ಮಾಂಸ ರಫ್ತುದಾರರಿಗೆ ಗೋಶಾಲೆ ದನ ಪೂರೈಕೆ ಹುನ್ನಾರ: ಸುಬ್ಬಯ್ಯ

By Suvarna Web DeskFirst Published Jun 15, 2017, 1:26 PM IST
Highlights

ಜಾನುವಾರುಗಳ ಮಾರಾಟ ನಿಯಂತ್ರಣ ಕಾಯ್ದೆ ಜಾರಿಯ ಹಿಂದೆ ಗೋಶಾಲೆಗಳಲ್ಲಿರುವ ಗೋವುಗಳನ್ನು ಗೋ ಮಾಂಸ ರಫ್ತು ಮಾಡುವವರಿಗೆ ಉಚಿತವಾಗಿ ಸರಬರಾಜು ಮಾಡುವ ಹುನ್ನಾರ ಅಡಗಿದೆ ಎಂದು ಹಿರಿಯ ವಕೀಲ ಎ.ಕೆ. ಸುಬ್ಬಯ್ಯ ಗಂಭೀರವಾಗಿ ಆರೋಪಿಸಿದ್ದಾರೆ.

ಬೆಂಗಳೂರು: ಜಾನುವಾರುಗಳ ಮಾರಾಟ ನಿಯಂತ್ರಣ ಕಾಯ್ದೆ ಜಾರಿಯ ಹಿಂದೆ ಗೋಶಾಲೆಗಳಲ್ಲಿರುವ ಗೋವುಗಳನ್ನು ಗೋ ಮಾಂಸ ರಫ್ತು ಮಾಡುವವರಿಗೆ ಉಚಿತವಾಗಿ ಸರಬರಾಜು ಮಾಡುವ ಹುನ್ನಾರ ಅಡಗಿದೆ ಎಂದು ಹಿರಿಯ ವಕೀಲ ಎ.ಕೆ. ಸುಬ್ಬಯ್ಯ ಗಂಭೀರವಾಗಿ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಮುಖಂಡರೂ ಆದ ಎ.ಕೆ. ಸುಬ್ಬಯ್ಯ, ಗೋ ಶಾಲೆಗಳಿಗೆ ಹೋಗುತ್ತಿರುವ ದನಗಳು 3-4 ದಿನಗಳಲ್ಲಿ ಕಾಣೆಯಾಗುತ್ತಿವೆ. ಆದರೆ, ಆ ದನಗಳು ಏನಾಗುತ್ತಿವೆ ಎಂಬ ಖಚಿತ ಮಾಹಿತಿ ನೀಡುತ್ತಿಲ್ಲ. ಗೋಶಾಲೆಗೆ ಹೋಗುತ್ತಿರುವ ದನಗಳನ್ನು ಗೋಮಾಂಸ ರಪ್ತು ಮಾಡುವ ಕಂಪನಿಗಳಿಗೆ ನೀಡಲಾಗುತ್ತಿದೆ. ದೇಶದ ಹಲವಾರು ಗೋ ಶಾಲೆಗಳಲ್ಲಿ ಗೋ ಮಾಂಸ, ಮೂಳೆಯನ್ನು ಪುಡಿ ಮಾಡುವ ಹಾಗೂ ಮಿಶ್ರಣ ಮಾಡುವ ಯಂತ್ರಗಳಿವೆ ಎಂದು ಅವರು ದೂರಿದರು.

ಕಾಯ್ದೆ ಜಾರಿಯ ಮೂಲಕ ಪರೋಕ್ಷವಾಗಿ ರೈತನಿಗೆ ಸಾಕಲು ಸಾಧ್ಯವಿಲ್ಲದ ಗೋವುಗಳನ್ನು ಗೋಶಾಲೆಗೆ ಸೇರಿಸುವಂತೆ ಪ್ರೇರೇಪಿಸಲಾಗುತ್ತಿದೆ ಎಂದರು. ದೇಶದ ಗೋ ಶಾಲೆಗಳಲ್ಲಿ ಸರಿಯಾದ ಮೇವು, ನೀರಿಲ್ಲದೆ ಜಾನುವಾರುಗಳು ಮರಣ ಹೊಂದುತ್ತಿವೆ ಎಂದು ಹೇಳಿದರು.

ವೇದಿಕೆ ಅಧ್ಯಕ್ಷ ಕೆ.ಎಲ್‌. ಅಶೋಕ್‌ ಮಾತನಾಡಿ, ಕೇಂದ್ರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡುವ ಮೂಲಕ ರೈತರ ಆರ್ಥಿಕತೆ ಮೇಲೆ ಗದಾಪ್ರಹಾರ ಮಾಡಲು ಹೊರಟಿದೆ. ಮತ್ತೊಂದೆಡೆ ದಲಿತ, ಅಲ್ಪಸಂಖ್ಯಾತರ ಆಹಾರ ಹಕ್ಕನ್ನು ದಮನ ಮಾಡಲು ವ್ಯವಸ್ಥಿತ ಸಂಚು ರೂಪಿಸಲಾಗಿದೆ. ತಕ್ಷಣ ಕೇಂದ್ರ ಸರ್ಕಾರ ಕಾಯ್ದೆ ಹಿಂಪಡೆಯಬೇಕು ಹಾಗೂ ರಾಜ್ಯ ಸರ್ಕಾರ ಈ ಕಾಯ್ದೆ ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.

click me!