ಹುಡುಗಿ ಜತೆ ಸ್ಪರ್ಧೆಯಲ್ಲಿ ಸೋತೆ ಎಂದು ಲೇವಡಿ | ಚುನಾವಣೇಲಿ ಹುಡುಗಿ ಎದುರು ಸೋತಿದ್ದಕ್ಕೆ 13ರ ಬಾಲಕ ಆತ್ಮಹತ್ಯೆಗೆ ಶರಣು|
ನಲ್ಗೊಂಡ[ಜು.20]: ಶಾಲಾ ಚುನಾವಣೆಯಲ್ಲಿ ಬಾಲಕಿ ಎದುರು ಸೋತಿದ್ದಕ್ಕೆ ಕೇಳಿಬಂದ ಲೇವಡಿಗೆ ಮನನೊಂದ 8ನೇ ತರಗತಿ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಕರುಣಾಜನ, ಆಘಾತಕಾರಿ ಘಟನೆ ಆಂಧ್ರಪ್ರದೇಶದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ.
ಇಂದಿನ ಮಕ್ಕಳೇ ನಾಳಿನ ನಾಯಕರು ಎಂಬ ಗುರಿಯೊಂದಿಗೆ, ರಾಜಕೀಯದ ತಂತ್ರಗಳನ್ನು ಶಾಲಾ ಹಂತದಲ್ಲೇ ತಿಳಿಸಿಕೊಡುವ ನಿಟ್ಟಿನಲ್ಲಿ ಶಾಲೆಯಲ್ಲಿ ವಿದ್ಯಾರ್ಥಿ ನಾಯಕ ಆಯ್ಕೆಗಾಗಿ ಚುನಾವಣೆ ನಡೆಸಲಾಗಿತ್ತು. ಕಳೆದ ಜೂನ್ ತಿಂಗಳಲ್ಲಿ ನಡೆದ ಚುನಾವಣೆ ಫಲಿತಾಂಶವನ್ನು 3 ದಿನಗಳ ಹಿಂದೆ ಪ್ರಕಟಿಸಲಾಗಿತ್ತು. ಅದರಲ್ಲಿ ಬಾಲಕಿಯೊಬ್ಬಳು ವಿಜೇತಳಾಗಿದ್ದಳು. ಚುನಾವಣೆಗೆ ಸ್ಪರ್ಧಿಸಿದ್ದ 13 ವರ್ಷದ ಹಿಮಾಚರಣ್ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿತ್ತು.
ಇದೇ ವಿಚಾರವಾಗಿ ಸ್ನೇಹಿತರು ಹುಡುಗಿ ಜತೆ ಸ್ಪರ್ಧೆಯಲ್ಲಿ ಸೋತೆ ಎಂದು ಲೇವಡಿ ಮಾಡಿ ಕಿಚಾಯಿಸಿದ್ದರು. ಆದರೆ ಇದನ್ನೇ ಗಂಭೀರವಾಗಿ ಸ್ವೀಕರಿಸಿದ್ದ ಹಿಮಾಚರಣ್ ಗುರುವಾರ ಶಾಲೆ ಮುಗಿದ ನಂತರ ಮನೆಗೆ ಹಿಂದಿರುಗಿ ಶಾಲೆ ಬ್ಯಾಗ್ ಇಟ್ಟು ರೈಲು ಹಳಿಯತ್ತ ತೆರಳಿ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.