ಏರುತ್ತಿದೆ ಬಿಸಿಲ ತಾಪ: ತಂಪು ಪಾನೀಯಕ್ಕೆ ಭಾರೀ ಬೇಡಿಕೆ

By Web DeskFirst Published Mar 13, 2019, 9:12 AM IST
Highlights

ತಂಪು ಪಾನೀಯಕ್ಕೆ ಹೆಚ್ಚುತ್ತಿದೆ ಭಾರೀ ಬೇಡಿಕೆ! ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪದಿಂದ ಹೈರಾಣಾಗುತ್ತಿರುವ ನಗರದ ಜನತೆ |  ಮಜ್ಜಿಗೆ, ಲಸ್ಸಿ, ಜ್ಯೂಸ್‌, ಕಲ್ಲಂಗಡಿ, ಕರಬೂಜಕ್ಕೆ ದಿನ ಕಳೆದಂತೆ ಹೆಚ್ಚುತ್ತಿದೆ ಡಿಮ್ಯಾಂಡ್‌

ಬೆಂಗಳೂರು (ಮಾ. 13):  ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನಿಂದ ಹೈರಾಣಾಗಿರುವ ಜನರು ಧಗೆಯಿಂದ ಪಾರಾಗಲು ಹಣ್ಣಿನ ರಸ, ಎಳನೀರು, ತಂಪು ಪಾನೀಯಗಳ ಮೊರೆ ಹೋಗುತ್ತಿದ್ದು, ತಂಪು ಪಾನೀಯಗಳು ಹಾಗೂ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿದೆ.

ರಾಜಧಾನಿಯಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಬಿಸಿಲಿನ ತಾಪಮಾನಕ್ಕೆ ಜನರು ನಲುಗುತ್ತಿದ್ದಾರೆ. ಬಿಸಿಲಿಗೆ ದೇಹವನ್ನು ತಂಪಾಗಿಸುವ ತಂಪು ಪಾನೀಯಗಳು, ಮಜ್ಜಿಗೆ, ಲಸ್ಸಿ, ಹಣ್ಣಿನ ಜ್ಯೂಸ್‌, ಐಸ್‌ಕ್ರೀಂ ಸೇರಿದಂತೆ ಹಣ್ಣುಗಳಿಗೆ ಡಿಮ್ಯಾಂಡ್‌ ಹೆಚ್ಚಿದೆ.

ನಗರದ ವಿವಿಧ ಸ್ಥಳಗಳಲ್ಲಿ ಕಲ್ಲಂಗಡಿ ಸೇರಿದಂತೆ ವಿವಿಧ ಹಣ್ಣುಗಳ ವ್ಯಾಪಾರವೂ ಜೋರಾಗಿದೆ. ನಗರದ ಕೆ.ಆರ್‌.ಮಾರುಕಟ್ಟೆ, ಗಾಂಧಿಬಜಾರ್‌, ಜಯನಗರ, ಬಸವನಗುಡಿ ಸೇರಿದಂತೆ ವಿವಿಧ ಪ್ರದೇಶಗಳ ರಸ್ತೆ ಬದಿಗಳಲ್ಲೂ ಬೀದಿ ವ್ಯಾಪಾರಿಗಳು ಹಣ್ಣುಗಳ ಮಾರಾಟದಲ್ಲಿ ತೊಡಗಿದ್ದಾರೆ. ಇನ್ನೊಂದೆಡೆ ವ್ಯಾಪಾರಿಗಳು ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿ ಕಲ್ಲಂಗಡಿ, ಕರಬೂಜ ಹಣ್ಣುಗಳನ್ನು ಮಾರುತ್ತಿದ್ದಾರೆ. ಕಲ್ಲಂಗಡಿ, ಕಬ್ಬಿನ ಹಾಲು, ಹಣ್ಣುಗಳ ರಸ, ತಂಪು ಪಾನೀಯ, ಎಳನೀರು ವ್ಯಾಪಾರ ಭರ್ಜರಿಯಾಗಿ ನಡೆದಿದೆ. ಕೆಲವರು ಮಜ್ಜಿಗೆ, ಜ್ಯೂಸ್‌ ಮಾರಾಟದಲ್ಲಿ ತೊಡಗಿದ್ದು, ಜನರಿಂದಲೂ ಬೇಡಿಕೆ ವ್ಯಕ್ತವಾಗಿದೆ.

