ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಕೇಂದ್ರಕ್ಕೆ ಶಿಫಾರಸು

By Suvara Web DeskFirst Published Jun 15, 2017, 1:57 PM IST
Highlights

ವೀರಶೈವ- ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ರಾಜ್ಯ ಸರ್ಕಾರವು ಸರ್ಕಾರಿ ಕಚೇರಿಗಳಲ್ಲಿ ಬಸವ​ಣ್ಣನ ​ಭಾವಚಿತ್ರ, ಕಲಬುರಗಿ ವಿವಿಗೆ ಜಗಜ್ಯೋತಿ ಬಸ​ವಣ್ಣ ಹಾಗೂ ಬಿಜಾಪುರ ವಿವಿಗೆ ಅಕ್ಕಮಹಾದೇವಿ ಹೆಸ​ರಿಟ್ಟಹಿನ್ನೆಲೆಯಲ್ಲಿ ತಮಗೆ ಅಭಿನಂದನೆ ಸಲ್ಲಿಸಲು ಬುಧವಾರ ಅಖಿಲ ಭಾರತ ವೀರಶೈವ ಮಹಾಸಭಾ ಆಯೋ​ಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೆಂಗಳೂರು: ವೀರಶೈವ- ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ರಾಜ್ಯ ಸರ್ಕಾರವು ಸರ್ಕಾರಿ ಕಚೇರಿಗಳಲ್ಲಿ ಬಸವ​ಣ್ಣನ ​ಭಾವಚಿತ್ರ, ಕಲಬುರಗಿ ವಿವಿಗೆ ಜಗಜ್ಯೋತಿ ಬಸ​ವಣ್ಣ ಹಾಗೂ ಬಿಜಾಪುರ ವಿವಿಗೆ ಅಕ್ಕಮಹಾದೇವಿ ಹೆಸ​ರಿಟ್ಟಹಿನ್ನೆಲೆಯಲ್ಲಿ ತಮಗೆ ಅಭಿನಂದನೆ ಸಲ್ಲಿಸಲು ಬುಧವಾರ ಅಖಿಲ ಭಾರತ ವೀರಶೈವ ಮಹಾಸಭಾ ಆಯೋ​ಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Latest Videos

ವೀರಶೈವವನ್ನು ಸ್ವತಂತ್ರ ಧರ್ಮವೆಂದು ಘೋಷಿ​ಸಲು ರಾಜ್ಯ ಸರ್ಕಾರದ ಅಭ್ಯಂತರವಿಲ್ಲ. ಆದರೆ ಧರ್ಮ ಘೋಷಣೆ ಅಧಿಕಾರ ಕೇಂದ್ರ ಸರ್ಕಾರಕ್ಕಿದ್ದು, ಸಚಿವ ಸಂಪುಟದಲ್ಲಿ ಚರ್ಚಿಸಿ ರಾಜ್ಯ ಸರ್ಕಾರದಿಂದ ಶಿಫಾರಸು ಮಾಡುವುದಾಗಿ ತಿಳಿಸಿದರು.
ರಾಜಕಾರಣಕ್ಕಾಗಿ ಯಾವುದೇ ತೀರ್ಮಾನಗಳನ್ನು ಕೈಗೊಂ​ಡಿಲ್ಲ. ನಾಡಿನ ಶರಣರು ಪ್ರೇರಕ ಶಕ್ತಿಯಾಗ​ಬೇಕು. ಪ್ರತಿ ದಿನ ಶರಣರನ್ನು ನೆನೆಯಬೇಕೆಂಬ ಉದ್ದೇ​ಶ​ದಿಂದ ವಿವಿಗಳಿಗೆ ಶರಣರ ಹೆಸರು ನಾಮ​ಕರಣ ಮಾಡಲಾಗಿದೆ. ಈಗಾಗಲೇ ಶಿವಶರಣೆ ಹೇಮ​ರಡ್ಡಿ ಮಲ್ಲಮ್ಮ ಜಯಂತಿಯನ್ನು ಸರ್ಕಾರದಿಂದ ಆಚರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕೂಡ ಸರ್ಕಾರದಿಂದ ಆಚರಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಹೇಳಿದರು.

