ಜನಪ್ರಿಯ ಟಿಕ್ ಟಾಕ್ ಆ್ಯಪ್ ಬ್ಯಾನ್ ?

By Web DeskFirst Published Feb 13, 2019, 2:16 PM IST
Highlights

ಜನಪ್ರಿಯ ಸೋಷಿಯಲ್ ಮೀಡಿಯಾ ಆ್ಯಪ್ ಟಿಕ್ ಟಾಕ್ ಗೆ ಇದೀಗ ಸಂಕಷ್ಟ ಎದುರಾಗಿದೆ. ಯುವಜನತೆಯನ್ನು ಸಾಕಷ್ಟು ಕಾಡಿದ್ದ ಈ ಆ್ಯಪ್ ನಿಷೇಧಕ್ಕೆ ತಮಿಳುನಾಡು ಸರ್ಕಾರ ಚಿಂತನೆ ನಡೆಸಿದೆ. 

ಚೆನ್ನೈ : ಇತ್ತೀಚಿನ ದಿನಗಳಲ್ಲಿ ಡಬ್ ಸ್ಮ್ಯಾಶ್ ಹಾವಳಿ ಹೆಚ್ಚಾಗಿ ಯುವಜನತೆಯನ್ನು ಗೀಳಿಗೆ ಹಚ್ಚಿದ್ದ ಜನಪ್ರಿಯ ಸೋಷಿಯಲ್ ಮೀಡಿಯಾ ಆ್ಯಪ್ ಟಿಕ್ ಟಾಕ್ ಗೆ ಇದೀಗ ಕಂಟಕ ಎದುರಾಗಿದೆ. ರಾಜ್ಯದಿಂದಲೇ ನಿಷೇಧ ಮಾಡಲು ತಮಿಳುನಾಡು ಸರ್ಕಾರ ಚಿಂತಿಸಿದೆ. . 

ಸೋಸಿಯಲ್ ಮೀಡಿಯಾ ಆ್ಯಪ್ ಟಿಕ್ ಟಾಕ್ ಬ್ಯಾನ್ ಮಾಡಲು ತಮಿಳುನಾಡು ಮಾಹಿತಿ ತಂತ್ರಜ್ಞಾನ ಸಚಿವ ಎಂ ಮನಿಕಂಡನ್  ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದಾರೆ.  ಆ್ಯಪ್ ಬ್ಯಾನ್ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಸಲ್ಲಿಸುವುದಾಗಿ ಹೇಳಿದ್ದಾರೆ.

ಟಿಕ್ ಟಾಕ್ ಆ್ಯಪ್ ನಲ್ಲಿ ತಮಿಳು ಸಂಸ್ಕೃತಿಯನ್ನು ಅತ್ಯಂತ ಕೀಳು ಮಟ್ಟದಲ್ಲಿ ಬಿಂಬಿಸಲಾಗುತ್ತಿದೆ ಎಂದು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಬ್ಯಾನ್ ಮಾಡುವ ಬಗ್ಗೆ ಪ್ರಸ್ತಾಪಿಸಲಾಗಿದೆ. 

ಟಿಕ್ ಟಾಕ್ ಆ್ಯಪ್ ನಲ್ಲಿ ತಮಿಳು ಸಂಸ್ಕೃತಿಯನ್ನು ಅತ್ಯಂತ ಕೀಳಾಗಿ ಕಾಣಲಾಗುತ್ತಿದೆ. ಇದರಲ್ಲಿ ಪೋರ್ನೊಗ್ರಫಿಯನ್ನು  ಉತ್ತೇಜಿಸಲಾಗುತ್ತಿದೆ. ಇದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವುದು ಹದಗೆಡಲಿದೆ. ಸಾಮಾಜಿಕ ಜವಾಬ್ದಾರಿಯಿಂದ ಸರ್ಕಾರ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಸಚಿವರು ಹೇಳಿದರು. 

ಈ ಆ್ಯಪ್ ನಿಷೇಧ ಮಾಡುವ ಮೂಲಕ  ರಾಜ್ಯದ ಮಹಿಳೆಯರು ಮತ್ತು ಯುವಜನತೆಯ ರಕ್ಷಣೆ ಮಾಡುವ ಅಗತ್ಯವಿದೆ. ಇದರಿಂದ ಸಂಸ್ಕೃತಿಗೆ ಧಕ್ಕೆಯಾಗುವುದನ್ನು ತಡೆಯಬೇಕಿದೆ ಎಂದು ಶಾಸಕ ತಮಿಮನ್ ಅನ್ಸಾರಿ ಹೇಳಿದರು. 

ಶೀಘ್ರದಲ್ಲೇ ಆ್ಯಪ್ ಬ್ಯಾನ್ ಮಾಡಲು ಕ್ರಮ ಕೈಗೊಳ್ಳಲಾಗುವುದು. ಕೇಂದ್ರದಿಂದ ಬ್ಲೂ ವೇಲ್ ಗೇಮ್ ನಿಷೇಧವಾದಂತೆ ರಾಜ್ಯದಲ್ಲಿ ಆ್ಯಪ್ ನಿಷೇಧಿಸಲಾಗುತ್ತದೆ ಎಂದು ಈ ವೇಳೆ ಮಾಹಿತಿ ತಂತ್ರಜ್ಞಾನ ಸಚಿವ ಮನಿಕಂಡನ್ ಭರವಸೆ ನೀಡಿದರು. 

click me!