ಬೆಲೆ ಏರಿಕೆ ಬಿಸಿ:

ಬೇಸಿಗೆ ಆರಂಭವಾದಂತೆ ಬೆಲೆ ಏರಿಕೆಯಾಗಿದೆ. ಬೇಸಿಗೆಗೂ ಮುನ್ನ ಕೆ.ಜಿ.ಗೆ .10-15 ಇದ್ದ ಕಲ್ಲಂಗಡಿ ಹಣ್ಣಿನ ಬೆಲೆ .20ಕ್ಕೆ ಹೆಚ್ಚಳವಾಗಿದೆ. ಕತ್ತರಿಸಿಟ್ಟಹೋಳು ಕಲ್ಲಂಗಡಿ .10ಕ್ಕೆ ಮಾರಾಟ ಮಾಡಲಾಗುತ್ತಿದೆ. ಕಬ್ಬಿನ ಹಾಲು ಒಂದು ಗ್ಲಾಸ್‌ಗೆ .10-15ರಿಂದ .20ವರೆಗೆ ಏರಿಕೆಯಾಗಿದ್ದು, ಇತರೆ ದಿನಗಳಿಗಿಂತ ದುಪ್ಪಟ್ಟು ವ್ಯಾಪಾರವಾಗುತ್ತಿದೆ.

ನಗರದ ಕೆಲ ಪ್ರದೇಶಗಳಲ್ಲಿ ಸಾಮಾನ್ಯ ದಿನಗಳಲ್ಲಿ .20-25ಕ್ಕೆ ಮಾರಾಟ ಮಾಡಲಾಗುತ್ತಿದ್ದ ಎಳನೀರು ಕೆಲವೆಡೆ .30-35, ಫä್ರಟ್ಸ್‌ ಸಲಾಡ್‌ ಪ್ಲೇಟ್‌ಗೆ .25-30ಕ್ಕೆ ಖರೀದಿಯಾಗುತ್ತಿದೆ. ಮಜ್ಜಿಗೆ ಒಂದು ಗ್ಲಾಸ್‌ಗೆ .10, ಪುದಿನ ಜ್ಯೂಸ್‌ಗೆ .15, ನಿಂಬೆರಸಕ್ಕೆ .15, ಹಣ್ಣಿನ ರಸ .20-35ರ ವರೆಗೆ ಮಾರಾಟ ಮಾಡಲಾಗುತ್ತಿದೆ.

‘ಬಡವರ ಫ್ರಿಡ್ಜ್‌’ಗೆ ಭಾರಿ ಬೇಡಿಕೆ!

ಬೇಸಿಗೆಯಲ್ಲಿ ದಣಿದು ಬಂದವರು ಒಂದಿಷ್ಟು ತಣ್ಣನೆಯ ನೀರು ಇಲ್ಲವೇ ಮಜ್ಜಿಗೆ ಸೇವಿಸಿದರೆ ಮನಸ್ಸು ಆಹ್ಲಾದಗೊಳ್ಳುತ್ತದೆ. ಆದರೆ, ಬಿರುಬಿಸಿಲಿಗೆ ಮನೆಯಲ್ಲಿ ಕುಡಿಯುವ ನೀರು ಸಹ ಬೆಚ್ಚಗೆ ಆಗುತ್ತಿದೆ. ಹೀಗಾಗಿ ನೀರನ್ನು ತಂಪಾಗಿರಿಸಲು ‘ಬಡವರ ಫ್ರಿಡ್ಜ್‌’ ಎಂದು ಕರೆಯಲ್ಪಡುವ ‘ಮಣ್ಣಿನ ಮಡಿಕೆ’ಗಳಿಗೆ ಬೇಡಿಕೆ ಕುದುರಿದೆ. ಮಣ್ಣಿನ ಮಡಿಕೆಯಲ್ಲಿ ನೀರು ತಂಪಾಗಿರುವುದರಿಂದ ಇವುಗಳ ವ್ಯಾಪಾರವೂ ಜೋರಾಗಿದೆ.

ಗ್ರಾಹಕರ ಬೇಡಿಕೆ ಪೂರೈಸಲು ಕೆಎಂಎಫ್‌ ಸಜ್ಜು

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ (ಕೆಎಂಎಫ್‌) ಬೇಸಿಗೆಯಲ್ಲಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ಹಾಲಿನ ಉತ್ಪನ್ನಗಳನ್ನು ಪೂರೈಸಲು ಸಜ್ಜಾಗಿದೆ. ಬಿರುಬೇಸಿಗೆಯ ಝಳಕ್ಕೆ ಜನರು ಮೊಸರು, ಲಸ್ಸಿ, ಐಸ್‌ಕ್ರೀಂ, ಕ್ಯಾಂಡಿ ಮೊರೆ ಹೋಗುತ್ತಿದ್ದು, ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬೇಡಿಕೆಗೆ ಅನುಗುಣವಾಗಿ ಕೆಎಂಎಫ್‌ ಮೊಸರು, ಮಜ್ಜಿಗೆ, ಲಸ್ಸಿ, ಐಸ್‌ಕ್ರೀಂ ಉತ್ಪನ್ನಗಳ ಉತ್ಪಾದನೆ ಹೆಚ್ಚಿಸಿದೆ.