ಬಸವಣ್ಣನರ ಬಗ್ಗೆ ಅಪಾರ ಗೌರವ ಮತ್ತು ಶ್ರದ್ಧೆ ಇರುವುದರಿಂದಲೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಮುನ್ನವೇ ಬಸವಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದೇನೆ. ಇದು ಯಾರ ಮೆಚ್ಚುಗೆಗೂ ಮಾಡಿಲ್ಲ. ನಾನೊಬ್ಬ ಬಸವ ಅನು​ಯಾಯಿ, ಬಸವ ತತ್ವಕ್ಕೆ ಬದ್ಧನಾಗಿದ್ದೇನೆ. ರಾಜಕೀಯ ಪ್ರವೇಶ ಕೂಡ ಸಮಾಜವಾದಿ ಪಕ್ಷದಿಂದಲೇ ಆಗಿದೆ ಎಂದು ಹೇಳಿದರು. ದೇಶದಲ್ಲಿನ ಜಾತಿ ವ್ಯವಸ್ಥೆಯನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕಸುಬು ಆಧಾರದಲ್ಲಿ ರೂಪಿಸಿವೆ. ಇದು ಶ್ರೇಣೀಕೃತ ವ್ಯವಸ್ಥೆಯಲ್ಲಿ ಮೇಲು- ಕೀಳೆಂಬ ಭೇದ​ಭಾವ ಹುಟ್ಟುಹಾಕಿದೆ. ಬಸವಣ್ಣನವರು ಶ್ರೇಣೀಕೃತ ವ್ಯವಸ್ಥೆಯ ನಾಶ ಮಾಡಿ ಸಮ ಸಮಾಜ, ವೈಚಾರಿಕ​ತೆಯ ಕನಸು ಕಂಡಿದ್ದರು. ಕಂದಾಚಾರ, ಮೌಢ್ಯ, ಗೊಡ್ಡು ಸಂಪ್ರದಾಯಗಳನ್ನು ದೂರ ಮಾಡಬೇಕೆಂದು ಹೇಳಿದ್ದರು. ಈಗಲೂ ಕೆಲವು ಹಿತಾಸಕ್ತಿಗಳು ಜನರನ್ನು ಮತ್ತೆ ದಾಸರನ್ನಾಗಿಸಲು ಪ್ರಯತ್ನಿಸುತ್ತಿವೆ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿಮಾತನಾಡಿ, ಲಿಂಗಾಯತ ಧರ್ಮ ಹಿಂದುಳಿದಿದ್ದರೆ, ಅಪಚಾರವಾಗಿದ್ದರೆ ಅದು ಒಳ ಪಂಗಡಗಳಿಂದ ಮಾತ್ರ. ಹೀಗಾಗಿ ಎಲ್ಲ ಸಮಾಜದವನ್ನು ಒಂದುಗೂ​ಡಿಸ​ಬೇಕು. ಬಸವಣ್ಣನ ಸಮಾಜದವರಾಗಿ ಎಲ್ಲಾ ಸಮಾಜದವರನ್ನು ಒಗ್ಗೂಡಿಸುವ ಮತ್ತು ಸಮಾಜ​ದಲ್ಲಿನ ಅಂಕುಡೊಂಕುಗಳನ್ನು ಸರಿಪಡಿಸುವ ಕೆಲಸ​ವನ್ನು ಸ್ವಾಮೀಜಿಗಳು ಮಾಡಬೇಕು ಎಂದು ಮನವಿ ಮಾಡಿದರು. ಹಿಂದಿನ ಲಿಂಗಾಯತ ಮುಖ್ಯಮಂತ್ರಿ ಗಳು ಬಸವ​ಣ್ಣನ ಭಾವಚಿತ್ರವನ್ನು ಸರ್ಕಾರಿ ಕಚೇರಿ​ಗಳಲ್ಲಿ ಹಾಕುವ ಧೈರ್ಯ ಮಾಡಿರಲಿಲ್ಲ. ಸಿದ್ದರಾ​ಮಯ್ಯ​​ನವರು ಧೈರ್ಯ ಮಾಡಿರುವುದಕ್ಕೆ ಅಭಿನಂ​ದನೆ ಸಲ್ಲಿಸುತ್ತೇನೆ ಎಂದು ಹೇಳಿದರು.ಕಾರ್ಯ​ಕ್ರ​ಮದಲ್ಲಿ ಮಹಾಸಭಾ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ, ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅನೇಕ ಗಣ್ಯರು, ಸಚಿವರು ಹಾಜರಿದ್ದರು.

click me!