ನೋಟ್‌ಬ್ಯಾನ್‌ ವೇಳೆ ಡಿಕೆಶಿಯಿಂದ ಹಳೆ ನೋಟು ಅಕ್ರಮ ವಿನಿಮಯ!

By Web DeskFirst Published Mar 13, 2019, 8:54 AM IST
Highlights

ಡಿಕೆಶಿ ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಹಳೆಯ ನೋಟುಗಳ ಅಕ್ರಮ ವಿನಿಮಯ ಕಾರ್ಯದಲ್ಲಿ ಸಹ ಭಾಗಿಯಾಗಿದ್ದರು ಎಂದು ಇ ಡಿ ಹೈಕೋರ್ಟ್‌ಗೆ ತಿಳಿಸಿದೆ. 

ಬೆಂಗಳೂರು (ಮಾ. 13): ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹಾಗೂ ಇತರೆ ಆರೋಪಿಗಳು ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಹಳೆಯ ನೋಟುಗಳ ಅಕ್ರಮ ವಿನಿಮಯ ಕಾರ್ಯದಲ್ಲಿ ಸಹ ಭಾಗಿಯಾಗಿದ್ದರು ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಹೈಕೋರ್ಟ್‌ಗೆ ತಿಳಿಸಿದೆ.

ದೆಹಲಿಯಲ್ಲಿ ತಮಗೆ ಸೇರಿದ ಫ್ಲ್ಯಾಟ್‌, ಮನೆ ಹಾಗೂ ಬೆಂಗಳೂರಿನ ಹಲವೆಡೆ ನಡೆದ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಇ.ಡಿ. ಜಾರಿಗೊಳಿಸಿರುವ ಸಮನ್ಸ್‌ ರದ್ದುಪಡಿಸುವಂತೆ ಕೋರಿ ಸಚಿವ ಡಿ.ಕೆ.ಶಿವಕುಮಾರ್‌, ಅವರ ಆಪ್ತ ಸಚಿನ್‌ ನಾರಾಯಣ್‌ ಸೇರಿದಂತೆ ಐವರು ಆರೋಪಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿ ವಿಚಾರಣೆ ವೇಳೆ ಮಂಗಳವಾರ ಇಡಿ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ ಅವರು ವಾದ ಮುಂದುವರಿಸಿ, ಸಚಿವ ಡಿ.ಕೆ.ಶಿವಕುಮಾರ್‌ ಸೇರಿ ಪ್ರಕರಣದ ಇತರೆ ಆರೋಪಿಗಳು ಹಣ ದುರ್ಬಳಕೆ ಪ್ರಕರಣದಲ್ಲಿ ಭಾಗಿಯಾಗಿದ್ದರು. ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಹಳೆಯ ನೋಟುಗಳ ಅಕ್ರಮ ವಿನಿಮಯ ಕಾರ್ಯದಲ್ಲಿಯೂ ಭಾಗಿಯಾಗಿದ್ದರು ಎಂದು ತಿಳಿಸಿದರು.

ಅಲ್ಲದೆ, ಅವರ ವಿರುದ್ಧ ಹಣ ದುರ್ಬಳಕೆ ತಡೆ ಕಾಯ್ದೆ ಅಡಿ ತನಿಖೆ ನಡೆಸಲಾಗುತ್ತಿದೆ. ಸದ್ಯ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 120(ಬಿ) ಅಡಿ ಅಪರಾಧಿಕ ಒಳಸಂಚು ಆರೋಪ ಹೊರಿಸಲಾಗಿದೆ. ಆ ಆರೋಪ ಹೊರಿಸಲು ಸಾಕಷ್ಟುಸಾಕ್ಷ್ಯಗಳಿವೆ. ತನಿಖೆಯ ವೇಳೆ ಇನ್ನೂ ಇತರೆ ಅಪರಾಧ ಕೃತ್ಯಗಳು ಬೆಳಕಿಗೆ ಬರಬಹುದು ಎಂದು ತಿಳಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಅರವಿಂದ ಕುಮಾರ್‌ ಅವರು, ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಆದಾಯ ತೆರಿಗೆ ದಾಳಿ ನಡೆಸಿದ ಎಲ್ಲ ಪ್ರಕರಣಗಳಲ್ಲೂ ಪಿಎಂಎಲ್‌ಎ (ಪ್ರಿವೆನ್ಷನ್‌ ಆಫ್‌ ಮನಿ ಲಾಂಡರಿಂಗ್‌ ಆಕ್ಟ್) ಅಡಿಯಲ್ಲಿ ಜಾರಿ ನಿರ್ದೇಶನಾಲಯ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳುತ್ತದೆಯೇ, ಅದಕ್ಕೆ ಕಾನೂನಿನಲ್ಲಿ ಅವಕಾಶವಿದೆಯೇ ಎಂದು ಪ್ರಶ್ನಿಸಿದರು.

ಆ ಕುರಿತು ಪರಿಶೀಲನೆ ನಡೆಸಿ ನ್ಯಾಯಾಲಯಕ್ಕೆ ಮಾಹಿತಿ ವರದಿ ನೀಡಲಾಗುವುದು ಎಂದು ಪ್ರಭುಲಿಂಗ ನಾವದಗಿ ತಿಳಿಸಿದರು. ನಂತರ ನ್ಯಾಯಪೀಠವು ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.

click me!