ರಾಜ್ಯದಲ್ಲಿ ಈ ಹಿಂದೆ 4 ಲಕ್ಷ 50 ಸಾವಿರ ಕೆ.ಜಿ ಉತ್ಪಾದಿಸುತ್ತಿದ್ದ ನಂದಿನಿ ಮೊಸರು ಇದೀಗ 6 ಲಕ್ಷ ಕೆ.ಜಿ.ಗೆ ಹೆಚ್ಚಿಸಲಾಗಿದೆ. ಪ್ರತಿನಿತ್ಯ 50 ಸಾವಿರ ಲೀಟರ್‌ (2 ಲಕ್ಷ ಪ್ಯಾಕೆಟ್‌) ಮಜ್ಜಿಗೆ ಸರಬರಾಜು ಮಾಡಲಾಗುತ್ತಿತ್ತು. ಇದೀಗ 75 ಸಾವಿರ ಲೀಟರ್‌ಗೆ ಹೆಚ್ಚಿಸಿದ್ದು, ಪ್ರತಿನಿತ್ಯ 3ರಿಂದ 4 ಲಕ್ಷ ಪ್ಯಾಕೆಟ್‌ ಮಜ್ಜಿಗೆ ಮಾರಾಟವಾಗುತ್ತಿದೆ. ಲಸ್ಸಿ 20 ಸಾವಿರ ಲೀಟರ್‌ (1 ಲಕ್ಷ ಪ್ಯಾಕೆಟ್‌)ನಿಂದ 40 ಸಾವಿರ ಲೀಟರ್‌ಗೆ ಹೆಚ್ಚಿಸಿದೆ.

ಕನಿಷ್ಠ 5 ರು.ನಿಂದ 25 ರು.ವರೆಗಿನ ಐಸ್‌ಕ್ರೀಂಗೆ ಬಹುಬೇಡಿಕೆ ಇದೆ. ಸದ್ಯ ಒಟ್ಟಾರೆ 15 ಸಾವಿರ ಲೀಟರ್‌ನಿಂದ 25 ಸಾವಿರ ಲೀಟರ್‌ಗೆ ಐಸ್‌ಕ್ರೀಂ ತಯಾರಿಕೆ ಹೆಚ್ಚಿಸಲಾಗಿದೆ. ಕೆಎಂಎಫ್‌ನ ಉತ್ಪನ್ನದ ಪೈಕಿ ಶೇ.80ರಷ್ಟುಮೊಸರು, ಐಸ್‌ಕ್ರೀಂ, ಮಜ್ಜಿಗೆ ಬೆಂಗಳೂರು ನಗರಕ್ಕೆ ಸರಬರಾಜಾಗುತ್ತದೆ.

ರಾಜ್ಯದ ಒಟ್ಟಾರೆ ಉತ್ಪಾದನೆಯಲ್ಲಿ 2.5 ಲಕ್ಷ ಕೆ.ಜಿ. ಮೊಸರು, 15 ಸಾವಿರ ಲೀಟರ್‌ ಐಸ್‌ಕ್ರೀಂ ಬೆಂಗಳೂರು ನಗರದಲ್ಲಿ ಮಾರಾಟವಾಗುತ್ತದೆ. ಬಿಸಿಲಿನ ಪ್ರಕರತೆ ಹೆಚ್ಚಿರುವುದರಿಂದ ಪ್ರತಿನಿತ್ಯ ಒಂದೂವರೆ ಕೆ.ಜಿ.ಗೂ ಹೆಚ್ಚಿನ ಪ್ರಮಾಣದಲ್ಲಿ ಮೊಸರು ಉತ್ಪಾದಿಸಲಾಗುತ್ತಿದೆ.

ಮುಂದಿನ ದಿನಗಳಲ್ಲಿ ಒಂದು ಲಕ್ಷ ಕೆ.ಜಿ. ಮೊಸರಿಗೆ ಬೇಡಿಕೆ ಬರುವ ನಿರೀಕ್ಷೆ ಇದೆ. ಹಾಸನದಲ್ಲೂ ಹೊಸ ಪ್ಲಾಂಟ್‌ ಸ್ಥಾಪನೆಯಾಗಿದೆ. ಹಾಗಾಗಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ಹಾಲಿನ ಉತ್ಪನ್ನಗಳನ್ನು ಪೂರೈಸಲು ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಕೆಎಂಎಫ್‌ ಮಾರುಕಟ್ಟೆವಿಭಾಗದ ನಿರ್ದೇಶಕರಾದ ಎಂ.ಟಿ.ಕುಲಕರ್ಣಿ ತಿಳಿಸಿದರು.

- ಕಾವೇರಿ ಎಸ್. ಎಸ್ 
 

click me!