ಅಮಿತ್ ಶಾ ಬೆಂಗಾವಲು ವಾಹನಕ್ಕೆ ಟಿಡಿಪಿ ಕಾರ್ಯಕರ್ತರಿಂದ ಕಲ್ಲು ತೂರಾಟ

First Published May 11, 2018, 9:48 PM IST
Highlights
  • ತಿರುಮಲ ವೆಂಕಟೇಶ್ವರ ದೇವಸ್ಥಾನದಿಂದ ಹಿಂತಿರುಗುವ ವೇಳೆ ಘಟನೆ
  • ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದಿರುವುದಕ್ಕೆ ಆಕ್ರೋಶ

ತಿರುಪತಿ, ಆಂಧ್ರ ಪ್ರದೇಶ [ಮೇ.11]: ತಿರುಮಲ ವೆಂಕಟೇಶ್ವರ ದೇವಸ್ಥಾನದಿಂದ ಹಿಂತಿರುಗುವ ವೇಳೆ, ತೆಲುಗು ದೇಶಂ ಪಕ್ಷದ ಕಾರ್ಯಕರ್ತರು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಶುಕ್ರವಾರ ನಡೆದಿದೆ.

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿರುವ ಹಿನ್ನೆಲೆಯಲ್ಲಿ ಟಿಡಿಪಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.

ಅಮಿತ್ ಶಾ ತಿರುಪತಿಗೆ ಭೇಟಿ ನೀಡಿದಾಗಲೂ ಟಿಡಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಅದಾದ ಬಳಿಕ ಬಿಜೆಪಿ-ಟಿಡಿಪಿ ಕಾರ್ಯಕರ್ತರ ನಡುವೆ ಘರ್ಷಣೆಯುಂಟಾಗಿದೆ ಎಂದು ವರದಿಯಾಗಿದೆ. 

ಕಾರ್ಯಕರ್ತರ ಕೃತ್ಯವನ್ನು ಪಕ್ಷದ ನಾಯಕ ಹಾಗೂ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಖಂಡಿಸಿದ್ದಾರೆ. ಇಂತಹ ವರ್ತನೆಯನ್ನು ಪಕ್ಷವು ಸಹಿಸುವುದಿಲ್ಲವೆಂದು ಎಚ್ಚರಿಕೆ ನೀಡಿದ್ದಾರೆನ್ನಲಾಗಿದೆ. 

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಹಾಗೂ ಅನುದಾನ ನೀಡುವ ವಿಚಾರದಲ್ಲಿ ಟಿಡಿಪಿ ಹಾಗೂ ಬಿಜೆಪಿ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿದ್ದವು.  ಬಳಿಕ  ಟಿಡಿಪಿಯು ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿತ್ತು.  

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ವಿಶೇಷ ಅನುದಾನ ನೀಡುವುದಾಗಿ ಭರವಸೆ ನೀಡಿತ್ತು, ಆದರೆ ಅಧಿಕಾರ ಸಿಕ್ಕಿದ ಬಳಿಕ ಆಂಧ್ರ ಪ್ರದೇಶಕ್ಕೆ ಮೋಸ ಮಾಡಿದೆ, ಎಂದು ಚಂದ್ರಬಾಬು ನಾಯ್ಡು ಕೇಂದ್ರದ ವಿರುದ್ಧ ಹರಿಹಾಯ್ದಿದ್ದರು.

click me!