ಗರ್ಭಿಣಿಯೇ ಅಲ್ಲದ ಮಹಿಳೆಗೆ ಸಿಸೇರಿಯನ್‌ ಮಾಡಿದ ವೈದ್ಯೆ!

By Web DeskFirst Published Mar 13, 2019, 8:42 AM IST
Highlights

ಗರ್ಭಿಣಿಯೇ ಅಲ್ಲದ ಮಹಿಳೆಗೆ ಸಿಸೇರಿಯನ್‌ ಮಾಡಿದ ವೈದ್ಯೆ!  ತೀವ್ರ ರಕ್ತಸ್ರಾವದಿಂದ ಮಹಿಳೆ ಸಾವು | ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಎಡವಟ್ಟು

ಚಿಕ್ಕಬಳ್ಳಾಪುರ (ಮಾ. 13):  ಹೊಟ್ಟೆನೋವು ಎಂದು ಆಸ್ಪತ್ರೆಗೆ ದಾಖಲಾದ ಮಹಿಳೆಯನ್ನು ಗರ್ಭಿಣಿ ಎಂದು ತಪ್ಪಾಗಿ ಭಾವಿಸಿ ಸಿಸೇರಿಯನ್‌ ಮಾಡಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಈ ವೇಳೆ ತೀವ್ರ ರಕ್ತಸ್ರಾವವಾದ್ದರಿಂದ ಮಹಿಳೆ ಮೃತಪಟ್ಟಿದ್ದಾಳೆ. ವೈದ್ಯರ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಜಿಲ್ಲಾಸ್ಪತ್ರೆ ಮುಂದೆ ಸಂಬಂಧಿಕರು ಮಹಿಳೆಯ ಶವದೊಂದಿಗೆ ಪ್ರತಿಭಟನೆ ನಡೆಸಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್‌ ಹೋಬಳಿಯ ಬಿಸ್ಸೇಗಾರಹಳ್ಳಿಯ ಮುನಿರತ್ನ(23) ಮೃತಪಟ್ಟಮಹಿಳೆ. ವಿವಾಹಿತೆಯಾಗಿರುವ ಈಕೆಗೆ ತೀವ್ರ ಹೊಟ್ಟೆನೋವು ಇತ್ತು. ವೈದ್ಯರನ್ನು ಕಾಣಲು ಮಾ.10ರಂದು ಈಕೆ ಜಿಲ್ಲಾಸ್ಪತ್ರೆಗೆ ಆಗಮಿಸಿದ್ದರು.

ಇವರ ನರಳಾಟ ಕಂಡ ವೈದ್ಯೆ ಡಾ. ರೇಣುಕಮ್ಮ ಎಂಬುವರು ಸ್ಕಾ್ಯನಿಂಗ್‌ ಮಾಡಿಸಿಕೊಂಡು ಬರುವಂತೆ ಖಾಸಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ‘ಹೊಟ್ಟೆಯಲ್ಲಿ ಮಗು ಅಡ್ಡ ತಿರುಗಿದೆ. ಹಾಗಾಗಿ ಕೂಡಲೇ ಸಿಸೇರಿಯನ್‌ ಮಾಡಿ ಮಗುವನ್ನು ಹೊರತೆಗೆಯಬೇಕು’ ಎಂದು ಸ್ಕಾ್ಯನಿಂಗ್‌ ಕೇಂದ್ರದವರು ವರದಿ ನೀಡಿದ್ದಾರೆ.

ವರದಿ ಪರಿಶೀಲಿಸಿದ ವೈದ್ಯೆ ರೇಣುಕಮ್ಮ ಕೂಡಲೇ ಮಹಿಳೆಗೆ ಶಸ್ತ್ರ ಚಿಕಿತ್ಸೆಗೆ ಮುಂದಾಗಿದ್ದಾರೆ. ಶಸ್ತ್ರ ಚಿಕಿತ್ಸೆ ನಂತರ ಹೊಟ್ಟೆಯಲ್ಲಿ ಮಗು ಇಲ್ಲ ಎಂಬುದು ಅರಿವಾಗಿದೆ. ಆದರೆ ಅದಾಗಲೇ ಮುನಿರತ್ನ ತೀವ್ರ ರಕ್ತಸ್ರಾವದಿಂದ ಅಸ್ವಸ್ಥರಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮಹಿಳೆಯನ್ನು ಬೆಂಗಳೂರಿನ ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ ಕರೆ ತರಲಾಗಿದ್ದು ಅಲ್ಲಿ ಮಹಿಳೆ ತೀವ್ರ ಅಸ್ವಸ್ಥರಾಗಿರುವ ಕಾರಣ ದಾಖಲು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ವಾಪಸ್‌ ಕಳುಹಿಸಿದ್ದಾರೆ.

ಇದರಿಂದ ಅನಿವಾರ್ಯವಾಗಿ ಮಹಿಳೆಯನ್ನು ಯಲಹಂಕದ ಖಾಸಗಿ ನರ್ಸಿಂಗ್‌ ಹೋಂನಲ್ಲಿ ದಾಖಲಿಸಲಾಗಿದೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಗ್ಗೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ ಎಂದು ಜಿಪಂ ಸದಸ್ಯ ಕೆ.ಸಿ. ರಾಜಾಕಾಂತ್‌ ಆರೋಪಿಸಿದ್ದಾರೆ. ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!