ಮೂಲದ ಸೇಬು ಹಣ್ಣು ಮಾರಾಟಗಾರ ಮತ್ತು ಛತ್ತೀಸ್‌ಗಢ ಮೂಲದ ದಿನ ಕೂಲಿ ಕಾರ್ಮಿಕರ ಮೇಲೆ ಉಗ್ರರು ಮಾರಣಾಂತಿಕ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ.

ದೇಶದ ಇತರ ರಾಜ್ಯದ ಜನರಿಗೆ ಜಮ್ಮು-ಕಾಶ್ಮೀರದಲ್ಲಿ ಜಮೀನು ಖರೀದಿ ಮತ್ತು ಉದ್ಯಮ ಆರಂಭಿಸಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಆದರೆ, ರಾಜ್ಯಕ್ಕೆ ಇತರೆ ರಾಜ್ಯದ ಜನರು ಭೇಟಿ ನೀಡದಂತೆ ಬೆದರಿಕೆಯೊಡ್ಡುವ ಸಲುವಾಗಿ ಉಗ್ರರು ನೆರೆಯ ರಾಜ್ಯದ ಜನರನ್ನು ಗುರಿಯಾಗಿಸಿ ಉಗ್ರರು ಈ ಕೃತ್ಯವೆಸಗುತ್ತಿದ್ದಾರೆ ಎಂದು ಹೇಳಲಾಗಿದೆ. ಏತನ್ಮಧ್ಯೆ, ಜಮ್ಮು-ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯಲ್ಲಿ ಬುಧವಾರ ಭರ್ಜರಿ ಬೇಟೆಯಾಡಿದ ಭದ್ರತಾ ಸಿಬ್ಬಂದಿ, ಇತ್ತೀಚೆಗಷ್ಟೇ ಭಯೋತ್ಪಾದಕ ಸಂಘಟನೆಗೆ ಸೇರಿದ್ದ ಮೂವರು ಉಗ್ರರನ್ನು ಹತ್ಯೆ ಮಾಡಿದ್ದಾರೆ.

click me!